ಕಾರವಾರ: ದೋಣಿಗಳ ದುರಸ್ತಿ ಕಾರ್ಯ ಚುರುಕು

ಬುಧವಾರ, ಜೂಲೈ 17, 2019
30 °C
ಆಗಸ್ಟ್‌ನಲ್ಲಿ ಕಡಲಿಗೆ ಇಳಿಯಲು ಸಜ್ಜಾಗುತ್ತಿರುವ ಮೀನುಗಾರರು

ಕಾರವಾರ: ದೋಣಿಗಳ ದುರಸ್ತಿ ಕಾರ್ಯ ಚುರುಕು

Published:
Updated:
Prajavani

ಕಾರವಾರ: ಆಳಸಮುದ್ರ ಮೀನುಗಾರಿಕೆಯ ಮೇಲೆ ಹೇರಿದ್ದ ಎರಡು ತಿಂಗಳ ನಿಷೇಧ ಜುಲೈ 31ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್‌ ತಿಂಗಳಿನಿಂದ ಮೀನುಗಾರಿಕೆ ಪುನರಾರಂಭಗೊಳ್ಳಲಿದ್ದು, ಕಡಲಿಗೆ ಇಳಿಯುವುದಕ‌್ಕೂ ಮುಂಚಿತವಾಗಿ ದೋಣಿ ಹಾಗೂ ಬಲೆಗಳ ದುರಸ್ತಿ ಕಾರ್ಯ ಚುರುಕು ಪಡೆದುಕೊಂಡಿದೆ.

ಪ್ರತಿ ವರ್ಷ ಜೂನ್ 1ರಿಂದ ಜುಲೈ 31ರ ವರೆಗೆ ಆಳಸಮುದ್ರದ ಮೀನುಗಾರಿಕೆಯ ಮೇಲೆ ಸರ್ಕಾರ ನಿಷೇಧ ಹೇರುತ್ತದೆ. ಮೀನುಗಳು ಈ ಸಮಯದಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ. ಈ ವೇಳೆ ಆಳ ಸಮುದ್ರ ಮೀನುಗಾರಿಕೆ ನಡೆಸಿದರೆ ಮತ್ಸ್ಯಸಂತತಿ ಮೇಲೆ ಪರಿಣಾಮ ಬೀರುವುದರಿಂದ 61 ದಿನಗಳವರೆಗೆ ನಿಷೇಧ ಹೇರಲಾಗುತ್ತದೆ.

ಈ ಅವಧಿಯಲ್ಲಿ ದೋಣಿಗಳ ಹಾಗೂ ಬಲೆಗಳ ದುರಸ್ತಿ, ದೋಣಿಯಲ್ಲಿ ಇನ್ನಿತರ ಸಲಕರಣೆಗಳನ್ನು ಸುರಕ್ಷಿತ ಸ್ಥಳದಲ್ಲಿ ಭದ್ರಪಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ಅದರಂತೆ, ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರು ಹಾಗೂ ಕಡಲತೀರಗಳಲ್ಲಿ ಮೀನುಗಾರರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 

ಕುಂದಾಪುರದಿಂದ ಕೆಲಸಗಾರರು:

ದೋಣಿಗಳ ದುರಸ್ತಿ ಮಾಡುವ ಸಲುವಾಗಿಯೇ ಕುಂದಾಪುರದ ಗಂಗೊಳ್ಳಿಯಿಂದ ಬಡಗಿ ಕೆಲಸಗಾರರ ತಂಡವು ನಗರಕ್ಕೆ ಬಂದಿದೆ. ಬೈತಖೋಲ್‌ ಬಂದರಿನಲ್ಲಿ ಬೀಡುಬಿಟ್ಟಿರುವ ಈ ತಂಡ, ದೋಣಿಯನ್ನು ಜಟ್ಟಿಗೆ ಎಳೆದು ತಂದು ದುರಸ್ತಿ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ದೋಣಿಗಳ ಹಲಗೆಯನ್ನು ಪರಿಶೀಲಿಸಿ, ಅವುಗಳ ನಡುವಿನ ಅಂತರವನ್ನು ಹತ್ತಿಯಿಂದ ತುಂಬಲಾಗುತ್ತದೆ. ನಂತರ ಫೈಬರ್‌ ಅಳವಡಿಸಲಾಗುತ್ತದೆ. ನೀರು ಒಳಹೋಗದಂತೆ ರಂಧ್ರಗಳಿರುವ ಕಡೆ ಅಲ್ಯುಮಿನಿಯಂ ಪಟ್ಟಿಯನ್ನು ಅಂಟಿಸಲಾಗುತ್ತದೆ. ಹಲಗೆಗಳು ಹಾಳಾಗಿದ್ದರೆ ಅದನ್ನು ತೆಗೆದು ಹೊಸ ಹಲಗೆಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.

‘ಒಂದು ಪರ್ಸಿನ್‌ ದೋಣಿಗಳನ್ನು ದುರಸ್ತಿ ಕಾರ್ಯ ಮಾಡಲು ಸುಮಾರು ₹ 2 ಲಕ್ಷದಿಂದ ₹ 5 ಲಕ್ಷ ವೆಚ್ಚ ತಗಲುತ್ತದೆ. ದೋಣಿಯ ಎಂಜಿನ್‌ನ ದುರಸ್ತಿ ಕಾರ್ಯವೂ ಇದೇ ಸಂದರ್ಭದಲ್ಲಿ ನಡೆಯುತ್ತದೆ’ ಎಂದು ಮೀನುಗಾರ ವಿನಾಯಕ ಹರಿಕಂತ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !