ಅರ್ಧಕ್ಕೇ ನಿಂತ ಹೊಸ ಮಾರುಕಟ್ಟೆ ಕಾಮಗಾರಿ: ತ್ರಿಶಂಕು ಸ್ಥಿತಿಯಲ್ಲಿ ಮೀನು ವರ್ತಕರು

ಶನಿವಾರ, ಏಪ್ರಿಲ್ 20, 2019
29 °C
ತಾತ್ಕಾಲಿಕ ಶೆಡ್‌ನಲ್ಲಿ ಜಾಗದ ಕೊರತೆ

ಅರ್ಧಕ್ಕೇ ನಿಂತ ಹೊಸ ಮಾರುಕಟ್ಟೆ ಕಾಮಗಾರಿ: ತ್ರಿಶಂಕು ಸ್ಥಿತಿಯಲ್ಲಿ ಮೀನು ವರ್ತಕರು

Published:
Updated:
Prajavani

ಕಾರವಾರ: ನಗರದ ಹೊರ ವಲಯದಲ್ಲಿರುವ ಮೀನು ಮಾರುಕಟ್ಟೆಯ ತಾತ್ಕಾಲಿಕ ಕಟ್ಟಡದ ಮುಂಭಾಗವನ್ನು ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ಭಾಗಶಃ ತೆರವು ಮಾಡಲಾಗಿದೆ. ಇತ್ತ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡ ಕಾಮಗಾರಿಗೆ ಪೂರ್ಣಗೊಂಡಿಲ್ಲ. ಇದರಿಂದ ಮೀನು ಮಾರಾಟಗಾರರ ಸ್ಥಿತಿ ತ್ರಿಶಂಕುವಿನಂತಾಗಿದೆ.

ಒಂದು ವರ್ಷದ ಅವಧಿಯಲ್ಲಿ ಹೊಸ ಕಟ್ಟಡ ನಿರ್ಮಾಣದ ಭರವಸೆಯೊಂದಿಗೆ 2016ರಲ್ಲಿ ಹಳೆಯ ಕಟ್ಟಡವನ್ನು ತೆರವು ಮಾಡಲಾಗಿತ್ತು. ಬಳಿಕ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿತ್ತು. ನಗರಸಭೆ ನೀಡಿದ್ದ ಭರವಸೆಯ ಅವಧಿ ಮುಗಿದಿದ್ದರೂ ಹೊಸ ಕಟ್ಟಡ ನಿರ್ಮಾಣವಾಗದಿರುವುದು ಮೀನು ವರ್ತಕರ ಅಸಮಾಧಾನಕ್ಕೆ ಕಾರಣವಾಗಿದೆ. 

‘ತಾತ್ಕಾಲಿಕ ಕಟ್ಟಡದಲ್ಲಿ ಕುಳಿತುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಇದರಿಂದ ನಮಗೂ ಗ್ರಾಹಕರಿಗೂ ಕಿರಿಕಿರಿಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಶೆಡ್‌ನ ಸಿಮೆಂಟ್ ಶೀಟ್ ವಿಪರೀತ ಬಿಸಿಯಾಗಿ ಅಲ್ಲಿರಲೂ ಅಲ್ಲ ಹೊರಗೆ ಬರಲೂ ಅಲ್ಲ ಎಂಬಂತಾಗುತ್ತಿದೆ. ಒಂದು ವರ್ಷದ ಒಳಗೆ ಹೊಸ ಕಟ್ಟಡ ನಿರ್ಮಿಸುವುದಾಗಿ ನೀಡಿದ್ದ ಭರವಸೆಯನ್ನು ನಾವು ನಂಬಿದ್ದೆವು. ಆದರೆ, ಅದು ಹುಸಿಯಾಯಿತು’ ಎಂದು ಮೀನು ಮಾರಾಟಗಾರರಾದ ಸುಶೀಲಾ ಬೇಸರಿಸುತ್ತಾರೆ.

ಹೊಸ ಕಟ್ಟಡಕ್ಕೆ 2017ರ ಕೊನೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು. ಒಟ್ಟು ₹ 4 ಕೋಟಿ ವೆಚ್ಚದ ಈ ಕಾಮಗಾರಿಗೆ 2018ರಲ್ಲಿ ಅಂದಿನ ಶಾಸಕ ಸತೀಶ ಸೈಲ್ ಭೂಮಿಪೂಜೆ ಮಾಡಿದ್ದರು. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದ್ದು, ಎರಡು ಅಂತಸ್ತುಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ನಂತರ ಯಾವುದೇ ಪ್ರಗತಿಯಾಗಿಲ್ಲ. 

ಹದ್ದುಗಳ ಕಾಟ: ಮೀನು ವ್ಯಾಪಾರಿಗಳಲ್ಲಿ ಮಹಿಳೆಯರೇ ಬಹುತೇಕರಿದ್ದಾರೆ. ತಾತ್ಕಾಲಿಕ ಮಾರುಕಟ್ಟೆಯ ಒಳಗೆ ಸೆಕೆಯಿಂದ, ಸ್ಥಳಾಭಾವದಿಂದ ಹೊರಗೆ ಕುಳಿತುಕೊಳ್ಳುತ್ತಾರೆ. ಆದರೆ, ಆಕಾಶದಲ್ಲಿ ಹಿಂಡು ಹಿಂಡಾಗಿ ಹಾರುತ್ತ ಬರುವ ಹದ್ದುಗಳು ಆತಂಕದ ವಾತಾವರಣ ಮೂಡಿಸುತ್ತಿವೆ. ಮೀನನ್ನು ಹಿಡಿಯಲು ಕಾಲು ಚಾಚಿ ಕೆಳಗೆ ಇಳಿಯುವ ಅವು, ಮಹಿಳೆಯರ ಹಾಗೂ ಗ್ರಾಹಕರ ಮೇಲೆ ದಾಳಿ ಮಾಡಿ ಗಾಯಗೊಳಿಸುವ ಅಪಾಯವಿದೆ ಎನ್ನುತ್ತಾರೆ ಗ್ರಾಹಕ ಸಂತೋಷ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !