ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ವತದಿಂದ ಸಾಗರಕ್ಕೆ’ ಯುವತಿಯರ ಸೈಕಲ್ ಯಾನ!

ಮಂಗಳೂರಿನ ಉಳ್ಳಾಲಕ್ಕೆ ಕಯಾಕಿಂಗ್‌ನಲ್ಲಿ ಪ್ರಯಾಣ
Last Updated 19 ಅಕ್ಟೋಬರ್ 2021, 14:40 IST
ಅಕ್ಷರ ಗಾತ್ರ

ಕಾರವಾರ: ಐವರು ಯುವತಿಯರು ಸೇರಿದಂತೆ ಏಳು ಮಂದಿಯ ಈ ತಂಡದ್ದು ಅಸಾಧಾರಣ ಸಾಹಸ. ಜಮ್ಮು ಕಾಶ್ಮೀರದಲ್ಲಿ 5,425 ಮೀಟರ್ ಪರ್ವತಾರೋಹಣ ಮಾಡಿ, ನಂತರ 3,350 ಕಿಲೋಮೀಟರ್ ಸೈಕ್ಲಿಂಗ್‌ನಲ್ಲಿ ಕಾರವಾರಕ್ಕೆ ಬಂದವರು. ಇಲ್ಲಿಂದ ಮಂಗಳೂರಿನತ್ತ ಅರಬ್ಬಿ ಸಮುದ್ರದ ಅಲೆಗಳ ನಡುವೆ ಕಯಾಕಿಂಗ್‌ನಲ್ಲಿ ಸಾಗುವವರು!

ಇವರು ದೇಶದ ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ಮಹಿಳೆಯರ ಸಾಧನೆ ಮತ್ತು ಸಾಹಸಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂಥ ಅಪರೂಪದ ಪ್ರಯಾಣ ಮಾಡುತ್ತಿದ್ದಾರೆ. ಮೈಸೂರಿನ ಬಿಂದು, ಶಿವಮೊಗ್ಗ ಜಿಲ್ಲೆಯ ಆಯನೂರಿನ ಧನಲಕ್ಷ್ಮಿ, ಶಿವಮೊಗ್ಗದ ಐಶ್ವರ್ಯಾ, ಬೆಂಗಳೂರಿನ ಆಶಾ ಹಾಗೂ ಕೊಡಗಿನ ಪುಷ್ಪಾ ತಂಡದಲ್ಲಿದ್ದಾರೆ. ಕೇರಳದ ಕೊಚ್ಚಿಯ ಫ್ರಾನ್ಸಿಸ್ ಮತ್ತು ಶಬೀಬ್ ತರಬೇತುದಾರರಾಗಿದ್ದು, ಅವರ ಪ್ರಯಾಣದ ಉದ್ದಕ್ಕೂ ಸಾಗುತ್ತಿದ್ದಾರೆ.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (ಜೇತ್ನಾ) ಮತ್ತು ಇಂಡಿಯನ್ ಮೌಂಟನೀರಿಂಗ್ ಫೌಂಡೇಶನ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ನಿಲಯದಿಂದ ವಿದ್ಯಾರ್ಥಿನಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ.

ಜಮ್ಮು ಕಾಶ್ಮೀರದ ಖರ್ದುಂಗ್ಲಾದಿಂದ ಸೆ.4ರಂದು ಸೈಕಲ್ ಪ್ರಯಾಣ ಆರಂಭಿಸಿದ ಇವರು, 45 ದಿನಗಳಲ್ಲಿ ಕಾರವಾರಕ್ಕೆ ತಲುಪಿದ್ದಾರೆ. ಇಲ್ಲಿಂದ ಸುಮಾರು 300 ಕಿಲೋಮೀಟರ್ ಉಳ್ಳಾಲಕ್ಕೆ ಕಯಾಕಿಂಗ್‌ ಮಾಡಲಿದ್ದಾರೆ. ಇವರೆಲ್ಲರೂ ಉತ್ತರಾಖಂಡದ ಉತ್ತರ ಕಾಶಿಯಲ್ಲಿರುವ ರಾಷ್ಟ್ರೀಯ ಪರ್ವತಾರೋಹಣ ಸಂಸ್ಥೆಯಲ್ಲಿ 28 ದಿನ ತರಬೇತಿ ಪಡೆದಿದ್ದಾರೆ. ನಂತರ ಜಮ್ಮು ಕಾಶ್ಮೀರದ ಕೊಲೈ ಪೀಕ್ ಪರ್ವತವನ್ನು ಆರೋಹಣ ಮಾಡಿದ್ದಾರೆ.

ಅದ್ಧೂರಿ ಸ್ವಾಗತ:

ಪಣಜಿಯಿಂದ ಬೆಳಿಗ್ಗೆ ಹೊರಟು ಕಾರವಾರಕ್ಕೆ ಸಂಜೆ ತಲುಪಿದ ಅವರನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಹಾರ ಹಾಕಿ ಅಭಿನಂದಿಸಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಇಲಾಖೆಯ ತರಬೇತುದಾರ ಪ್ರಕಾಶ ರೇವಣಕರ್, ಹಿರಿಯ ಜಲಸಾಹಸ ಕ್ರೀಡಾ ಪ್ರಶಿಕ್ಷಕ ಪ್ರಕಾಶ ಹರಿಕಂತ್ರ, ಶಿಲಾರೋಹಣ ತರಬೇತುದಾರ ಮುನಿರಾಜು, ಜಿಲ್ಲಾ ಅಥ್ಲೆಟಿಕ್ ಸಂಘದ ಕಾರ್ಯದರ್ಶಿ ಕೆ.ಆರ್ ನಾಯಕ, ಸದಾನಂದ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT