ಶುಕ್ರವಾರ, ಡಿಸೆಂಬರ್ 6, 2019
20 °C
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮೀನುಗಾರ ಮಹಿಳೆಯರ ಆಕ್ರೋಶ

‘ಮೀನು ಮಾರುಕಟ್ಟೆ: ನಗರಸಭೆ ದ್ವಿಮುಖ ನೀತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಗರಸಭೆ ಅಧಿಕಾರಿಗಳು ನ್ಯಾಯಾಲಯಕ್ಕೊಂದು ಹಾಗೂ ಮೀನುಗಾರರಿಗೆ ಇನ್ನೊಂದು ಪತ್ರ ನೀಡಿ, ಮೋಸ ಮಾಡಲು ಹೊರಟಿದ್ದಾರೆ. ಮೀನು ಮಾರುಕಟ್ಟೆ ನಿರ್ಮಾಣದಲ್ಲಿ ಅಧಿಕಾರಿಗಳು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ’  ಎಂದು ಆರೋಪಿಸಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡ ಸತೀಶ ಸೈಲ್ ನೇತೃತ್ವದಲ್ಲಿ ಮೀನುಗಾರ ಮಹಿಳೆಯರು, ಮುಖಂಡರು ಒಟ್ಟು ಸೇರಿದರು. ನಗರಸಭೆ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಪಿ.ನಾಯ್ಕ ವಿರುದ್ಧ ಘೋಷಣೆ ಕೂಗಿದರು.

ನೂತನ ಮೀನು ಮಾರುಕಟ್ಟೆ ನಿರ್ಮಾಣವಾಗಲಿರುವ ಸ್ಥಳದಲ್ಲಿ ಇರುವ ಕೆಲ ಮಳಿಗೆಗಳ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಬಾಕಿ ಇದೆ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಸಮಸ್ಯೆ ಬಗೆಹರಿಸುವ ಸಂಬಂಧ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅಧ್ಯಕ್ಷತೆಯಲ್ಲಿ ಈಚೆಗೆ ನಗರಸಭೆ ಅಧಿಕಾರಿಗಳು, ಮೀನುಗಾರರ ಸಭೆ ನಡೆಸಲಾಗಿತ್ತು.

ಆ ಸಂದರ್ಭದಲ್ಲಿ, ‘ಮೀನು ಮಾರುಕಟ್ಟೆಯ ಇಡೀ ಕಟ್ಟಡದಲ್ಲಿ ಮೀನುಗಾರ ಮಹಿಳೆಯರಿಗೆ ಕೂರಲು ಅವಕಾಶ ಮಾಡಿಕೊಡಲಾಗುವುದು’ ಎಂದು ಬರೆಯಲಾದ ಪತ್ರವೊಂದನ್ನು ತೋರಿಸಲಾಗಿದೆ. ಆದರೆ, ನ್ಯಾಯಾಲಯದಲ್ಲಿ ನಗರಸಭೆಯಿಂದ ಬೇರೆಯದೇ ರೀತಿ ಇರುವ ಅಫಿಡವಿಟ್ ಸಲ್ಲಿಕೆಯಾಗಿದೆ. ಕಟ್ಟಡದ ಅರ್ಧ ಭಾಗ ಮಾತ್ರ ಮೀನುಗಾರರ ಮಹಿಳೆಯರಿಗೆ ಹಾಗೂ ಇನ್ನರ್ಧ ವಾಣಿಜ್ಯ ಮಳಿಗೆಗಳಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ. ನಗರಸಭೆ ಅಧಿಕಾರಿಗಳು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

ಸ್ಥಳಕ್ಕೆ ಬಂದ ಎಂಜಿನಿಯರ್ ಆರ್.ಪಿ.ನಾಯ್ಕ, ‘ಇದು ನಮಗೆ ಸಂಬಂಧಿಸಿದ್ದಲ್ಲ. ನಗರಸಭೆ ಅಧಿಕಾರಿಗಳಿಗೆ ಸಂಬಂಧಿಸಿದ್ದು’ ಎಂದರು. ನಗರಸಭೆ ಕಾರ್ಯ ನಿರ್ವಾಹಕ ಎಂಜಿನಿಯರ್ ಮೋಹನರಾಜ್ ಪ್ರತಿಕ್ರಿಯಿಸಿ, ಮುಂದಿನವಾರ ಈ ಸಂಬಂಧ ಸಭೆ ಆಯೋಜಿಸಿ ಚರ್ಚಿಸುವ ಭರವಸೆ ನೀಡಿದರು.

ರಾಜು ತಾಂಡೇಲ, ರಾಜೇಶ ಮಾಜಾಳಿಕರ್, ಸುಶೀಲಾ ಹರಿಕಂತ್ರ ಚೇತನ ಹರಿಕಂತ್ರ, ವಿನಾಯಕ ಹರಿಕಂತ್ರ ಸೇರಿದಂತೆ ನೂರಾರು ಮೀನುಗಾರರು ಹಾಗೂ ಮೀನು ಮಾರಾಟಗಾರರು ಇದ್ದರು.

ಬಂದರು ವಿಸ್ತರಣೆಗೆ ಆಕ್ರೋಶ: ಬೈತಖೋಲ್ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಅಲೆ ತಡೆಗೋಡೆ ಕಾಮಗಾರಿ ಕೈಬಿಡುವಂತೆ ಮೀನುಗಾರ ಮಹಿಳೆಯರು ಸೋಮವಾರ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. 

ಈ ಕಾಮಗಾರಿಯಿಂದ ಮೀನುಗಾರರ ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ ಬರುತ್ತದೆ. ಕಡಲ ತೀರ ನಾಶವಾಗುತ್ತದೆ. ಹಾಗಾಗಿ ಈ ಯೋಜನೆ ಬೇಡ ಎಂದರು. 

ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮೀನುಗಾರ ಮಹಿಳೆಯರಿಗೆ ಬೆಂಬಲ ನೀಡಿ ಮಾತನಾಡಿದರು. ನಂತರ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಮೀನುಗಾರರ ಮುಖಂಡರಾದ ಕೆ.ಟಿ.ತಾಂಡೇಲ, ರೇಷ್ಮಾ ಮಾಳ್ಸೇಕರ್ ಇದ್ದರು.

ಪ್ರತಿಕ್ರಿಯಿಸಿ (+)