ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಕೈಬಿಡುವುದನ್ನು ಬಿಟ್ಟು, ಪರಿಹಾರೋಪಾಯ ಸೂಚಿಸಿ: ಸಚಿವ ಹೆಬ್ಬಾರ

Last Updated 27 ಜೂನ್ 2021, 12:26 IST
ಅಕ್ಷರ ಗಾತ್ರ

ಯಲ್ಲಾಪುರ: ‘ಹೊನ್ನಾವರದ ಟೊಂಕಾದಲ್ಲಿ ಬಂದರು ನಿರ್ಮಾಣ ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಮೀನುಗಾರರ ಕುಟುಂಬಗಳು ಬೀದಿಗೆ ಬರಲು ಬಿಡುವುದಿಲ್ಲ. ಮುಂದಿನ ಹಂತದ ಸಭೆಯನ್ನು ಸ್ಥಳದಲ್ಲೇ ನಡೆಸಿ ಯೋಜನೆಯ ಕುರಿತು ತೀರ್ಮಾನಿಸಲಾಗುವುದು’ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಭರವಸೆ ನೀಡಿದ್ದಾರೆ.

ಬಂದರು ನಿರ್ಮಾಣ ವಿಚಾರದಲ್ಲಿ ಉಂಟಾಗಿರುವ ವಿವಾದದ ಕುರಿತು ಅವರು ಪಟ್ಟಣದಲ್ಲಿ ಭಾನುವಾರ ಮೀನುಗಾರರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಮಾತನಾಡಿದರು.

‘2009ರಲ್ಲಿ ಮಂಜೂರಾದ ಈ ಯೋಜನೆ ಅನೇಕ ಕಾರಣಗಳಿಂದಾಗಿ ಈಗ ಆರಂಭಗೊಂಡಿದೆ. ಮೀನುಗಾರರಿಗೆ ತೊಂದರೆ ನೀಡುವುದು ಸರ್ಕಾರದ ಉದ್ದೇಶವಲ್ಲ. ಜಿಲ್ಲೆಯಲ್ಲಿ ಅನೇಕ ಯೋಜನೆಗಳಿಂದ ನಿರಾಶ್ರಿತರಾದವರ ಹಿತ ಕಾಯ್ದುಕೊಳ್ಳಲು ಸಫಲರಾಗಿಲ್ಲ ಎಂಬ ಅರಿವಿದೆ’ ಎಂದರು.

‘ಯೋಜನೆ ಕೈಬಿಡುವುದನ್ನು ಬಿಟ್ಟು, ನಿಮಗೆ ಆಗಬೇಕಾದ ಪರಿಹಾರೋಪಾಯಗಳನ್ನು ಸೂಚಿಸಿ. ಇವತ್ತು ನೀವು ಆಡಿದ ಮಾತಿಗೆ ಬದ್ಧರಾಗಿರದಿದ್ದರೂ ನಾವು ಬದ್ಧರಾಗಿರುತ್ತೇವೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೀನುಗಾರರ ಮುಖಂಡರು, ಸ್ಥಳಕ್ಕೆ ಬಂದು ವಾಸ್ತವಿಕತೆಯ ಪರಿಶೀಲಿಸಿ ಯೋಜನೆ ಮುಂದುವರಿಸಲು ಆಗ್ರಹಿಸಿದರು.

ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಚಂದ್ರಕಾಂತ ಕುಚರೇಕರ್ ಮಾತನಾಡಿ, ‘ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆಗೆ ಅನುಮತಿ ನೀಡಲಾಗಿದೆ. ನ್ಯಾಯಾಲಯ ತಡೆಯಾಜ್ಞೆ ನೀಡಿದರೂ ಅದರಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ವಾರಾಂತ್ಯದ ಲಾಕ್‌ಡೌನ್ ಇರುವಾಗಲೇ ಮೀನುಗಾರರ ಮನೆ ಕೆಡವಲಾಗಿದೆ’ ಎಂದು ದೂರಿದರು.

‘ಪತ್ರಕ್ಕೆ ಸ್ಪಷ್ಟನೆ ಬರಲಿಲ್ಲ’: ‘ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ ತೊಂದರೆಯಾಗದು ಎಂದು ಲಿಖಿತ ಪತ್ರ ನೀಡುವಂತೆ ಪತ್ರ ಬರೆದು ವಿನಂತಿಸಿದ್ದೆವು. ಆದರೆ, ಯಾವುದೇ ಸ್ಪಷ್ಟನೆ ಬರಲಿಲ್ಲ. ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಮೀನುಗಾರರ ಕುಟುಂಬಗಳು ಬೀದಿಗೆ ಬಾರದಂತಿದ್ದರೆ ಯೋಜನೆಯನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮನ್ನು ಕತ್ತಲಲ್ಲಿಟ್ಟು ಯೋಜನೆಯನ್ನು ಯಾಕೆ ರೂಪಿಸುತ್ತಿದ್ದಾರೆ’ ಎಂದು ಚಂದ್ರಕಾಂತ ಕುಚರೇಕರ್ ಪ್ರಶ್ನಿಸಿದರು.

ಹೊನ್ನಾವರ ಬೋಟ್ ಮಾಲೀಕರ ಸಂಘದ ಕಾರ್ಯದರ್ಶಿ ಮಾತನಾಡಿ, ‘ಯೋಜನೆ ಕೈ ಬಿಡಿ ಎಂಬ ಮಾತನ್ನು ಹೇಳಲೇಬಾರದು ಎಂದಾದರೆ ಚರ್ಚೆಗೆ ಕರೆದಿರುವುದು ಯಾಕೆ? ಈ ರೀತಿ ಬಂದರು ನಿರ್ಮಿಸುತ್ತಾ ಹೋದರೆ ಮೀನುಗಾರರೇ ಬೇಕಾಗಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಅಂದಿನ ಸ್ಥಿತಿಯೇ ಬೇರೆ ಇಂದಿನ ಸ್ಥಿತಿಯೇ ಬೇರೆ. ಯೋಜನೆಯಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತವೆ. ಯೋಜನೆ ರೂಪಿಸುವುದಾದರೆ ನಮ್ಮ ಹೆಣದ ಮೇಲೆ ಮಾಡಿ’ ಎಂದು ಆಕ್ರೋಶದಿಂದ ಹೇಳಿದರು.

ಬಂದರು ಪ್ರಾಧಿಕಾರದ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಖಾಸಗಿ ಬಂದರು ಯೋಜನೆಯ ರೂಪರೇಷೆಗಳನ್ನು ವಿವರಿಸಿದರು. ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿದರು.

ಭಟ್ಕಳ ಶಾಸಕ ಸುನೀಲ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಭಟ್ಕಳ ಡಿ.ಎಸ್ಪಿ ಬೆಳ್ಳಿಯಪ್ಪ, ಹೊನ್ನಾವರ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಧರ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಹೊನ್ನಾವರ ತಹಶೀಲ್ದಾರ್ ವಿವೇಕ ಶೇಣ್ವಿ, ಹೊನ್ನಾವರ ಫೋರ್ಟ್ ಕಂಪನಿಯ ಯೋಜನಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT