ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಐದು ತಾಲ್ಲೂಕು ವ್ಯಾಪಿಸಿದ ಬರದ ಛಾಯೆ

ಇಡೀ ಜಿಲ್ಲೆಯನ್ನು ‘ಬರ ಪೀಡಿತ’ವೆಂದು ಘೋಷಣೆ ಮಾಡಲು ರೈತ ಮುಖಂಡರ ಆಗ್ರಹ
Last Updated 27 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಐದು ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕಾರವಾರ, ಭಟ್ಕಳ, ಮುಂಡಗೋಡ, ಹಳಿಯಾಳ ಮತ್ತು ಯಲ್ಲಾಪುರ ಇವುಗಳಲ್ಲಿ ಒಳಗೊಂಡಿವೆ.

ಈ ಬಾರಿ ಉತ್ತರ ಕನ್ನಡವನ್ನು ‘ಪ್ರವಾಹ ಪೀಡಿತ ಜಿಲ್ಲೆ’ ಎಂದು ಸರ್ಕಾರ ಪ್ರಕಟಿಸಿತ್ತು. ಉತ್ತಮ ಮಳೆಯಾದ್ದರಿಂದ ಈ ವರ್ಷ ನೀರಿಗೆ ಸಮಸ್ಯೆಯಾಗದು ಎಂದು ರೈತರು ಭಾವಿಸಿದ್ದರು. ಮೇಲ್ನೋಟಕ್ಕೆ ಮುಂಗಾರು ಮಳೆ ಉತ್ತಮವಾಗಿ ಸುರಿದಂತೆ ಕಂಡಿದ್ದರೂ ವಾಡಿಕೆಗಿಂತ ಶೇ 8ರಷ್ಟು ಕಡಿಮೆಯಾಗಿರುವುದು ಕೃಷಿ ಇಲಾಖೆಯ ಪರಿಶೀಲನೆಯಲ್ಲಿ ಕಂಡುಬಂದಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲೇ ಐದು ತಾಲ್ಲೂಕುಗಳಲ್ಲಿ ಬರದ ಛಾಯೆ ಹಬ್ಬಿರುವುದು ಚಿಂತೆ ತಂದಿದೆ.

‘ಬರಪೀಡಿತ ಜಿಲ್ಲೆ ಘೋಷಿಸಿ’:ಜಿಲ್ಲೆಯಲ್ಲಿ ಸರ್ಕಾರವು ಜಾರಿ ಮಾಡಿದ ವಿವಿಧ ಬೃಹತ್ ಯೋಜನೆಗಳಿಂದ ನೀರಿನ ಸಮಸ್ಯೆಯಾಗಿದೆ. ಆದ್ದರಿಂದ ಇಡೀ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಬೇಕುಎಂಬುದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಆಗ್ರಹವಾಗಿದೆ.

ನಿಜವಾಗಿ ಬರ ಇರುವ ತಾಲ್ಲೂಕುಗಳನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಲುವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ರೈತರು ಹನಿ ನೀರಾವರಿ ಪದ್ಧತಿಯನ್ನೇ ಅನುಸರಿಬೇಕು. ಇದರಿಂದ ನೀರಿನ ಕಡಿಮೆ ಬಳಕೆ ಮತ್ತು ಭೂಮಿಗೆ ಹೆಚ್ಚು ನೀರು ಇಂಗಿಸಲು ಸಾಧ್ಯವಾಗುತ್ತದೆ. ಕೃಷಿ ಹೊಂಡದಂತಹ ಯೋಜನೆಗಳು ಕಾಟಾಚಾರಕ್ಕೆ ಜಾರಿಯಾಗುತ್ತಿವೆ. ನೈಜವಾಗಿ ಬೇಕಾದಲ್ಲಿ ಮಾಡುತ್ತಿಲ್ಲ. ರೈತರು ಕೂಡ ತಮ್ಮ ಹೊಲಗಳಲ್ಲಿ ಹುಲ್ಲನ್ನು ಉರಿಸದೇ ಕೊಳೆಸಬೇಕು. ಇದರಿಂದ ಮಣ್ಣಿಗೆ ನೀರು ಮತ್ತು ಪೌಷ್ಟಿಕಾಂಶ ಸಿಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ.

ಜಲಪಾತ್ರ ವಿಸ್ತರಿಸಿಲ್ಲ:ತೋಟಗಳ ವಿಸ್ತರಣೆಯಾದ ಪ್ರಮಾಣಕ್ಕೆ ಅನುಗುಣವಾಗಿ ಜಲಪಾತ್ರಗಳು ಹೆಚ್ಚಲಿಲ್ಲ. ಇದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

‘ನಮ್ಮ ಜಿಲ್ಲೆಯಲ್ಲಿ ನದಿಗಳು, ಸಣ್ಣ ಕೆರೆಗಳನ್ನು ಹೊರತುಪಡಿಸಿ ನೀರಾವರಿಯ ಬೇರೆ ಯಾವುದೇ ಯೋಜನೆಗಳಿಲ್ಲ. ಹರಿಯುವ ನದಿಗೇ ವಿಪರೀತ ಪಂಪ್‌ಸೆಟ್‌ಗಳನ್ನು ಇಟ್ಟು ನೀರು ಬಳಕೆ ಮಾಡಲಾಗುತ್ತಿದೆ. ಕೊಳವೆಬಾವಿಗಳನ್ನು ಕೊರೆದ ಬಳಿಕ ಭೂಮಿಯ ಮೇಲೆ ಬರುವ ನೀರು ನಿಂತುಹೋಯ್ತು’ ಎನ್ನುತ್ತಾರೆ ಅವರು.

‘ಊರಿಗೊಂದು ಕೆರೆಯಿದ್ದರೆ ಕಣಿವೆಯ ಜಲ ಸುಸ್ಥಿರತೆ ಸಾಧ್ಯವಾಗುತ್ತದೆ. ಅಲ್ಲಲ್ಲಿ ಕಟ್ಟಲಾಗಿರುವ ಕಿರು ಅಣೆಕಟ್ಟೆಗಳು ಕೆಲಸ ಮಾಡುತ್ತಿಲ್ಲ. ಅದಕ್ಕೆ ಸರಿಯಾದ ಜಾಗ ಆಯ್ಕೆ ಮಾಡಿಕೊಳ್ಳಬೇಕು. ಮೊದಲು ನಾವು ನೀರು ಉಳಿತಾಯ ಮಾಡಬೇಕು. ಸರ್ಕಾರವೇ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಬೇಕು ಎಂದು ನಿರೀಕ್ಷಿಸಬಾರದು’ ಎಂಬ ಸಲಹೆ ಅವರದ್ದಾಗಿದೆ.

ಸರ್ಕಾರಕ್ಕೆ ಕಾಮಗಾರಿ ಪ್ರಸ್ತಾವ:ಬರ ಪೀಡಿತ ತಾಲ್ಲೂಕುಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಹಣಕಾಸಿನ ಅಂದಾಜು ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ರವಾನೆಯಾದ ಬಳಿಕ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದರು.

‘ಹೊಸ ಕೊಳವೆಬಾವಿಗಳನ್ನು ಕೊರೆಯುವ ಬಗ್ಗೆ ಸಿಇಒ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಕುರಿತು ಜಿಲ್ಲಾಧಿಕಾರಿ ನಿರ್ಣಯ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT