ಮಂಗಳವಾರ, ಡಿಸೆಂಬರ್ 1, 2020
18 °C

‘ಮತ್ಸ್ಯಕ್ಷಾಮ ಪೀಡಿತ ಪ್ರದೇಶ’ ಘೋಷಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ರಾಜ್ಯದ ಕರಾವಳಿಯಲ್ಲಿ ಎರಡು ವರ್ಷಗಳಿಂದ ಮೀನುಗಾರಿಕೆ ನಷ್ಟದಲ್ಲಿದೆ. ರಾಜ್ಯ ಸರ್ಕಾರವು ಮೂರೂ ಜಿಲ್ಲೆಗಳನ್ನು ಮತ್ಸ್ಯಕ್ಷಾಮ ಪೀಡಿತ ಪ್ರದೇಶವೆಂದು ಘೋಷಿಸಿ, ಮೀನುಗಾರರ ನೆರವಿಗೆ ಧಾವಿಸಬೇಕು’ ಎಂದು ಮೀನುಗಾರರ ರಾಷ್ಟ್ರೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಮ ಎಂ.ಮೊಗೇರ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎಲ್ಲ ರೀತಿಯ ಮೀನುಗಾರಿಕೆಗಳು ಸಂಕಷ್ಟದಲ್ಲಿವೆ. ಸಮುದ್ರದಲ್ಲಿ ಬಲೆಗೆ ಬೀಳುತ್ತಿರುವ ಮೀನಿನ ಸಂಖ್ಯೆ ಬಹಳ ಕಡಿಮೆಯಾಗಿದೆ. ಯಾಂತ್ರೀಕೃತ, ನಾಡದೋಣಿ, ಪಾತಿದೋಣಿ, ಬೀಡುಬಲೆ, ಪಟ್ಟೆಬಲೆ, ಮಾಠಬಲೆ ಮತ್ತು ಏಂಡಿ ಬಲೆ ಮಾದರಿಯ ಮೀನುಗಾರಿಕೆ ಸೊರಗಿವೆ. ಇವುಗಳನ್ನು ನಂಬಿರುವ ಮೀನುಗಾರರು, ದೋಣಿಗಳಲ್ಲಿ ಕೆಲಸ ಮಾಡುವ ಕಲಾಸಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

‘ಲಾಕ್‌ಡೌನ್ ಕಾರಣದಿಂದ ಮೀನುಗಾರರಿಗೆ ಆರು ತಿಂಗಳು ಆದಾಯವಿರಲಿಲ್ಲ. ಆ ಅವಧಿಗೆ ಪರಿಹಾರ ನೀಡಬೇಕು. ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲದ ಕಂತು ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು. ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿ ಪಡಿಸಬೇಕು. ಮೀನುಗಾರರ ಕುಟುಂಬಗಳ ಮಹಿಳೆಯರಿಗೆ ಬಡ್ಡಿ ರಹಿತವಾಗಿ ₹ 1 ಲಕ್ಷ ಸಾಲ ಕೊಡಬೇಕು. ನಾಡದೋಣಿಗಳಿಗೆ 400 ಲೀಟರ್ ಸೀಮೆಎಣ್ಣೆ ನೀಡಬೇಕು. ಕೆಲಸದಲ್ಲಿದ್ದಾಗ ಮೃತಪಟ್ಟ ಮೀನುಗಾರರ ಮೃತದೇಹ ಸಿಗದಿದ್ದರೂ ಅವರ ಕುಟುಂಬಗಳಿಗೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ‘ಮೀನುಗಾರರ ಸಮಸ್ಯೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡುವ ನಿರೀಕ್ಷೆಯಿದೆ’ ಎಂದರು.

ಈ ವೇಳೆ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ದಿನಕರ್ ಪಿ.ಬಿ, ವಿಠಲ ದಹಿಮನೆ, ಗಣಪತಿ ಹೊಳೆಗದ್ದೆ, ರಾಜು ಉಗ್ರಾಣಕರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು