ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಅನ್ಯಾಯ: ದೆಹಲಿಯಲ್ಲಿ ಧರಣಿ

ಕಾರವಾರ: ರಾಷ್ಟ್ರೀಯ ಮೀನುಗಾರರ ಒಕ್ಕೂಟದ ಅಧ್ಯಕ್ಷ ಲಿಯೊ ಕೊಲೆಸೊ ಹೇಳಿಕೆ
Last Updated 17 ಜೂನ್ 2022, 16:07 IST
ಅಕ್ಷರ ಗಾತ್ರ

ಕಾರವಾರ: ‘ದೇಶದಾದ್ಯಂತ ಮೀನುಗಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಅಕ್ಟೋಬರ್‌ನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಹೂಡಲಾಗುವುದು. ನಮಗೆ ನ್ಯಾಯ ಬೇಕೆಂದು ಪ್ರಧಾನಿಯನ್ನು ಒತ್ತಾಯಿಸಲಾಗುವುದು’ ಎಂದು ರಾಷ್ಟ್ರೀಯ ಮೀನುಗಾರರ ಒಕ್ಕೂಟದ ಅಧ್ಯಕ್ಷ, ಗುಜರಾತ್‌ನ ಲಿಯೊ ಕೊಲೆಸೊ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ‘ಮೀನುಗಾರರ ಹೋರಾಟದ ಯಾತ್ರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರವು ದೇಶದ ಕರಾವಳಿಯ ಉದ್ದಗಲಕ್ಕೂ ವಾಣಿಜ್ಯ ಬಂದರುಗಳ ಅಭಿವೃದ್ಧಿಗೆ ಮುಂದಾಗಿದೆ. ಇದರಿಂದ ಸಾಮಾನ್ಯ ಜನರ ಬದುಕಿನ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ನಿಜವಾಗಿಯೂ ಚರ್ಚೆಯಾಗಬೇಕಿದೆ. ಕರಾವಳಿ ಪ್ರದೇಶದಲ್ಲಿ ಸರ್ಕಾರ ಮಾಡುತ್ತಿರುವ ಇಂಥ ಅನ್ಯಾಯಗಳು ಹೆಚ್ಚು ದಿನ ನಡೆಯುವುದಿಲ್ಲ’ ಎಂದರು.

‘ಅಂಡಮಾನ್ ನಿಕೋಬಾರ್‌ನಿಂದ ಒಳಗೊಂಡು ದೇಶದ ಇಡೀ ಕರಾವಳಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಸಂಬಂಧಿಸಿದ ರಾಜ್ಯಗಳ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಪತ್ರಗಳನ್ನು ಬರೆಯಲಿದ್ದೇವೆ’ ಎಂದು ಹೇಳಿದರು.

‘ದಶಕಗಳಿಂದ ಕಾಡಿನಲ್ಲಿ ವಾಸಿಸುತ್ತಿರುವವರಿಗೆ ಸರ್ಕಾರ ಹಕ್ಕುಪತ್ರ ನೀಡುತ್ತಿದೆ. ಅದೇ ರೀತಿ ತಲೆಮಾರುಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ನಮಗೂ ಮೀನುಗಾರಿಕೆಯ ಹಕ್ಕು ನೀಡಲಿ’ ಎಂದು ಒತ್ತಾಯಿಸಿದರು.

ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿ, ‘ಜಿಲ್ಲೆಯ 90 ಕಿ.ಮೀ. ವ್ಯಾಪ್ತಿಯಲ್ಲಿ ಸಾಗರಮಾಲಾದ ಎಂಟು ಯೋಜನೆಗಳು ಜಾರಿಯಾಗುತ್ತಿವೆ. ಒಂದು ನೌಕಾನೆಲೆಯ ಅಲೆ ತಡೆಗೋಡೆಯಿಂದ ಕಾರವಾರದಲ್ಲಿ ಕಡಲ್ಕೊರೆತ ಶುರುವಾಯಿತು. ಇನ್ನು ಇಡೀ ಜಿಲ್ಲೆಯ ಪರಿಸ್ಥಿತಿ ಏನಾದೀತು? ಸಾಂಪ್ರದಾಯಿಕ ಮೀನುಗಾರಿಕೆ ಸಾಧ್ಯವೇ ಆಗದು’ ಎಂದು ಪ್ರತಿಪಾದಿಸಿದರು.

‘ಬಂದರುಗಳ ಅಭಿವೃದ್ಧಿಯಿಂದ ಪ್ರವಾಸೋದ್ಯಮ, ಇತರ ಉದ್ಯಮಗಳಿಗೂ ಒಳಿತಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಅದಕ್ಕೆ ಬೇಕಾದ ಬಂಡವಾಳ ಮೀನುಗಾರರ ಬಳಿ ಎಲ್ಲಿದೆ? ನಾವು ಬಂಡವಾಳ ಹಾಕಿದವರ ಅಡಿಯಾಳಾಗಿ ಇರಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪೊಲೆನ್ಸಿಯೋಂ ಮಾತನಾಡಿ, ‘ಸಾಗರಾಮಾಲಾ ಯೋಜನೆಯಿಂದ ಕೇವಲ ಎರಡು ಮೂರು ಉದ್ಯಮಿಗಳಿಗೆ ಮಾತ್ರ ಲಾಭವೇ ಹೊರತು ದೇಶಕ್ಕಲ್ಲ. ಮಾಲಿನ್ಯದಂಥ ಪರಿಣಾಮಗಳು ಹೆಚ್ಚಾಗುವ ಯೋಜನೆಗಳು ಜಾರಿಯಾಗಬಾರದು’ ಎಂದರು.

ಒಕ್ಕೂಟದ ಉಪಾಧ್ಯಕ್ಷ ರಾಮಕೃಷ್ಣ ತಾಂಡೇಲ, ಸದಸ್ಯರಾದ ಮಹಾರಾಷ್ಟ್ರದ ಜ್ಯೋತಿ ಮೆಹೆರ್ ಹಾಗೂ ಉಜ್ವಲಾ ಪಾಟೀಲ, ಆಂಧ್ರದ ಲಕ್ಷ್ಮಿ, ವಿಷಯ ತಜ್ಞ ತಮಿಳುನಾಡಿನ ಶ್ರೀಧರ ರಾವ್ ಮಾತನಾಡಿದರು. ವಿಕಾಸ ತಾಂಡೇಲ ಕಾರ್ಯಕ್ರಮ ನಿರೂಪಿಸಿದರು.

*
ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ನ್ಯಾಯಾಲಯದಿಂದ ಮಧ್ಯಂತರ ತಡೆ ಸಿಕ್ಕಿದೆ ಎಂದ ಮಾತ್ರಕ್ಕೇ ಮೈಮರೆಯುವಂತಿಲ್ಲ. ಹೋರಾಟ ಮುಂದುವರಿಯಬೇಕು.
- ಲಿಯೊ ಕೊಲೆಸೊ, ಅಧ್ಯಕ್ಷ, ರಾಷ್ಟ್ರೀಯ ಮೀನುಗಾರರ ಒಕ್ಕೂಟ.

*
ಮೀನುಗಾರಿಕಾ ದೋಣಿ ಕಟ್ಟಲು ನಬಾರ್ಡ್‌ನಿಂದ ಧನಸಹಾಯ ಕೊಡಿ. ಮೀನುಗಾರಿಕೆಗೆ ತೊಂದರೆಯಾಗುವ ಯಾವುದೇ ಯೋಜನೆ ಬಂದರೂ ವಿರೋಧಿಸೋಣ
- ರಾಜು ತಾಂಡೇಲ, ಅಧ್ಯಕ್ಷ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಒಕ್ಕೂಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT