ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಡ್ತಿ’ಯಲ್ಲಿ ಕೊಚ್ಚಿಹೋದ ಬದುಕು

ಬೀದಿಗೆ ಬಿದ್ದ ಕುಣಬಿಗರ ಕುಟುಂಬಗಳು, ಕುಡಿಯುವ ನೀರಿಗೂ ತತ್ವಾರ
Last Updated 21 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಶಿರಸಿ: ಬೇಡ್ತಿ ನದಿಯ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಕುಣಬಿ ಸಮುದಾಯದ ಒಂಬತ್ತು ಕುಟುಂಬದವರು, ಯಾವುದೇ ರಕ್ಷಣೆಯಿಲ್ಲದ ಶೆಡ್‌ನಲ್ಲಿ ಸಾಮೂಹಿಕವಾಗಿ ವಾಸಿಸುತ್ತಿದ್ದಾರೆ. ನೀರಿನಿಂದಲೇ ನಿರಾಶ್ರಿತರಾಗಿರುವ ಇವರಿಗೆ ಕುಡಿಯುವ ನೀರಿನದೇ ದೊಡ್ಡ ಸಮಸ್ಯೆಯಾಗಿದೆ.

ಆ.5ರಂದು ಬೇಡ್ತಿ ನದಿಗೆ ಬಂದ ಪ್ರವಾಹದಿಂದ ಯಲ್ಲಾಪುರ ತಾಲ್ಲೂಕು ಕುಂಬ್ರಿ ಸೋಮನಳ್ಳಿಯ ಈ ಒಂಬತ್ತು ಕುಟುಂಬದ 40 ಸದಸ್ಯರು ಎಲ್ಲವನ್ನೂ ಕಳೆದುಕೊಂಡು, ತಾಲ್ಲೂಕು ಆಡಳಿತ ಕಲ್ಪಿಸಿರುವ ಶೆಡ್‌ನಲ್ಲಿ 15 ದಿನಗಳಿಂದ ಆಶ್ರಯ ಪಡೆದಿದ್ದಾರೆ. ಹರಿಯುವ ನೀರನ್ನೇ ಅವಲಂಬಿಸಿರುವ ಅವರಲ್ಲಿ ಹೆಚ್ಚಿನವರು ವಾಂತಿ–ಭೇದಿ, ತಲೆನೋವು, ಜ್ವರದಿಂದ ಬಳಲುತ್ತಿದ್ದಾರೆ.

‘ನದಿಯ ನೆರೆಯಿಂದ ಬಾವಿಯ ನೀರು ಕಲುಷಿತಗೊಂಡು ಬಳಕೆಗೆ ಬಾರದಂತಾಗಿದೆ. ಹರಿಯುವ ನೀರನ್ನೇ ಹಿಡಿದುತಂದು, ಕಾಯಿಸಿ ಕುಡಿಯುತ್ತೇವೆ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಎಲ್ಲರೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗದೇ 10 ದಿನಗಳಾಗಿವೆ. ಖಾಸಗಿ ವಾಹನ, ಬೈಕ್‌ ಆಶ್ರಯಿಸಿ, ನಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ’ ಎನ್ನುತ್ತಾರೆ ಗೃಹಿಣಿ ಸವಿತಾ ಕುಣಬಿ.

‘ಮುರಿದು ಬಿದ್ದಿರುವ ಮನೆ ದುರ್ವಾಸನೆ ಬೀರುತ್ತಿದೆ. ನದಿಯ ನೀರಿನ ಜೊತೆಗೆ ಬಂದಿರುವ ರಾಸಾಯನಿಕ, ಮನೆಯನ್ನು ಹೊಲಸು ಮಾಡಿದೆ. ಅಲ್ಲಿ ಒಮ್ಮೆ ಹೋಗಿ ಬಂದರೆ, ಕಾಲು ಕೊಳೆಯುತ್ತದೆ. ಅಲ್ಲಿಯೇ ಕಟ್ಟಿರುವ ಜಾನುವಾರು ಸಹ ಇದೇ ಸಮಸ್ಯೆ ಅನುಭವಿಸುತ್ತಿವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಮ್ಮೆಲೇ ನದಿಯ ನೀರು ಮನೆಯನ್ನು ಆವರಿಸಿತು. ಮನೆಯ ಪಣತದಲ್ಲಿದ್ದ 7–8 ಕ್ವಿಂಟಲ್‌ ಭತ್ತ ಮೂರು ದಿನ ನೀರಿನಲ್ಲಿ ಮುಳುಗಿಯೇ ಇದ್ದ ಪರಿಣಾಮ, ಮೊಳಕೆಯೊಡೆದಿದೆ. ವರ್ಷದ ಊಟಕ್ಕಾಗುವಷ್ಟು ಇದ್ದ ಭತ್ತ ನಾಶವಾಗಿದೆ. ಕೂಲಿ ಕೆಲಸವನ್ನೇ ಅವಲಂಬಿಸಿರುವ ನಮಗೆ ಮುಂದೆ ಊಟಕ್ಕೆ ಏನು ಮಾಡಬೇಕೆಂಬುದು ತೋಚುತ್ತಿಲ್ಲ’ ಎಂದರು ತಿಮ್ಮಣ್ಣ ಕುಣಬಿ.

ಕಣ್ಣೆದುರೇ ಮನೆಯನ್ನು ಕಳೆದುಕೊಂಡಿರುವ ನಾರಾಯಣ ಕುಣಬಿ ಅವರಿಗೆ ಖಿನ್ನತೆ ಆವರಿಸಿದೆ. ದಿನವಿಡೀ ಮಲಗಿರುವ ಅವರಿಗೆ ಮಾತನಾಡಲೂ ಆಗುತ್ತಿಲ್ಲ. ಬಾಯಿತುಂಬ ಬೊಬ್ಬೆಗಳಾಗಿವೆ. ಬಾಗಿಲು ಇಲ್ಲದ, ತೆರೆದ ಶೆಡ್‌ನಲ್ಲಿ, ಚಳಿಯಲ್ಲೇ ಅವರು ದಿನ ಕಳೆಯುತ್ತಿದ್ದಾರೆ. ಕಾಯಿಲೆಗೆ ತುತ್ತಾಗಿರುವ ಮಕ್ಕಳನ್ನು ಬೆಚ್ಚಗೆ ಇಡುವುದೇ ತಾಯಂದಿರಿಗೆ ಸವಾಲಾಗಿದೆ. ಸೋದೆ ವಾದಿರಾಜ ಮಠವು ಈ ಕುಟುಂಬಗಳನ್ನು ದತ್ತು ಸ್ವೀಕರಿಸುವ ಭರವಸೆ ನೀಡಿದೆ.

ನಿತ್ಯ ಆರು ಕಿ.ಮೀ ಕಾಲ್ನಡಿಗೆ: ಬಿಸಿಯೂಟ ಕಾರ್ಯಕರ್ತೆ ಸವಿತಾ ಕುಣಬಿ ಅವರ ಮನೆ ನೆಲಸಮವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಅವರು ಬಾಡಿಗೆ ಮನೆಯಲ್ಲಿದ್ದಾರೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ಶಾಲೆಗೆ ಬಂದು ಮಕ್ಕಳಿಗೆ ಅಡುಗೆ ತಯಾರಿಸಿ ಪುನಃ, ಬಾಡಿಗೆ ಮನೆ ಸೇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT