ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ತುರ್ತು ಅನುಷ್ಠಾನಕ್ಕೆ ಸಚಿವ ಅಂಗಾರ ಸೂಚನೆ

ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳ ಸಭೆ
Last Updated 27 ಜೂನ್ 2022, 15:42 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಅತ್ಯಂತ ತುರ್ತಾಗಿ ಅನುಷ್ಠಾನ ಮಾಡಬೇಕು. ಸರ್ಕಾರ ಪ್ರಕಟಿಸಿರುವ ವೈಯಕ್ತಿಕ ಯೋಜನೆಗಳನ್ನೂ ವೇಗವಾಗಿ ಜನರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದುಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಭಾಗವಹಿಸಿದ್ದರು.

‘ಮೀನುಗಾರರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇನೆ. ಅವರಿಗೆ ಅನುಕೂಲವಾಗುವಂತೆ ವಾಹನಗಳನ್ನು ಒದಗಿಸಬೇಕು. ಮಾರುಕಟ್ಟೆ ವ್ಯಾಪ್ತಿ ವೃದ್ಧಿಸಿ ಆರ್ಥಿಕ ಅಭಿವೃದ್ಧಿ ಆಗುವಂತೆ ಯೋಜನೆ ರೂಪಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿಗಳು, ಶಾಸಕರು, ಸಂಸದರ ಅಭಿಪ್ರಾಯ ಬೇಕಿತ್ತು. ಇದಕ್ಕೂ ಮೊದಲು ಕರಾವಳಿಯ ಮೂರು ಕಡೆ ಭೇಟಿ ನೀಡಿದ್ದೇನೆ’ ಎಂದು ತಿಳಿಸಿದರು.

‘ಜಿಲ್ಲೆಯ ಬಂದರುಗಳಲ್ಲಿ ಹೂಳಿನ ಸಮಸ್ಯೆಯಿದೆ. ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ತುರ್ತಾಗಿ ಮಾಡಲು ಸೂಚಿಸಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಪರಿಶೀಲಿಸಲು 20 ದಿನಗಳ ಬಳಿಕ ಮತ್ತೆ ಭೇಟಿ ನೀಡಲಿದ್ದೇನೆ’ ಎಂದರು.

ವರದಿಗೆ ಸೂಚನೆ:

‘ಭಟ್ಕಳದ ತೆಂಗಿನಗುಂಡಿಯಲ್ಲಿ ಬಂದರಿನ ಕಾಂಕ್ರೀಟ್ ಪದರು ಕುಸಿದಿರುವ ವಿಚಾರದಲ್ಲಿ ಅಧಿಕಾರಿಗಳಿಂದ ಎರಡು ದಿನಗಳಲ್ಲಿ ವರದಿ ಕೇಳಲಾಗಿದೆ. ಕಾಮಗಾರಿಯನ್ನು ಮಂಜೂರು ಮಾಡಿದ್ದು ಯಾವಾಗ, ಅನುಮತಿ ಕೊಟ್ಟವರು ಯಾರು ಮುಂತಾದ ಮಾಹಿತಿಗಳನ್ನು ಕೊಡುವಂತೆ ಸೂಚಿಸಲಾಗಿದೆ’ ಎಂದರು.

‘ಮುಂದೆ ಗೊತ್ತಾಗಲಿದೆ’:

ಹೊನ್ನಾವರದ ಟೊಂಕದಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಸಚಿವ ಅಂಗಾರ, ‘ಅದರ ಬಗ್ಗೆಯೂ ಚರ್ಚೆಯಾಗಿದೆ. ಅದೆಲ್ಲ ನಿಮಗೆ ಮುಂದೆ ಗೊತ್ತಾಗಲಿದೆ. ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವವರಿಗೆ ನೀಡಲಾದ ನಿರ್ದಿಷ್ಟ ಸಮಯದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದಷ್ಟೇ ಹೇಳಿದರು.

ಯೋಜನೆಗೆ ವಿರೋಧದ ಬಗ್ಗೆ ಕೇಳಿದಾಗ, ‘ನಾನು ಕೂಡ ಕೂಲಿ ಕಾರ್ಮಿಕ. ಇವತ್ತು ಸಚಿವನಾಗಿದ್ದೇನೆ. ಕಾರ್ಮಿಕನಾಗಿ ಕಾರ್ಮಿಕರ ಕಷ್ಟ ನನಗೆ ಗೊತ್ತಿದೆ. ಮೀನುಗಾರರಿಗೆ ತೊಂದರೆ ಆಗದು. ಅವರ ಹಾಗೂ ಇಡೀ ಕರಾವಳಿಯ ಅಭಿವೃದ್ಧಿ ಆಗುತ್ತದೆ. ಜನರಿಗೆ ಒಂದಷ್ಟು ತೊಂದರೆಯಾದರೂ ಇಡೀ ಜಿಲ್ಲೆ ಮತ್ತು ಮೀನುಗಾರರ ಹಿತವನ್ನು ಇಟ್ಟುಕೊಂಡೇ ಯೋಜನೆ ರೂಪಿಸಲಾಗಿದೆ’ ಎಂದರು.

ನಾಡದೋಣಿಗಳಿಗೆ ಸೀಮೆಎಣ್ಣೆ ಸಿಗುತ್ತಿಲ್ಲ ಎಂದು ಗಮನ ಸೆಳೆದಾಗ, ‘ಇದು ಈಗಿನ ಸಮಸ್ಯೆಯಲ್ಲ. ಕಳೆದ ತಿಂಗಳು ಹಂಚಿಕೆಯಾಗಿತ್ತು. ಈ ತಿಂಗಳು ಹಂಚಿಕೆ ಆಗಬೇಕಿದೆ. ತರಿಸಿ ವಿತರಿಸಲಾಗುವುದು’ ಎಂದು ಸಮಜಾಯಿಷಿ ನೀಡಿದರು.

ಬಾಗಿಲು ಮುಚ್ಚಿ ಸಭೆ:

ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಆರಂಭವಾದ ಸಭೆಯು ಸಂಜೆ 6.30 ತನಕ ನಡೆಯಿತು. ಮಾಧ್ಯಮದವರು, ಬಂದರಿನಂಥ ಯೋಜನೆಗಳಿಂದ ಬಾಧಿತ ಪ್ರದೇಶಗಳ ಸಾರ್ವಜನಿಕರು, ಮೀನುಗಾರರ ಮುಖಂಡರು, ಹಲವು ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಬಗ್ಗೆ ಸಚಿವರು, ಶಾಸಕರನ್ನು ಸ್ಪಷ್ಟನೆ ಕೇಳಿದಾಗ, ‘ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚಿಸಲಾಗಿದೆ. ಎಲ್ಲವನ್ನೂ ಸಾರ್ವಜನಿಕವಾಗಿ ತಿಳಿಸಲಾಗದು’ ಎಂದಷ್ಟೇ ತಿಳಿಸಿದರು.

ಈ ರೀತಿಯ ಸಭೆಯ ಬಗ್ಗೆ ಮೀನುಗಾರರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೂರು ತಾಸು ಕಾದಿದ್ದರೂ ಸಾಧ್ಯವಾಗಲಿಲ್ಲ ಎಂದು ಬೇಸರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಮೀನುಗಾರಿಕೆ, ಬಂದರು ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT