ಮೀನು ಮಾರಾಟ ಮಾಡಿ ಮಹಿಳೆಯರ ಪ್ರತಿಭಟನೆ

ಮಂಗಳವಾರ, ಜೂನ್ 25, 2019
25 °C
ನೂತನ ಮಾರುಕಟ್ಟೆ ನಿರ್ಮಾಣ ವಿಳಂಬ; 10 ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಅಧಿಕಾರಿಗಳು

ಮೀನು ಮಾರಾಟ ಮಾಡಿ ಮಹಿಳೆಯರ ಪ್ರತಿಭಟನೆ

Published:
Updated:
Prajavani

ಕಾರವಾರ: ನಗರದಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣ ವಿಳಂಬವಾಗಿರುವುದು ಮೀನು ಮಾರಟಗಾರ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ಗಾಂಧಿ ಮಾರುಕಟ್ಟೆಯಲ್ಲಿ ಸೋಮವಾರ ಮೀನು ವ್ಯಾಪಾರ ನಡೆಸಿ ವಿನೂತನವಾಗಿ ಪ್ರತಿಭಟಿಸಿದರು.

ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಕಡಲತೀರದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ಮಹಿಳೆಯರು ಪ್ರಸ್ತುತ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಹೊಸ ಮೀನು ಮಾರುಕಟ್ಟೆ ನಿರ್ಮಾಣದ ಕಾರಣವೊಡ್ಡಿ ಅವರನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಬಿಸಿಲಿನಲ್ಲಿ ಕೂರಲು ಸಾಧ್ಯವಾಗುವುದಿಲ್ಲ ಹಾಗೂ ಮಳೆಗಾಲದಲ್ಲಿ ನೀರು ಹರಿದು ಸಮಸ್ಯೆ ಉಂಟಾಗಲಿದೆ. ನೂತನ ಮೀನು ಮಾರುಕಟ್ಟೆಯಲ್ಲೇ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಹಿಳೆಯರು ಪ್ರತಿಭಟನೆ ನಡೆಸಿದರು.

‘ಹೊಸ ಮಾರುಕಟ್ಟೆ ನಿರ್ಮಾಣ ವಿಳಂಬವಾಗಿದೆ. ಮಳೆಗಾಲ ಆರಂಭವಾಗುವ ಮೊದಲು ಪರಿಹಾರ ಕಲ್ಪಿಸಬೇಕು. ನಿರ್ಮಾಣ ಹಂತದ ಹೊಸ ಮಾರುಕಟ್ಟೆಗೆ ನಮ್ಮನ್ನು ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಕೂಡ ಮಾಡಲಾಗಿತ್ತು. ಆದರೆ, ಈ ಸಂಬಂಧ ಜಿಲ್ಲಾಡಳಿತ ಅಥವಾ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇಂದಿನಿಂದ ಇಲ್ಲಿಯೇ ಕುಳಿತು ಮೀನು ಮಾರಾಟ ಮಾಡುತ್ತೇವೆ’ ಎಂದು ಮೀನು ಮಾರಾಟಗಾರ ಮಹಿಳೆಯರು ಪಟ್ಟು ಹಿಡಿದರು.

‘2017ರಲ್ಲಿ ಆರಂಭವಾದ ನೂತನ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಮಳೆಗಾಲದಲ್ಲಿ ಕಡಲತೀರದಲ್ಲಿ ಕುಳಿತು ವ್ಯಾಪಾರ ಮಾಡಲಾಗುವುದಿಲ್ಲ. ಮೀನನ್ನು ಕೊಳ್ಳುವವರಿಗೂ ಅಲ್ಲಿ ಸಮಸ್ಯೆ ಉಂಟಾಗುತ್ತದೆ. ನಗರಸಭೆಯ ಅಧಿಕಾರಿಗಳು ಬೇರೆ ಬೇರೆ ಊರುಗಳಿಂದ ಬಂದವರಿಗೆಲ್ಲ ನಗರದಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ, ಮೀನುಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಮೀನು ಮಾರಾಟ ಮಹಿಳೆಯರ ಸಂಘದ ಸುಶೀಲಾ ಹರಿಕಂತ್ರ ದೂರಿದರು.

ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಂ.ಮೋಹನರಾಜ್ ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದರು. ಶಾಸಕಿ ರೂಪಾಲಿ ನಾಯ್ಕ ಕೂಡ ಧಾವಿಸಿ, ನಿರ್ಮಾಣ ಹಂತದಲ್ಲಿರುವ ನೂತನ ಮಾರುಕಟ್ಟೆಯಲ್ಲಿ ಅಥವಾ ನಗರ ಭಾಗದಲ್ಲಿ ಬೇರೆ ಯಾವುದಾದರೂ ಜಾಗದಲ್ಲಿ ಮಾರಾಟಕ್ಕೆ ಅವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಮೋಹನರಾಜ್‌ ಅವರಿಗೆ ಸೂಚಿಸಿದರು.

‘10 ದಿನದಲ್ಲಿ ಸಮಸ್ಯೆ ಪರಿಹಾರ’: ಉಪವಿಭಾಗಾಧಿಕಾರಿ ಅಭಿಜಿನ್ ಬಿ. ಸ್ಥಳಕ್ಕೆ ಭೇಟಿ ನೀಡಿ, ‘ಮಾರುಕಟ್ಟೆ ನಿರ್ಮಾಣ ಸ್ಥಳದಲ್ಲಿರುವ ಕೆಲವು ಅಂಗಡಿಗಳನ್ನು ತೆರವು ಮಾಡುವ ಕುರಿತಾದ ಪ್ರಕರಣ ನ್ಯಾಯಾಲಯದಲ್ಲಿದೆ. ಮೇ 6ಕ್ಕೆ ಇದರ ವಿಚಾರಣೆ ಇದ್ದು, ತೀರ್ಪು ಬಂದ ಬಳಿಕ ಈ ಬಗ್ಗೆ ಪರಿಶೀಲಿಸಲಾಗುವುದು. ಇನ್ನು 10 ದಿನಗಳ ಒಳಗೆ ಸಮಸ್ಯೆ ಬಗೆಹರಿಸಿಕೊಡಲಾಗುವುದು’ ಎಂದು ಪ್ರತಿಭಟನಾಕಾರರನ್ನು ಸಮಾಧಾನಿಸಿದರು.

ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಕೂಡ ಪ್ರತಿಭಟನಾ ಸ್ಥಳಕ್ಕೆ ಬಂದು, ‘ಇಲ್ಲಿಯೇ ಮೀನು ಮಾರಾಟ ಮಾಡಿ’ ಎಂದು ಬೆಂಬಲ ನೀಡಿದರು. ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಅಧ್ಯಕ್ಷ ಗಣಪತಿ ಉಳ್ವೇಕರ್, ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ ಸ್ಥಳದಲ್ಲಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !