ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರಿಗೆ ಟಿಕೆಟ್ ನೀಡಲು ಆಗ್ರಹ

ಶಿಗ್ಗಾವಿ–ಸವಣೂರ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ಮುಖಂಡರ ಬಂಡಾಯ
Last Updated 30 ಮಾರ್ಚ್ 2018, 11:09 IST
ಅಕ್ಷರ ಗಾತ್ರ

ಹಾವೇರಿ:  ಶಿಗ್ಗಾವಿ–ಸವಣೂರ ಕ್ಷೇತ್ರದಿಂದ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ರಾಜಶೇಖರ ಸಿಂಧೂರ, ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ, ಬಿಜೆಪಿ ಮುಖಂಡ ಶಶಿಧರ ಎಲಿಗಾರ ಮತ್ತಿತರರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಆಗ್ರಹಿಸಿದರು.

‘2008ರ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಉದ್ದೇಶದಿಂದ ನಾವೆಲ್ಲ ಅಂದು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದೆವು. ಹೀಗಾಗಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಮಗನಾದ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿದೆವು. ಬೊಮ್ಮಾಯಿ ಅವರನ್ನು ಗೆಲ್ಲಿಸಿ ಕಳುಹಿಸಿದೆವು. ಆದರೆ, ಬೊಮ್ಮಾಯಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ’ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ‘2004ರ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆನು. ಆದರೆ, 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮನವಿಗೆ ಒಪ್ಪಿಕೊಂಡು, ಬಸವರಾಜ ಬೊಮ್ಮಾಯಿ ಪರ ಕೆಲಸ ಮಾಡಿದೆವು. ‘ಎರಡು ಚುನಾವಣೆಗಳ ಬಳಿಕ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ’ ಎಂದು ಆ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಬೊಮ್ಮಾಯಿ ಹೇಳಿದ್ದರು. ಅವರ ತಾಯಿ ಹೆಸರಿನಲ್ಲಿ ಆಣೆಯೂ ಮಾಡಿದ್ದರು. ಅಲ್ಲದೇ, ಅವರ ತಂದೆಯ ಹೆಸರನ್ನೂ ಉಲ್ಲೇಖಿಸಿದ್ದರು’ ಎಂದರು.

‘ಜನರ ಆಶೋತ್ತರಕ್ಕೆ ಬೆಲೆ ಕೊಡದ ವ್ಯಕ್ತಿ ಜನ ನಾಯಕನೇ ಅಲ್ಲ. ನಾವು ಕಣದಿಂದ ಹಿಂದೆ ಸರಿಯುವುದಿಲ್ಲ. ಪಕ್ಷವು ಸ್ಥಳೀಯರಿಗೆ ಟಿಕೆಟ್ ನೀಡಿದಿದ್ದರೆ, ನಮ್ಮ ಪೈಕಿ ಒಬ್ಬರು ಕಣಕ್ಕಿಳಿಯುತ್ತೇವೆ. ಇದಕ್ಕೆ ಎಲ್ಲರೂ ಬದ್ಧರಾಗಿದ್ದೇವೆ’ ಎಂದ ಅವರು, ‘ಬೀಳುವ ಮರಕ್ಕೆ ನಾವು ಕೊಡಲಿ ಏಟು ಹಾಕುವುದಿಲ್ಲ. ಯಾರು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಜಿಲ್ಲಾ ಪಂಚಾಯ್ತಿ ಚುನಾವಣೆಯಿಂದಲೇ ಕ್ಷೇತ್ರದ ಜನತೆಗೆ ಅರಿವಾಗಿದೆ’ ಎಂದು ಬೊಮ್ಮಾಯಿಗೆ ಕುಟುಕಿದರು.

ಮಾಜಿ ಶಾಸಕ ರಾಜಶೇಖರ ಸಿಂಧೂರ ಮಾತನಾಡಿ, ‘ನಾನು, 2004ರಲ್ಲಿ ಪಕ್ಷೇತರನಾಗಿ ನಿಂತು ಗೆಲುವು ಸಾಧಿಸಿದ್ದೆನು. ಆದರೆ, ಯಡಿಯೂರಪ್ಪ ಅವರ ಮನವಿಯಂತೆ 2008ರಲ್ಲಿ ಬೊಮ್ಮಾಯಿ ಪರ ಕೆಲಸ ಮಾಡಿದ್ದೆವು. 2013ರಲ್ಲಿ ಸ್ವತಃ ಬೊಮ್ಮಾಯಿ ಕಾಲು ಹಿಡಿದಿದ್ದರು. ನನ್ನನ್ನು ವಿಧಾನ ಪರಿಷತ್ ಸದಸ್ಯ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರ ಮೂಲಕ ಹೇಳಿಸಿದ್ದರು. ಆದರೆ, ಈಗ ನಮ್ಮನ್ನೆಲ್ಲ ಕಡೆಗಣಿಸುತ್ತಿದ್ದಾರೆ’ ಎಂದು ದೂರಿದರು.

‘ನಾನು ಅವರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆನು. ಆದರೆ, ನನ್ನ ಸಹೋದರನನ್ನೇ ಕೆ.ಸಿ.ಸಿ. ಬ್ಯಾಂಕ್ ಮತ್ತಿತರ ಪ್ರಮುಖ ಹುದ್ದೆಗಳಿಂದ ದೂರ ಸರಿಸಿದರು. ಸ್ವತಃ ಬೊಮ್ಮಾಯಿ ಕ್ಷೇತ್ರದ ಜನತೆಗೆ ಕೈಗೆಟುಕದಾದರು. ಅವರಲ್ಲಿ ಭಾರಿ ಹಣ ಇರಬಹುದು. ಹೀಗಾಗಿ, ‘ಗೋಡಾ ಹೇ ಮೈದಾನ್ ಹೇ’ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಕ್ಷೇತ್ರದಲ್ಲಿ ‘ಗೋಡಾ’ (ಕುದುರೆ) ಅಲ್ಲ, ‘ಸ್ಥಳೀಯ ಸ್ವಾಭಿಮಾನಿ ಜನತೆ’ ಇದ್ದಾರೆ. ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಶಿಗ್ಗಾವಿ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಕೇಳಿದ್ದಾರೆ. ಈ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದೇವೆ. ಇಲ್ಲಿ ಸತತ ಎರಡು ಬಾರಿಗಿಂತ ಹೆಚ್ಚು ಯಾರೂ ಗೆದ್ದಿಲ್ಲ. ಅಲ್ಲದೇ, ಸ್ವಾಭಿಮಾನಕ್ಕಾಗಿ ಸ್ವತಂತ್ರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಇತಿಹಾಸ ಇದೆ’ ಎಂದರು.

ಬಿಜೆಪಿ ಮುಖಂಡ ಶಶಿಧರ ಎಲಿಗಾರ ಮಾತನಾಡಿ, ‘ ಬೊಮ್ಮಾಯಿ ಜಾತೀಯತೆ ಮಾಡಿದರು. ಬೇರೆ ನಾಯಕರನ್ನು ಬೆಳೆಯಲು ಬಿಡಲಿಲ್ಲ. ಕೇವಲ ಕೈಗೊಂಬೆಗಳನ್ನು ಮಾತ್ರ ಪಕ್ಷದಲ್ಲಿ ಇರಿಸಿಕೊಂಡರು. ಹೀಗಾಗಿ ಬಹುತೇಕರು ಬಿಜೆಪಿಯಿಂದ ಹೊರ ಹೋಗುತ್ತಿದ್ದಾರೆ. ‘ನಾನು ಸತ್ತಾಗ ಇಲ್ಲೇ ಮಣ್ಣು ಮಾಡಿ’ ಎಂದು ಅವರು ಹೇಳಿದ್ದಾರೆ. ನಮಗೆ ಸತ್ತ ಬಳಿಕದ ಸುದ್ದಿ ಬೇಡ. ಇರುವಾಗಲೇ ಪರಸ್ಪರ ಮಾತಾಡಿಸಿ, ಸ್ನೇಹದಿಂದ ಬದುಕುವ ನಾಯಕರು ಬೇಕಾಗಿದೆ’ ಎಂದರು.

**

ರಾಷ್ಟ್ರ ನಾಯಕರು ಸಂಧಾನ ನಡೆಸಲು ಬಂದರೂ, ನಾವು ಕ್ಷೇತ್ರದ ಜನರಿಗೆ ಬದ್ಧರಾಗಿರುತ್ತೇವೆ. ಅನಿವಾರ್ಯವಾದರೆ ನಾಲ್ವರಲ್ಲಿ ಒಬ್ಬರು ಕಣಕ್ಕಿಳಿಯುತ್ತೇವೆ – ಸೋಮಣ್ಣ ಬೇವಿನಮರದ, ವಿಧಾನ ಪರಿಷತ್ ಸದಸ್ಯರು.

**

ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದರೆ ಏನು ಮಾಡುವುದು? ಸ್ವತಂತ್ರವಾಗಿ ನಿಂತು ಸಾಮರ್ಥ್ಯ ತೋರಿಸಬೇಕಾಗುತ್ತದೆ – ರಾಜಶೇಖರ ಸಿಂಧೂರ, ಮಾಜಿ ಶಾಸಕರು

**

ಶಿಗ್ಗಾವಿ–ಸವಣೂರಿನ ಜನತೆಯು ಪ್ರತಿ ಕೆಲಸಕ್ಕೂ ಹುಬ್ಬಳಿಗೆ ಹೋಗಿ ಬರುವಷ್ಟು ಸಿರಿವಂತರಲ್ಲ. ಕ್ಷೇತ್ರದವರನ್ನು ಅಭ್ಯರ್ಥಿ ಮಾಡಿ – ಶಶಿಧರ ಎಲಿಗಾರ, ಬಿಜೆಪಿ ಮುಖಂಡ.

**

ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಸತತವಾಗಿ ಕಡೆಗಣನೆ ಮಾಡುತ್ತಿರುವುದು ಬೇಸರ ಮೂಡಿಸಿದೆ. ಸ್ಥಳೀಯ ಅಭ್ಯರ್ಥಿಗಳು ಈ ಬಾರಿ ಸ್ಪರ್ಧಿಸಬೇಕು – ಶಶಿಕಾಂತ ದುಂಡಿ ಗೌಡ್ರ, ಗುತ್ತಿಗೆದಾರರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT