ಮಳೆಗಾಲದಲ್ಲಿ ಹೆಚ್ಚಿದ ‘ಬೆಂಕಿಹುಳ’ದ ಹಾವಳಿ

7
ಪ್ರತಿ ವರ್ಷ ಅರಣ್ಯ ಪ್ರದೇಶ, ತೋಟ, ಗದ್ದೆಗಳಲ್ಲಿ ಉತ್ಪತ್ತಿ; ದೀಪಗಳ ಬೆಳಕಿಗೆ ದಾಳಿ

ಮಳೆಗಾಲದಲ್ಲಿ ಹೆಚ್ಚಿದ ‘ಬೆಂಕಿಹುಳ’ದ ಹಾವಳಿ

Published:
Updated:
ಭಟ್ಕಳ ಪಟ್ಟಣದ ವಿ.ವಿ ರಸ್ತೆಯ ನಿವಾಸಿಯ ಯುವಕನೊಬ್ಬನಿಗೆ ಹುಳ ದಾಳಿ ನಡೆಸಿದ ಪರಿಣಾಮ ಕಣ್ಣಿನ ಚರ್ಮ ಸುಟ್ಟು ಗಾಯವಾಗಿರುವುದು

ಭಟ್ಕಳ: ತಾಲ್ಲೂಕಿನಾದ್ಯಂತ ಮನುಷ್ಯರ ಕಣ್ಣಿಗೆ ಲಗ್ಗೆ ಇಡುವ ಹುಳಗಳ ಉಪಟಳ ಕೆಲವು ದಿನಗಳಿಂದ ತೀವ್ರವಾಗಿದೆ. ಅವುಗಳು ಸ್ರವಿಸುವ ರಾಸಾಯನಿಕದಿಂದ ಹಲವರಿಗೆ ಆ್ಯಸಿಡ್‌ನಿಂದ ಸುಡುವ ಮಾದರಿಯ ಗಾಯಗಳಾಗಿವೆ.

ಈ ರೀತಿಯ ಹುಳಗಳಿಗೆ ಸ್ಥಳೀಯರು ‘ಬೆಂಕಿಹುಳ‍’ ಎಂದು ಕರೆಯುತ್ತಾರೆ. ಮಿಂಚುಹುಳ, ಕಡ್ಡಿಹುಳ, ದೀಪದ ಹುಳ ಮುಂತಾದವು ಇದರ ಜಾತಿಗೆ ಸೇರಿವೆ. ಈ ಹುಳಗಳು ಒಂದು ರೀತಿಯ ರಾಸಾಯನಿಕವನ್ನು ಹೊಂದಿದ್ದು, ಮನುಷ್ಯನ ಬಳಿ ಬಂದಾಗ ಸ್ರವಿಸುತ್ತವೆ. ಅರಣ್ಯ ಪ್ರದೇಶ, ತೋಟ, ಗದ್ದೆಗಳಿಗೆ ತೆರಳಿದೊಡನೆ ಅದರಲ್ಲೂ ರಾತ್ರಿ ವೇಳೆ ಇವುಗಳ ದಾಳಿ ಹೆಚ್ಚಿರುತ್ತದೆ.

‘ಹುಳಗಳು ಸ್ರವಿಸುವ ದ್ರವ ಬಿದ್ದಲ್ಲಿ ಉರಿ ಉಂಟಾಗಿ ಚರ್ಮ ಸುಟ್ಟುಹೋಗಲು ಆರಂಭಿಸುತ್ತದೆ. ತಕ್ಷಣ ಚಿಕಿತ್ಸೆ ಪಡೆದರೆ ಒಂದೆರಡು ವಾರಗಳಲ್ಲಿ ಗುಣವಾಗುತ್ತದೆ’ ಎಂದು ಭಟ್ಕಳದ ಆಸರಕೇರಿಯ ಮನಮೋಹನ ನಾಯ್ಕ ಹೇಳುತ್ತಾರೆ.

‘ಇವು ತೋಟ, ಗದ್ದೆ, ಹೂವಿನ ತೋಟ, ಅರಣ್ಯ ಪ್ರದೇಶಗಳಲ್ಲಿ ಪ್ರತಿ ಮಳೆಗಾಲದಲ್ಲಿ ಹುಟ್ಟಿಕೊಳ್ಳುತ್ತವೆ. ಮಳೆ ಹೆಚ್ಚಾದಾಗ ಅವು ವಲಸೆ ಬರುತ್ತವೆ. ನಮ್ಮ ತೋಟದಲ್ಲೂ ಇವೆ. ಅವುಗಳ ಬಗ್ಗೆ  ಸ್ವಲ್ಪ ಜಾಗರೂಕರಾಗಿರಬೇಕು’ ಎಂದು ಅವರು ಎಚ್ಚರಿಕೆ ನೀಡುತ್ತಾರೆ.

‘ಈ ಹುಳಗಳು ಎಲ್ಲೆಡೆ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಬೈಕ್‌ಗಳಲ್ಲಿ ಓಡಾಡುವವರಿಗೆ, ತೋಟ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರು, ಕೃಷಿಕರು ಈ ಹುಳ ಕಚ್ಚಿಸಿಕೊಳ್ಳುತ್ತಾರೆ’ ಎಂದು ಭಟ್ಕಳದ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಶಿವಾನಂದ ಹೆಗಡೆ ಹೇಳುತ್ತಾರೆ.

‘ಅವುಗಳಿಂದ ತೊಂದರೆಯಾದಾಗ ಮನೆ ಮದ್ದು ಮಾಡಬಾರದು. ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದಲ್ಲಿ ಒಂದು ವಾರದಲ್ಲೇ ಗುಣವಾಗುತ್ತದೆ. ಹುಳದಿಂದ ಆಗುವ ಚರ್ಮ ಸುಡುವಿಕೆಯನ್ನು ನಿರ್ಲಕ್ಷಿಸಿದರೆ, ಗುಣ ಮುಖರಾಗುವುದಕ್ಕೆ ಮೂರ್ನಾಲ್ಕು ವಾರ ಬೇಕಾಗಬಹುದು’ ಎಂದು ಅವರು ಹೇಳುತ್ತಾರೆ.‌

ಬೆಂಕಿಹುಳಗಳ ರಾಸಾಯನಿಕದಿಂದ ಚರ್ಮ ಸುಡುವುದಕ್ಕೆ ವಿಶೇಷ ಚಿಕಿತ್ಸೆಯಿಲ್ಲ. ಬೆಂಕಿ ಮುಟ್ಟಿ ಚರ್ಮ ಸುಟ್ಟಾಗ ನೀಡುವ ಸಾಮಾನ್ಯ ಚಿಕಿತ್ಸೆಯನ್ನೇ ಇದಕ್ಕೆ ನೀಡಲಾಗುತ್ತದೆ.
ಡಾ. ಶಿವಾನಂದ ಹೆಗಡೆ, ಚರ್ಮರೋಗ ತಜ್ಞ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !