ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

61 ದಿನ ಯಾಂತ್ರೀಕೃತ ಮೀನುಗಾರಿಕೆ ನಿಷೇಧ; ನಾಡದೋಣಿಗೆ ಉತ್ತಮ ಶಿಕಾರಿಯ ನಿರೀಕ್ಷೆ

ವಿಳಂಬವಾದ ಮುಂಗಾರು ಮಳೆ
Last Updated 1 ಜೂನ್ 2019, 19:45 IST
ಅಕ್ಷರ ಗಾತ್ರ

ಕಾರವಾರ:ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ಸರ್ಕಾರ ನಿಷೇಧ ಹೇರಿದೆ.ಜುಲೈ 31ರವರೆಗೆ ಒಟ್ಟು 61 ದಿನ ಸಾಂಪ್ರದಾಯಿಕ ದೋಣಿಗಳು ಮಾತ್ರ ಕಡಲಿಗೆ ಇಳಿಯಲು ಅವಕಾಶವಿದೆ. ಈ ಬಾರಿ ಮುಂಗಾರು ಮಾರುತಗಳು ವಿಳಂಬವಾಗಿರುವ ಕಾರಣ ಉತ್ತಮ ಶಿಕಾರಿಯ ನಿರೀಕ್ಷೆ ಮೀನುಗಾರರದ್ದಾಗಿದೆ.

ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಇಲ್ಲದ್ದಿದ್ದರೆ ನಾಡದೋಣಿಗಳು ಮೀನುಗಾರಿಕೆಗೆ ಹೋಗಲು ಸುಲಭವಾಗುತ್ತದೆ. ಅಲೆಗಳ ಬಲವಾದ ಹೊಡೆತ ಇಲ್ಲದಿರುವ ಕಾರಣ ಮೀನುಗಾರರು ಆತಂಕ ರಹಿತರಾಗಿ ಕೆಲಸ ಮಾಡಬಹುದು. ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವ ಕಾರಣ ತಮ್ಮ ಬಲೆಗೆ ಹೆಚ್ಚು ಮೀನುಗಳು ಬೀಳುತ್ತವೆ ಎನ್ನುವುದು ಸಾಂಪ್ರದಾಯಿಕ ಮೀನುಗಾರರ ಅನುಭವವಾಗಿದೆ.

‘ನಾಡದೋಣಿಮೀನುಗಾರಿಕೆಗೆ ವರ್ಷದ 12 ತಿಂಗಳೂ ಅವಕಾಶವಿದೆ.ಜೂನ್ ಮತ್ತು ಜುಲೈಎರಡು ತಿಂಗಳಲ್ಲಿ ನಾಡದೋಣಿಯವರಿಗೆ ಏನಾದರೂ ಸಂಪಾದನೆ ಆಗಬೇಕು. ನಂತರ ಯಾಂತ್ರೀಕೃತ ದೋಣಿಗಳು ಸಮುದ್ರಕ್ಕಿಳಿದರೆ ಏನೂ ಸಿಗುವುದಿಲ್ಲ.ಅವೈಜ್ಞಾನಿಕ ಮೀನುಗಾರಿಕೆಯ ವಿರುದ್ಧ ಹೋರಾಟ ಮಾಡಿದ್ದರ ಫಲವಾಗಿ ನಾಡದೋಣಿ ಮೀನುಗಾರರ ಅರ್ಧ ಶ್ವಾಸ ಉಳಿದುಕೊಂಡಿದೆ’ ಎನ್ನುತ್ತಾರೆ ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ಸದಾನಂದ ಹರಿಕಂತ್ರ.

‘ಜೂನ್ ಮತ್ತು ಜುಲೈ ತಿಂಗಳಲ್ಲಿ ಚಂಡಮಾರುತ ಬೀಸಿದರೆ ಸಮುದ್ರಕ್ಕೆ ಹೋಗುವಂತೆಯೇ ಇಲ್ಲ. ಪ್ರಕ್ಷುಬ್ಧ ಸಮುದ್ರ ಅಲ್ಲಲ್ಲಿ ಶಾಂತತೆ ಕಾಯ್ದುಕೊಂಡರೆ ಮೀನುಗಾರಿಕೆ ಅನುಕೂಲವಾಗುತ್ತದೆ. ಆಗ ನಾವು ಒಂದಷ್ಟು ಆದಾಯ ಗಳಿಸಲು ಅವಕಾಶವಾಗುತ್ತದೆ. ಇದಕ್ಕೆ ಸಮುದ್ರ ಸರಿಯಾಗಿ ಅವಕಾಶ ಕೊಡಬೇಕು’ ಎನ್ನುತ್ತಾರೆ ಅವರು.

‘ಈ ಬಾರಿ ಮಳೆ ತಡವಾಗಿರುವ ಕಾರಣ ನಾಡದೋಣಿ ಮೀನುಗಾರಿಕೆಗೆ ಪ್ರಯೋಜನವಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಮೊದಲೆಲ್ಲೆ ಮೇ 15ರ ನಂತರ ಸಮುದ್ರದಲ್ಲಿ ದೊಡ್ಡ ಅಲೆಗಳು, ರಭಸದ ಗಾಳಿ ಬೀಸುತ್ತಿತ್ತು. ಆದರೆ, ಈ ವರ್ಷ ಇನ್ನೂ ಮುಂಗಾರಿನ ಮುನ್ಸೂಚನೆಯೇ ಇಲ್ಲ. ಮಳೆಗಾಲ ಆರಂಭವಾಗಲು ಇನ್ನೂ 15 ದಿನಗಳು ಬೇಕಾಗಬಹುದು. ಚಂಡಮಾರುತ ಬಂದರೆ ಸಮುದ್ರದಲ್ಲಿ ಹೊಸದಾದ ವಾತಾವರಣ ಉಂಟಾಗುತ್ತದೆ. ಆಗ ಎಲ್ಲ ರೀತಿಯ ಮೀನುಗಾರರಿಗೂ ಅನುಕೂಲವಾಗುತ್ತದೆ’ ಎಂದು ಅವರುಹೇಳುತ್ತಾರೆ.

‌ಜಿಲ್ಲೆಯಲ್ಲಿ ಅಂದಾಜು 1.03 ಲಕ್ಷ ಮೀನುಗಾರರಿದ್ದಾರೆ. ಅವರ ಪೈಕಿ 70 ಸಾವಿರ ಮಂದಿ ಈ ಉದ್ಯೋಗದಲ್ಲಿ ಸಕ್ರಿಯರಾಗಿದ್ದಾರೆ. ಈವರೆಗೆ 1,560 ನಾಡದೋಣಿಗಳಿಗೆ ಮೀನುಗಾರಿಕಾ ಇಲಾಖೆಯಿಂದ ಪರವಾನಗಿಪಡೆದುಕೊಂಡಿವೆ. ಈ ಸಂಖ್ಯೆ ಪ್ರತಿವರ್ಷ 50ರಿಂದ 100ರಷ್ಟು ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರವಾರದಲ್ಲಿ ಸಭೆ:ಮೀನುಗಾರಿಕೆ ನಿಷೇಧ ಜಾರಿ, ಮುಂಗಾರು ಪೂರ್ವ ಸಿದ್ಧತೆ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ ಕುರಿತು ಚರ್ಚಿಸಲುಕಾರವಾರದ ಮೀನುಗಾರಿಕಾ ಇಲಾಖೆ ಕಚೇರಿಯಲ್ಲಿ ಜೂನ್ 3ರಂದು ಮಧ್ಯಾಹ್ನ 2.30ಕ್ಕೆ ಸಭೆ ಕರೆಯಲಾಗಿದೆ.

9.9 ಎಚ್‌.ಪಿ.ಗಿಂತ ಕಡಿಮೆ ಸಾಮರ್ಥ್ಯದ ಔಟ್‌ಬೋರ್ಡ್ ಎಂಜಿನ್ ಇರುವ ದೋಣಿಗಳ ಬಳಕೆ, ಕಡ್ಡಾಯವಾಗಿ ಲೈಫ್ ಜಾಕೆಟ್ ಮತ್ತು ಪೈಫ್ ಬಾಯ್‌ಗಳನ್ನು ಹೊಂದಿರುವುದು,ಐದು ನಾಟಿಕಲ್ ಮೈಲು ಪ್ರದೇಶದಲ್ಲಿ ಮಾತ್ರ ಮೀನುಗಾರಿಕೆ ಮಾಡುವುದು,ಹವಾಮಾನ ವರದಿ ಆಧರಿಸಿ ಸಮುದ್ರಕ್ಕೆ ತೆರಳುವುದು ಮುಂತಾದ ವಿಚಾರಗಳ ಕುರಿತು ಅಂದುಚರ್ಚಿಸಲಾಗುವುದು ಎಂದುಇಲಾಖೆಯ ಉಪ ನಿರ್ದೇಶಕ ಪಿ.ನಾಗರಾಜ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT