ಶಿರಸಿ: ಕಳೆದ ಸುಮಾರು ಏಳೆಂಟು ತಿಂಗಳುಗಳಿಂದ ಪ್ರಗತಿಯಲ್ಲಿದ್ದ ನಗರದ ಐದು ರಸ್ತೆ ವೃತ್ತವನ್ನು ವಿಸ್ತರಣೆಗೊಳಿಸುವ ಪ್ರಕ್ರಿಯೆ ಈಚೆಗೆ ವೇಗ ಪಡೆದುಕೊಂಡಿದೆ.
ಮಾರ್ಚ್ 15 ರಿಂದ ಆರಂಭಗೊಳ್ಳಲಿರುವ ಮಾರಿಕಾಂಬಾ ದೇವಿಯ ಜಾತ್ರೆಗೆ ಮುನ್ನ ವೃತ್ತ ಸಹಿತ ಅಗಲವಾದ ರಸ್ತೆ ನಿರ್ಮಾಣಗೊಳ್ಳುವ ಭರವಸೆ ಸಾರ್ವಜನಿಕರಲ್ಲಿ ಮೂಡಿದೆ. ಪಂಡಿತ ಸಾರ್ವಜನಿಕ ಆಸ್ಪತ್ರೆ ಎದುರಿನಿಂದ ವೃತ್ತದವರೆಗೆ 200 ಮೀಟರ್ ದ್ವಿಪಥ ರಸ್ತೆ ಡಾಂಬರೀಕರಣಗೊಂಡಿದೆ.
ಆದರೆ, ಕುಮಟಾ ರಸ್ತೆಯಲ್ಲಿ 200 ಮೀ. ರಸ್ತೆ ಇನ್ನಷ್ಟೆ ನಿರ್ಮಾಣಗೊಳ್ಳಬೇಕಿದೆ. ಈ ರಸ್ತೆಯ ಅಕ್ಕಪಕ್ಕದ ಕಟ್ಟಡಗಳನ್ನು ಈಚೆಗಷ್ಟೇ ತೆರವುಗೊಳಿಸಲಾಗಿದೆ. ಶಿವಾಜಿಚೌಕದ ಕಡೆ ತೆರಳುವ ರಸ್ತೆ, ಶೃದ್ಧಾನಂದ ಗಲ್ಲಿ ಕಡೆಗೂ ವಿಸ್ತರಣೆ ಕೆಲಸ ಕೈಗೊಳ್ಳಲಾಗಿದೆ.
‘ರಸ್ತೆ ವಿಸ್ತರಣೆಗೆ ಖಾಸಗಿ ಜಾಗಗಳನ್ನು ಸ್ವಾಧೀನ ಪಡೆಯುವ ಅಗತ್ಯವಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ ಸ್ವಲ್ಪ ವಿಳಂಬವಾಗಿದೆ. ಜನರ ಮನವೊಲಿಸಿ ರಸ್ತೆಗೆ ಜಾಗ ಪಡೆಯಲಾಗಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಉಮೇಶ ನಾಯ್ಕ ಪ್ರತಿಕ್ರಿಯಿಸಿದರು.
‘ಕುಮಟಾ ರಸ್ತೆಯಲ್ಲಿ ಕೈಗೊಳ್ಳಬೇಕಾದ ರಸ್ತೆ ಕಾಮಗಾರಿಯನ್ನೂ ಹತ್ತು ದಿನದೊಳಗೆ ಪೂರ್ಣಗೊಳಿಸಲಾಗುತ್ತದೆ. ಅದಕ್ಕೂ ಮುನ್ನ ಎರಡೂ ಕಡೆಗಳಲ್ಲಿ ಚರಂಡಿ ನಿರ್ಮಾಣಗೊಳ್ಳಲಿದೆ. ಜಾತ್ರೆ ವೇಳೆಗೆ ವಿಸ್ತಾರವಾದ ರಸ್ತೆ ಸಿದ್ಧಗೊಳ್ಳಲಿದೆ’ ಎಂದರು.
‘ನಗರದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದೇವೆ. ಅದಕ್ಕೆ ತಕ್ಕ ಪರಿಹಾರವನ್ನು ಈವರೆಗೆ ನೀಡಿಲ್ಲ. ವಿಳಂಬ ಮಾಡದೆ ಪರಿಹಾರವನ್ನೂ ಬೇಗನೆ ನೀಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.