ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ದಿಢೀರ್ ಪ್ರವಾಹದಿಂದ ಕಂಗೆಟ್ಟ ಮಕ್ಕಿಗದ್ದೆ

ಅಂಕೋಲಾ: 20 ಅಡಿಗಳಷ್ಟು ಉಕ್ಕೇರಿದ ಹಳ್ಳದ ನೀರು: ಸೇತುವೆ, ಬೇಸಾಯ, ನೀರುಪಾಲು
Last Updated 15 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕುಗ್ರಾಮ ಮಕ್ಕಿಗದ್ದೆಯಲ್ಲಿ ಬುಧವಾರ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ಇಲ್ಲಿನ ಹಳ್ಳದ ನೀರು 20 ಅಡಿಗಳಷ್ಟು ಉಕ್ಕಿ ಹರಿದು ‌ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ಯಾವುದೇ ನದಿಗೆ ಸಂಪರ್ಕ ಹೊಂದಿರದ ಈ ಹಳ್ಳದಲ್ಲಿ ಬೆಟ್ಟದ ಬರುವ ನೀರು ಹರಿಯುತ್ತದೆ. ಆದರೂ ಒಮ್ಮಿಂದೊಮ್ಮೆಲೇ ರಭಸವಾಗಿ ನೀರು ಏರಿಕೆಯಾಗಿ ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು.

ನೀರಿನ ರಭಸಕ್ಕೆ ಬೆಟ್ಟದ ಮೇಲಿನ ಬಂಡೆಕಲ್ಲುಗಳು ಕೊಚ್ಚಿಹೋಗಿವೆ. ಹಲವು ಕಡೆ ಹಳ್ಳ ತನ್ನ ದಿಕ್ಕನ್ನು ಬದಲಾಯಿಸಿ ಬೇರೆ ಕಡೆಯಲ್ಲಿ ಹರಿಯತೊಡಗಿದೆ. ಹಿಂದೆ ಹಳ್ಳದ ಎರಡೂ ದಂಡೆಗಳ ನಡುವಿನ ಅಂತರ ಸುಮಾರು 15 ಅಡಿಗಳಷ್ಟಿತ್ತು. ಈಗ ನೀರಿನ ರಭಸಕ್ಕೆ ಸಿಲುಕಿ ಸುಮಾರು 35 ಅಡಿಗಳಷ್ಟು ಅಗಲವಾಗಿದೆ. ಹಳ್ಳದ ಆಸುಪಾಸಿನ ಮರಗಳು ಬುಡಸಮೇತ ಕೊಚ್ಚಿಕೊಂಡು ಹೋಗಿವೆ. ಬೆಟ್ಟದ ಮೇಲಿದ್ದ ಸುಮಾರು 30 ಅಡಿ ಉದ್ದದ ಮರವೊಂದು ಹಳ್ಳದ ಪಾಲಾಗಿದೆ.

ಸಂಪರ್ಕ ಕಡಿತ: ಮಕ್ಕಿಗದ್ದೆಯಲ್ಲಿ 20ರಿಂದ 25 ಕುಟುಂಬಗಳಿವೆ. ಊರಿನ ಎರಡೂ ಕಡೆ ಹಳ್ಳಗಳಿವೆ. ಜಲಾನಯನ ನಿರ್ವಹಣೆ ಯೋಜನೆಯಲ್ಲಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಒಂದೊಂದು ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಪೈಕಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ಕಿರು ಸೇತುವೆಯು ಕುಸಿದು ಹೋಗಿದೆ.

ಗ್ರಾಮದ ಲಕ್ಷ್ಮಿ ಸುಬ್ರಾಯ ಹರಿಕಂತ್ರ ಎಂಬುವವರು ನೀರು ರಭಸವಾಗಿ ಹರಿಯುತ್ತಿದ್ದಾಗ ಸೇತುವೆ ದಾಟಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಸೇತುವೆಯ ತುದಿಯ ಮಣ್ಣು ಕೊಚ್ಚಿ ಹೋಗಿ ಅಪಾಯಕ್ಕೆ ಸಿಲುಕಿದ್ದರು. ಕೂಡಲೇ ರಕ್ಷಣೆಗೆ ಧಾವಿಸಿದ ಊರಿನ ಯುವಕರು, ಹಗ್ಗದ ಸಹಾಯದಿಂದ ಪ್ರಾಣಾಪಾಯದಿಂದ ಪಾರು ಮಾಡಿದರು. ಇನ್ನೊಂದು ಸೇತುವೆ ಶಿಥಿಲಗೊಂಡಿದ್ದು, ಊರಿನ ಸಂಪರ್ಕ ಕಡಿತಗೊಂಡಿದೆ.

ಹಳ್ಳದ ಅಂಚಿನಲ್ಲಿ ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ದಂಡೆ ಕಿತ್ತುಕೊಂಡು ಹೋಗಿದೆ. ಇಲ್ಲಿನ ಸುಮಾರು ಅರ್ಧ ಭಾಗದಷ್ಟು ಭತ್ತದ ಬೆಳೆ, ಅಡಿಕೆ, ತೆಂಗು, ಬಾಳೆ ಗಿಡಗಳು ನೀರುಪಾಲಾಗಿವೆ. ಗದ್ದೆಗಳಲ್ಲಿ ದೊಡ್ಡ ಗಾತ್ರದ ಕಲ್ಲುಗಳು ಬಿದ್ದಿವೆ. ಹಲವು ಬಾವಿಗಳು ಕುಸಿದಿದ್ದರೆ, ಕೆಲವು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಪಂಪ್‌ಸೆಟ್‌ಗಳೂ ಕೊಚ್ಚಿಹೋಗಿವೆ.

ರಾಜು ಹರಿಕಂತ್ರ ಎಂಬುವವರ ಮನೆಯ ಮುಂಭಾಗದ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಎರಡು ಕುಟುಂಬಗಳಿಗೆ ದಾರಿಯೇ ಇಲ್ಲದಂತಾಗಿದೆ. ಸುಕ್ರು ಓಮು ಹರಿಕಂತ್ರ ಅವರ ಗದ್ದೆಯಲ್ಲಿ ದೊಡ್ಡ ಮರವೊಂದು ಬಂದು ಬಿದ್ದಿದೆ. ತಂತಿ ಬೇಲಿ ಕೊಚ್ಚಿಕೊಂಡು ಹೋಗಿದೆ.

ಮಕ್ಕಿಗದ್ದೆಯಿಂದ ನೀರು ರಭಸವಾಗಿ ಬಂದ ಪರಿಣಾಮ, ಮಾಸ್ತಿಕಟ್ಟೆ ಸೇತುವೆಯ ಆಸುಪಾಸಿನ ಸುಮಾರು ಎಂಟು ಮನೆಗಳು ಜಲಾವೃತವಾದವು. ಹೊನ್ನಳ್ಳಿಯ ನೀಲಾ ಹರಿಕಂತ್ರ ಎಂಬುವವರ ತೋಟದಲ್ಲಿ ತೆಂಗು ಮತ್ತು ಅಡಿಕೆ ಸಸಿಗಳು ನೀರುಪಾಲಾಗಿವೆ. ಒಂದು ಗಂಟೆ ಗಂಗಾವಳಿ ನದಿಯ ಮಟ್ಟವೂ ಏರಿಕೆಯಾಗಿತ್ತು.

ಬೆಳೆದ ಪೈರು ನೀರುಪಾಲು: ‘ತಾಲ್ಲೂಕಿನಲ್ಲಿ ಎಷ್ಟೇ ದೊಡ್ಡ ಪ್ರವಾಹ ಬಂದಿದ್ದರೂ ನಮಗೆ ತೊಂದರೆಯಾಗಿರಲಿಲ್ಲ. ಇಬ್ಬರು ಗಂಡು ಮಕ್ಕಳು ಮಂಗಳೂರಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ಮನೆಯಲ್ಲಿ ಚಿಕ್ಕ ಮಕ್ಕಳು ಮತ್ತು ಸೊಸೆಯಂದಿರು ಮಾತ್ರ ಇದ್ದು ದಿಕ್ಕೇ ತೋಚದಂತಾಗಿತ್ತು. 70 ವರ್ಷಗಳಿಂದಲೂ ಇಲ್ಲಿ ಕೃಷಿ ಮಾಡುತ್ತ ಬಂದಿದ್ದೇವೆ. ಬೆಳೆದು ನಿಂತ ಭತ್ತದ ಪೈರು ಕಣ್ಣೆದುರೇ ನಾಶವಾಗುವುದು ಸಹಿಸಲಾಗುತ್ತಿಲ್ಲ’ ಎಂದು 90 ವರ್ಷದ ಹೊನ್ನಮ್ಮ ಹರಿಕಂತ್ರ ಕಣ್ಣೀರಿಟ್ಟರು.

‘ಇದೇ ಬೇಸಿಗೆಯಲ್ಲಿ ಸುಮಾರು ₹ 2 ಲಕ್ಷ ಖರ್ಚು ಮಾಡಿ ಜಮೀನು ಹದ ಮಾಡಿಸಿದ್ದೆ. ಈಗ ಅದು ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಕೊಟ್ಟು ನಮ್ಮ ಸ್ಥಿತಿಯನ್ನು ಅವಲೋಕಿಸಲಿ’ ಎಂದು ಸ್ಥಳೀಯ ನಿವಾಸಿ ರಾಜು ಹರಿಕಂತ್ರ ಅಳಲು ತೋಡಿಕೊಂಡರು.

ಗ್ರಾಮಕ್ಕೆ ಕಂದಾಯ ನಿರೀಕ್ಷಕ ರಾಘವೇಂದ್ರ ಜನ್ನು ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಂಧ್ಯಾ ರಾಣೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

*
* ಕೃಷಿ ಮತ್ತು ಕಂದಾಯ ಇಲಾಖೆಯವರು ಪರಿಶೀಲನೆ ನಡೆಸಿದ ಬಳಿಕ ಹಾನಿಯ ಅಂದಾಜು ತಿಳಿಯುತ್ತದೆ. ಗ್ರಾಮದ ಸ್ಥಿತಿಯ ಬಗ್ಗೆ ತಹಶೀಲ್ದಾರರ ಗಮನಕ್ಕೆ ತರಲಾಗುವುದು.
– ರಾಘವೇಂದ್ರ ಜನ್ನು, ಕಂದಾಯ ನಿರೀಕ್ಷಕ.

*
ಮಳೆ ಮತ್ತು ಹಾನಿಯ ಬಗ್ಗೆ ಮಾಹಿತಿ ದೊರೆತಿದೆ. ಸಭೆಯಲ್ಲಿ ಭಾಗಿಯಾಗಿದ್ದ ಕಾರಣ ಭೇಟಿ ನೀಡಲಾಗಲಿಲ್ಲ. ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತೇವೆ.
– ಎಂ.ಎನ್.ಭಂಡಾರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT