ಮಸ್ಕತ್ ನಲ್ಲಿ ಉತ್ತರ ಕನ್ನಡದ ಮೀನುಗಾರರ ಬಂಧನ

7
ಸದ್ಯಕ್ಕೆ ಲಭ್ಯವಾಗದ ಮಾಹಿತಿ: ಜಿಲ್ಲಾಧಿಕಾರಿ

ಮಸ್ಕತ್ ನಲ್ಲಿ ಉತ್ತರ ಕನ್ನಡದ ಮೀನುಗಾರರ ಬಂಧನ

Published:
Updated:

ಕಾರವಾರ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಭಟ್ಕಳ, ಮಂಕಿ ಮೂಲದ 15 ಮೀನುಗಾರರನ್ನು ಮಸ್ಕತ್‌ನ ಸಿನಾವ್ ಎಂಬಲ್ಲಿ ತಿಂಗಳ ಹಿಂದೆ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಮುರ್ಡೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮೊಹಮ್ಮದ್ ಅನ್ಸಾರ್ ಬಾಪು, ನಯೀಮ್ ಭಾಂಡಿ, ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿಯ ಖಲೀಲ್ ಪಾನಿಬುಡು, ಉಸ್ಮಾನ್ ಇಸಾಕ್, ಅಬ್ದುಲ್ ಹುಸೇನ್, ಮುಹಮ್ಮದ್ ಬಾಪು, ಅಬ್ದುಲ್ಲಾ ಡಾಂಗಿ, ಕುಮಟಾದ ಅತಿಖ್ ಧಾರು, ಯಾಖೂಬ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಶಮ್ಸು, ಖಾಸಿಮ್ ಶೇಖ್ ಹಾಗೂ ಅಜ್ಮಲ್ ಶಮು ಬಂಧಿತ ಮೀನುಗಾರರು.

ಭಟ್ಕಳದ ಮಜ್ಲಿಸೆ ಇಸ್ಲಾಹ್- ವ- ತಂಝೀಮ್ ನ ಉಪಾಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿ, ‘ದುಬೈನಿಂದ 17ಕ್ಕೂ ಹೆಚ್ಚು ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಮೀನುಗಾರಿಕೆ ಮಾಡುತ್ತ ಎರಡು ತಿಂಗಳ ಹಿಂದೆ ಓಮನ್‌ ಗಡಿ ಸಮೀಪ ತೆರಳಿದ್ದಾರೆ. ಇದರಿಂದಾಗಿ ಅಲ್ಲಿನ ಸರ್ಕಾರ ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದೆ. ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರನ್ನು ಮರಳಿ ದುಬೈಗೆ ತೆರಳದಂತೆ ಸಮುದ್ರ ಮಧ್ಯದಲ್ಲೆ ನಿರ್ಬಂಧ ಹೇರಿದೆ’ ಎಂದು ತಿಳಿಸಿದ್ದಾರೆ.

‘ಈ ಬಗ್ಗೆ ಬಂಧಿತರು ನಮಗೆ ಕರೆ ಮಾಡಿ ತಿಳಿಸಿದ್ದಾರೆ. ಅವರನ್ನು ಮರಳಿ ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗುರುವಾರ ಭಟ್ಕಳ ಉಪವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ವಿದೇಶಾಂಗ ಇಲಾಖೆ ಅಧಿಕಾರಿಗಳ ಜತೆ ವಿಚಾರ ಚರ್ಚಿಸುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

ಅ.4ರಂದು ‘ಟೈಮ್ಸ್ ಆಫ್ ಓಮನ್’ ಪತ್ರಿಕೆಯು, ‘ಬಂಧಿತರು ಸಿನಾವ್ ಎಂಬಲ್ಲಿ ಮೀನುಗಾರಿಕೆಯ ಮೇಲೆ ನಿಷೇಧ ಹೇರಿದ್ದ ಸಂದರ್ಭ 800 ಕೆ.ಜಿ. ಕಿಂಗ್ ಫಿಶ್ ಅನ್ನು ಹಿಡಿದಿದ್ದರು ಎಂದು ಕೃಷಿ ಮತ್ತು ಮೀನುಗಾರಿಕೆ ಸಚಿವಾಲಯ ತಿಳಿಸಿದೆ’ ಎಂದು ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !