ಗುರುವಾರ , ನವೆಂಬರ್ 21, 2019
26 °C

ಮೀನುಗಾರರ ಸಾಲಮನ್ನಾ ಮಾಡಲು ಆಗ್ರಹ

Published:
Updated:

ಕಾರವಾರ: ‘ಈ ಬಾರಿ ಪ್ರಕೃತಿ ವಿಕೋಪದಿಂದ ಮೀನುಗಾರಿಕೆಗೆ ಹೋಗಲು ಸಾಧ್ಯವಾಗದೇ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರೈತರ ಮಾದರಿಯಲ್ಲೇ ಮೀನುಗಾರರ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೇ ಸಾಲ ಮರುಪಾವತಿ ಮಾಡದವರ ಆಸ್ತಿಯನ್ನು ಮುಟ್ಟುಗೋಲು ಹಾಕುವುದನ್ನು ತಡೆಯಬೇಕು’ ಎಂದು ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಗಣಪತಿ ಮಾಂಗ್ರೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್‌ನಿಂದ ಸಾಲ ಪಡೆಯುವಾಗ ಜಾಮೀನಿಗೆ ಸಹಿ ಹಾಕಿದವರ ಆಸ್ತಿ ಮುಟ್ಟುಗೋಲಿಗೂ ಸಿದ್ಧತೆ ನಡೆದಿದೆ. ಬ್ಯಾಂಕ್‌ಗಳು ಸಾಲ ಪಡೆದ ಮೀನುಗಾರರ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿವೆ. ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಕೂಡಲೇ ಮಧ್ಯಪ್ರವೇಶಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು. 

‘ಕಳೆದ ವರ್ಷ ನವೆಂಬರ್‌ನಿಂದ ಈ ವರ್ಷ ನವೆಂಬರ್‌ವರೆಗೆ ಒಂದು ವರ್ಷದ ಅವಧಿಯಲ್ಲಿ ಬೆರಳೆಣಿಕೆಯ ದಿನಗಳಲ್ಲಿ ಮಾತ್ರ ಮೀನುಗಾರಿಕೆಗೆ ಹೋಗಲಾಗಿದೆ. ಮೀನುಗಾರರಿಗೆ ಆದಾಯ ಸಿಗದೇ ಬದುಕು ದುಸ್ತರವಾಗಿದೆ. ಸಾಲಮನ್ನಾ ಮಾಡಲು ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೌಖಿಕ ಸೂಚನೆ ನೀಡಿದ್ದರು. ಈ ಬಗ್ಗೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಲ ಸಿಗುತ್ತಿಲ್ಲ’: ‘ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತವಾಗಿ ₹ 50 ಸಾವಿರ ಸಾಲ ಕೊಡಲು ಸರ್ಕಾರ ಬ್ಯಾಂಕ್‌ಗಳಿಗೆ ಆದೇಶಿಸಿದೆ. ಆದರೆ, ಅದರ ಪಾಲನೆಯೇ ಆಗುತ್ತಿಲ್ಲ. ಮಹಿಳೆಯರು ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ಸಾಲ ಮಂಜೂರಾಗುತ್ತಿಲ್ಲ. ಇನ್ನೊಂದೆಡೆ ಮೀನುಗಾರರ ಸಹಕಾರ ಸಂಘಗಳು ಮುಳುಗುವ ಹಂತಕ್ಕೆ ಬಂದಿವೆ. ಹಾಗಾಗಿ ಸಾಲಮನ್ನಾ ಮಾಡುವ ಮೂಲಕ ಅವುಗಳನ್ನು ಉಳಿಸಬೇಕು’ ಎಂದು ಗಣಪತಿ ಮಾಂಗ್ರೆ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಪ್ರಮುಖರಾದ ಮೋಹಿನಿ ಅಂಬಿಗ, ಸುಧಾಕರ ಹರಿಕಂತ್ರ, ರಾಮಚಂದ್ರ ಹೊಸ್ಕಟ್ಟ, ವಿಠ್ಠಲ ದೈಮನೆ, ರಮೇಶ ಖಾರ್ವಿ, ದಾಮೋದರ ಮೇಸ್ತ, ರಾಘವೇಂದ್ರ ಜಾಧವ್, ಉಮೇಶ ಖಾರ್ವಿ, ಉಮೇಶ ಮೇಸ್ತ, ಅಶೋಕ ಅರ್ಗೇಕರ್, ರಾಜೇಶ್ ಎನ್ ಹರಿಕಂತ್ರ ಬೈಲೂರು ಇದ್ದರು.

ಪ್ರತಿಕ್ರಿಯಿಸಿ (+)