ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನಮ್ಮಿಂದ ತಪ್ಪಾಗಿಲ್ಲ ಎಂದರೂ ಕೇಳಲಿಲ್ಲ

ಇರಾನ್‌ನಲ್ಲಿ ಜೈಲು ಶಿಕ್ಷೆಯ ದಿನಗಳ ಕಹಿ ಅನುಭವ ಹಂಚಿಕೊಂಡ ಮೀನುಗಾರು
Last Updated 20 ಜನವರಿ 2019, 19:30 IST
ಅಕ್ಷರ ಗಾತ್ರ

ಕಾರವಾರ: ‘ಅವರ ಭಾಷೆ ನಮಗೆ ಅರ್ಥವಾಗ್ತಿರಲಿಲ್ಲ. ನಮ್ಮ ಮಾತು ಅವರಿಗೆ ತಿಳಿಯುತ್ತಿರಲಿಲ್ಲ. ನಾವು ದುಬೈ ಗಡಿ ದಾಟಿಲ್ಲ ಎಂದು ಹೇಳಿದರೂ ಕೇಳಲು ಅವರು ಸಿದ್ಧರಿರಲಿಲ್ಲ. ಅಂತೂ 70 ದಿನ ಜೈಲಿನಲ್ಲಿದ್ದು ಬಿಡುಗಡೆಯಾಗಿ ಬಂದೆವು...’

ಅಕ್ರಮವಾಗಿ ಇರಾನ್ ಗಡಿ ಪ್ರವೇಶ ಮಾಡಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಬಂಧಿತರಾಗಿ ಬಿಡುಗಡೆಯಾದ ಅಜ್ಮಲ್ ಶಮಾಲಿ ಇಷ್ಟು ಹೇಳಿ ನಿಟ್ಟುಸಿರು ಬಿಟ್ಟರು. ಕುಮಟಾ ತಾಲ್ಲೂಕಿನ ವನ್ನಳ್ಳಿಯವರಾದ ಅವರು ಹಾಗೂ ಇತರ ಆರು ಮೀನುಗಾರರು ಶುಕ್ರವಾರ ತವರು ಸೇರಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ದುಬೈನ ದೋಣಿ ಮಾಲೀಕರ ಜತೆ ನಾವುಕೆಲಸ ಮಾಡುತ್ತಿದ್ದೇವೆ. ನಮ್ಮ ದೋಣಿಯನ್ನು ಇರಾನ್ ಕಸ್ಟಮ್ಸ್ ಪೊಲೀಸರು ಮೊದಲೇ ವಶಕ್ಕೆ ಪಡೆದಿದ್ದರು. ಅಲ್ಲಿ ವಿಧಿಸಿದ ದಿಗ್ಬಂಧನ ಮತ್ತು ಜೈಲುಶಿಕ್ಷೆ ಸೇರಿ ಒಟ್ಟು ನಾಲ್ಕೂವರೆ ತಿಂಗಳನ್ನು ನಮ್ಮದಲ್ಲದ ತಪ್ಪಿಗೆ ಆತಂಕದಲ್ಲೇ ಕಳೆದೆವು’ ಎಂದರು.

‘ದುಬೈಯಿಂದ ಹೊರಟಿದ್ದ ನಾವು ಇರಾನ್‌ ಗಡಿಯಿಂದ ಮೂರು ನಾಟಿಕಲ್ ಮೈಲು ದೂರದಲ್ಲಿದ್ದೆವು. ಆದರೆ, ಗಡಿ ದಾಟಿದ್ದಾಗಿ ಸುಳ್ಳು ಹೇಳಿ ನಮ್ಮನ್ನು ಬಂಧಿಸಿದರು. ನಮ್ಮ ದೋಣಿಯನ್ನು ವಶಕ್ಕೆ ಪಡೆದು ತಲೆಗೆ ಪಿಸ್ತೂಲ್ ಹಿಡಿದರು. ನಮಗೆ ಬಹಳ ಹೆದರಿಕೆ ಆಯ್ತು. ಬಳಿಕ ನಮ್ಮನ್ನು ಇರಾನ್‌ನ ಕಿಶ್ ದ್ವೀಪದಲ್ಲಿಜೈಲಿಗೆ ಹಾಕಿದರು’ ಎಂದು ಅನುಭವಿಸಿದ ಸಂಕಷ್ಟ ವಿವರಿಸಿದರು.

ಮೊಬೈಲ್ ಕಿತ್ತುಕೊಂಡರು: ‘ಮನೆಮಂದಿಗೆ ವಿಚಾರ ತಿಳಿಸೋಣ ಎಂದರೆ ನಮ್ಮ ಬಳಿಯಿದ್ದ ಮೊಬೈಲ್ ಫೋನ್‌ ಅನ್ನೂ ಕಿತ್ತುಕೊಂಡಿದ್ದರು. ಆಗಒಂದಿಬ್ಬರು ಮೊಬೈಲ್‌ ಅನ್ನು ಅಡಗಿಸಿಟ್ಟುಕೊಂಡಿದ್ದರು. ಅದರಿಂದಲೇ ಮನೆಗೆ ಕದ್ದುಮುಚ್ಚಿ ಕರೆ ಮಾಡಿ ನಾವು ಕ್ಷೇಮವಾಗಿದ್ದೇವೆ ಎಂದು ತಿಳಿಸುತ್ತಿದ್ದೆವು’ ಎಂದು ಸಂದೇಶ ತಲುಪಿಸುತ್ತಿದ್ದ ರೀತಿಯನ್ನು ವಿವರಿಸಿದರು.

‘ನಾವೀಗ ಬಿಡುಗಡೆಯಾಗಿ ಬಂದಿರುವುದು ಮನೆಯಲ್ಲಿ ಸಂತಸ ತಂದಿದೆ. ಪತ್ನಿ, ಇಬ್ಬರು ಮಕ್ಕಳು ಸಂಭ್ರಮದಲ್ಲಿದ್ದಾರೆ’ ಎಂದು 31 ಹರೆಯದ ಅಜ್ಮಲ್ ಹೇಳಿದರು.

ಭಟ್ಕಳದ ಖಲೀಲ್ ಪಾನಿಬುಡೊ ಕೂಡ ಇದೇ ರೀತಿಯ ಅನುಭವ ಹಂಚಿಕೊಂಡರು. ‘ರಾತ್ರಿ ಸಮುದ್ರಕ್ಕೆ ಹೋಗಿದ್ದೆವು. ಮುಂಜಾನೆ ಸೂರ್ಯೋದಯಕ್ಕೂ ಮೊದಲೇ ನಮ್ಮನ್ನು ಬಂಧಿಸಿದ್ದರು. ಜೈಲಿನಲ್ಲಿ ನಮಗೆ ಊಟಕ್ಕೆ ಸಮಸ್ಯೆಯಾಯಿತು. ಅನ್ನ, ಸ್ವಲ್ಪ ಸಾರು ಕೊಡುತ್ತಿದ್ದರು’ ಎಂದು ಹೇಳಿದರು.

ದೇಶದ ರಾಯಭಾರ ಕಚೇರಿಯ ಅಧಿಕಾರಿಗಳು, ಜಮಾತ್ ಪ್ರತಿನಿಧಿಗಳು ಮತ್ತು ಹಲವರು ಶ್ರಮಿಸಿದ್ದಾರೆ ಎಂದು ಹೇಳಲು ಮರೆಯಲಿಲ್ಲ.

ಏಳು ಮಂದಿ ವಾಪಸ್:ಸದ್ಯ ಏಳು ಮೀನುಗಾರರು ಬಿಡುಗಡೆಯಾಗಿದ್ದು, ಇನ್ನೂ 11 ಮಂದಿ ಬಿಡುಗಡೆಯಾಗಬೇಕಿದೆ. ಕುಮಟಾ ತಾಲ್ಲೂಕಿನ ವನ್ನಳ್ಳಿಯ ಯಾಕುಬ್ ಇಸ್ಮಾಯಿಲ್ ಶಮಾಲಿ, ಅಜ್ಮಲ್, ಇನಾಯತ್, ಇಲಿಯಾಸ್ ಅಂಬಾಡಿ, ಬೆಟ್ಕುಳಿಯ ಇಲಿಯಾಸ್ ಖಾಸಿಂ, ಅಗ್ರಗೋಣದ ಖಾಸಿಂ ಶೇಖ್ ಹಾಗೂ ಭಟ್ಕಳದ ಜಾಮಿಯಾ ಅಬಾದ್‌ನ ಖಲೀಲ್ ಪಾನಿಬುಡೊತವರು ಸೇರಿದ್ದಾರೆ.

ಭಾಷೆಯ ತೊಡಕು: ‘ಇರಾನ್ ಪೊಲೀಸರಿಗೆ ಪರ್ಷಿಯನ್ ಭಾಷೆ ಬಿಟ್ಟರೆ ಮಾತ್ಯಾವ ಭಾಷೆಯೂ ಬರುತ್ತಿರಲಿಲ್ಲ. ನಾವು ನಿರಪರಾಧಿಗಳು ಎಂದು ತಿಳಿಸಲು ಇದರಿಂದ ಸ್ವಲ್ಪ ಅಡಚಣೆಯಾಯಿತು. ನಮ್ಮ ಜತೆಯಲ್ಲೇ ದುಬೈನವರೊಬ್ಬರಿದ್ದರು. ಅವರಿಗೆ ಅಲ್ಪಸ್ವಲ್ಪ ಪರ್ಷಿಯನ್ ಮಾತನಾಡಲು ಬರುತ್ತಿತ್ತು. ಆದರೆ, ಅವರೇನೇ ಹೇಳಿದರೂ ಪೊಲೀಸರು ಸುಳ್ಳು ಹೇಳುತ್ತಿದ್ದೀರಿ ಎಂದು ರೇಗಾಡುತ್ತಿದ್ದರು’ ಎಂದು ಅಜ್ಮಲ್ ನೆನಪಿಸಿಕೊಂಡರು.

ಪುನಃ ಹೋಗಲು ಮನಸ್ಸು: ‘ಈಗ ಎರಡು ತಿಂಗಳ ರಜೆಯಿದೆ. ಬಳಿಕ ಪುನಃ ದುಬೈಗೆ ಹೋಗುತ್ತೇನೆ. ಅಲ್ಲಿ ಕೆಲಸ ಸುಲಭ. ಯಾವುದೇ ಗೊಂದಲವಿಲ್ಲ. ಇರಾನ್‌ನಲ್ಲಿ ಹೀಗಾಯ್ತು ಎಂದ ಮಾತ್ರಕ್ಕೇ ಭಟ್ಕಳದಲ್ಲೇ ಉಳಿಯುವ ಯೋಚನೆಯಿಲ್ಲ’ ಎನ್ನುತ್ತಾರೆ ನಾಲ್ಕು ವರ್ಷಗಳಿಂದ ದುಬೈನಲ್ಲಿರುವ ಖಲೀಲ್ ಪಾನಿಬುಡೊ.

ಕುಮಟಾದ ಅಜ್ಮಲ್ ಮಾತ್ರ ಸ್ವಲ್ಪ ಹಿಂಜರಿಕೆ ವ್ಯಕ್ತಪಡಿಸಿದರು. ‘ಈಗ ನಾಲ್ಕು ತಿಂಗಳ ರಜೆಯಿದೆ. ಅದು ಮುಗಿದ ಬಳಿಕ ಯೋಚನೆ ಮಾಡಬೇಕು. ಹೆದರಿಕೆ ಆಗ್ತದೆ’ ಎಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT