ಮಂಗಳವಾರ, ಅಕ್ಟೋಬರ್ 20, 2020
21 °C
ಕರಾವಳಿಯ ಮೀನುಗಾರರಿಗೆ ಹೆಚ್ಚು ಸಹಕಾರಿಯಾದ ‘ಎಫ್.ಎಫ್.ಎಂ.ಎ’

ಆಳ ಸಮುದ್ರದ ಮಾಹಿತಿಗೆ ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸಮುದ್ರದಲ್ಲಿ ಮೀನು ಹೇರಳವಾಗಿರುವ ಪ್ರದೇಶ, ಮಳೆ, ಚಂಡಮಾರುತ, ಗಾಳಿಯ ವೇಗ, ಮಿಂಚಿನ ಬಗ್ಗೆ ಮಾಹಿತಿ ನೀಡುವ, ‘ಮೀನುಗಾರ ಸ್ನೇಹಿ ಮೊಬೈಲ್ ಅಪ್ಲಿಕೇಷನ್’ (ಎಫ್.ಎಫ್.ಎಂ.ಎ) ಈಗ ಮೀನುಗಾರ ವಲಯದಲ್ಲಿ ಪ್ರಸಿದ್ಧವಾಗುತ್ತಿದೆ. ಜಿಲ್ಲೆಯ ಕರಾವಳಿಯ ಕೆಲವೆಡೆ ಆ್ಯಪ್ ಬಳಕೆ ಕುರಿತು ತರಬೇತಿಯನ್ನೂ ನೀಡಲಾಗಿದೆ.

ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವು (ಎಂ.ಎಸ್.ಎಸ್.ಆರ್.ಎಫ್) 2016ರಲ್ಲಿ ಅಭಿವೃದ್ಧಿ ಪಡಿಸಿರುವ ಈ ಆ್ಯಂಡ್ರಾಯ್ಡ್ ಫೋನ್ ಆ್ಯ‍ಪ್, ಮೀನುಗಾರರಿಗೆ ಅತ್ಯಂತ ಸರಳವಾಗಿ ಮಾಹಿತಿಗಳನ್ನು ನೀಡುತ್ತದೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ಮೀನುಗಾರರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್) ಹಾಗೂ ಕೇಂದ್ರೀಯ ಮೀನುಗಾರಿಕೆ ಸಂಶೋಧನಾ ಕೇಂದ್ರ (ಸಿ.ಎಂ.ಎಫ್‍.ಆರ್‌.ಐ) ಮಾರ್ಗದರ್ಶನದಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಸಮುದ್ರ ಮಾಹಿತಿ ಮತ್ತು ಸೇವೆಗಳ ರಾಷ್ಟ್ರೀಯ ಕೇಂದ್ರ (ಇನ್ಕಾಯ್ಸ್) ಸಂಗ್ರಹಿಸುವ ಮಾಹಿತಿಗಳನ್ನು ಈ ಆ್ಯಪ್‌ಗೆ ಪೂರೈಸುತ್ತದೆ.

ದೇಶದ ಕರಾವಳಿ ರಾಜ್ಯಗಳ ಬಹುತೇಕ ಎಲ್ಲ ಭಾಷೆಗಳ ಮೂಲಕವೂ ಈ ಆ್ಯಪ್ ಸಂವಹನ ಮಾಡುತ್ತದೆ. ಕನ್ನಡ, ಮಲಯಾಳಂ, ಇಂಗ್ಲಿಷ್, ಮರಾಠಿ, ಬಂಗಾಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಾಹಿತಿಗಳು ಲಭ್ಯವಿವೆ.

‘ಈ ಆ್ಯಪ್ ಕುರಿತು ರಾಜ್ಯದ ಮೀನುಗಾರರಿಗೆ ಮಂಗಳೂರಿನ ಸಿ.ಎಂ.ಎಫ್‍.ಆರ್‌.ಐ ಕಚೇರಿ ಮೂಲಕ ಮಾಹಿತಿ ನೀಡಲಾಗುತ್ತದೆ. ಒಬ್ಬರು ಸಿಬ್ಬಂದಿ ಇದರ ಸಲುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ಆರು ತಿಂಗಳ ಹಿಂದೆಯೇ ಬೈತಖೋಲ್ ಮತ್ತು ಮಾಜಾಳಿಯಲ್ಲಿ ಮೀನುಗಾರರಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ’ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ ತಿಳಿಸಿದರು.

ಹೇಗೆ ಕೆಲಸ ಮಾಡುತ್ತದೆ?

ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗುವ ಮೀನುಗಾರರಿಗೆ ಜಿ.ಪಿ.ಎಸ್. ಆಧಾರದಲ್ಲಿ ಮಾಹಿತಿ ನೀಡುತ್ತದೆ. ಸಮುದ್ರ ಮತ್ತು ಆಕಾಶದ ಸದ್ಯದ ಪರಿಸ್ಥಿತಿಯ ಬಗ್ಗೆ ತಿಳಿಸುತ್ತದೆ. ಸಮುದ್ರದಲ್ಲಿ ಚಂಡಮಾರುತದಿಂದ ಉಂಟಾಗಿರುವ ಅಪಾಯಕಾರಿ ವಲಯ, ದೋಣಿಯಿಂದ ಮೀನಿನ ಗುಂಪು ಎಷ್ಟು ದೂರದಲ್ಲಿ ಮತ್ತು ಎಷ್ಟು ವೇಗದಲ್ಲಿ ಸಂಚರಿಸುತ್ತಿವೆ, ಸಮುದ್ರದ ಹವಾಮಾನ, ಅಲೆಗಳ ಎತ್ತರ, ಅಲೆಗಳ ವೇಗ, ಗಾಳಿಯ ವೇಗ ಹಾಗೂ ದಿಕ್ಕನ್ನು ಈ ಆ್ಯಪ್ ತಿಳಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು