ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಶಿ: ಮಳೆಗಾಲಕ್ಕೆ ನೆರೆ, ಬೇಸಿಗೆಗೆ ಬರ

ನದಿ ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ
Last Updated 20 ಸೆಪ್ಟೆಂಬರ್ 2022, 16:17 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡದ ಗಡಿಭಾಗದ ಗ್ರಾಮ ಪಂಚಾಯ್ತಿ ಆಗಿರುವ ಭಾಶಿಯಲ್ಲಿ ವರದಾ ನದಿ ಹರಿದರೂ ಜನರಿಗೆ ನೀರಿನ ಸಮಸ್ಯೆ ಎದುರಿಸುವುದು ತಪ್ಪುತ್ತಿಲ್ಲ.

ಕೃಷಿ ಜೀವನಾಧಾರ ಆಗಿಸಿಕೊಂಡಿರುವ ಭಾಶಿ ಗ್ರಾಮ ಪಂಚಾಯ್ತಿಯಲ್ಲಿ ರೈತರ ಪಾಲಿಗೆ ‘ನೀರು’ ಶಾಪವಾಗಿದೆ. ಮಳೆಗಾಲದಲ್ಲಿ ಉಕ್ಕೇರಿ ಬರುವ ವರದಾ ನದಿ ನೂರಾರು ಎಕರೆ ಕೃಷಿಭೂಮಿಯನ್ನು ಆವರಿಸಿಕೊಂಡು ತಿಂಗಳುಗಟ್ಟಲೆ ನಿಲ್ಲುತ್ತದೆ. ಇದರಿಂದ ಭತ್ತ, ಅನಾನಸ್, ಶುಂಠಿ, ಅಡಿಕೆ, ಬಾಳೆ ಸೇರಿದಂತೆ ವರ್ಷದ ಬೆಳೆ ನೀರು ಪಾಲಾಗುತ್ತದೆ.

ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿನ ಮಟ್ಟ ವಿಪರೀತ ಇಳಿಕೆಯಾಗುತ್ತದೆ. ಕೊಳವೆ ಬಾವಿ ಆಧರಿಸಿ ಕೃಷಿ ಮಾಡಲು ಮುಂದಾದರೂ ಅಂತರ್ಜಲ ಕುಸಿತದಿಂದ ಬರದ ಸನ್ನಿವೇಶ ಉಂಟಾಗುತ್ತದೆ. ಹೀಗಾಗಿ ಇಲ್ಲಿನ ಕೃಷಿ ಕ್ಷೇತ್ರ ನಿರೀಕ್ಷಿತ ಪ್ರಗತಿ ಕಾಣುವಲ್ಲಿ ಇಂದಿಗೂ ಹಿಂದೆ ಬಿದ್ದಿದೆ ಎಂಬುದು ಸ್ಥಳೀಯರ ದೂರು.

ಭಾಶಿ, ಕಲಕೊಪ್ಪ, ಮೊಗಳ್ಳಿ, ತಿಗಣಿ, ನರೂರು, ಚಿಕ್ಕದುಗ್ಲಿ ಗ್ರಾಮಗಳನ್ನು ಒಳಗೊಂಡ ಭಾಶಿ ಗ್ರಾಮ ಪಂಚಾಯ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ತಲೆನೋವಾಗಿದೆ. ಮಳೆಗಾಲದ ಬಹುಪಾಲು ದಿನ ಇಲ್ಲಿನ ಮೊಗಳ್ಳಿ ಗ್ರಾಮ ನದಿ ನೀರಿನಿಂದ ಆವೃತಗೊಂಡು ದ್ವೀಪವಾಗಿ ಮಾರ್ಪಡುತ್ತದೆ. ಭಾಶಿ ಗ್ರಾಮದ ಕೃಷಿ ಭೂಮಿಯೂ ನೀರಿನಲ್ಲಿ ಮುಳುಗಿಕೊಂಡಿರುತ್ತದೆ. ಇದೇ ಗ್ರಾಮಗಳಲ್ಲಿ ಬೇಸಿಗೆ ವೇಳೆ ಕುಡಿಯಲು ನೀರು ಸಿಗದೆ ಜನ ದೂರದ ಊರುಗಳಿಂದ ನೀರು ತರಬೇಕಾದ ಸ್ಥಿತಿ ಇದೆ.

‘ಕೊಳವೆ ಬಾವಿ ಕೊರೆಯಿಸಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಹಲವು ಪ್ರಯತ್ನ ನಡೆದಿದೆ. ಆದರೆ ಒಂದೆರಡು ಕೊಳವೆ ಬಾವಿ ಮಾತ್ರ ನೀರು ಒದಗಿಸುತ್ತವೆ. ಉಳಿದವು ಬತ್ತಿ ಹೋಗುತ್ತವೆ. ಜಲಜೀವನ ಮಿಷನ್ ಯೋಜನೆ ಅಡಿ ನೀರು ನೀಡುವ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ವಿನಯ ಗೌಡರ್.

‘ಬನವಾಸಿಯಿಂದ ಮೊಗಳ್ಳಿಗೆ ಸಾಗುವ ಮುಖ್ಯ ರಸ್ತೆಯನ್ನು ವಿಸ್ತರಣೆ ಮಾಡಲಾಗಿದೆ. ಆದರೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿಲ್ಲ. ಕೆಲವು ಕಡೆ ಇನ್ನಷ್ಟೆ ವಿಸ್ತರಣೆ ಆಗಬೇಕಿದೆ. ಗ್ರಾಮದ ಒಳ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಬೇಡಿಕೆಯೂ ಈಡೇರಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ಪ್ರವೀಣ ಪಾಟೀಲ್.

ರಸ್ತೆಗಳ ಬೇಡಿಕೆ:

‘ಮೊಗಳ್ಳಿ, ಕಲಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಳ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲು ಬೇಡಿಕೆ ಇದೆ. ಹೊಸಕೇರಿ ರಸ್ತೆ ಏರಿಕೆಗೆ ಸಚಿವರ ಸೂಚನೆ ಮೇರೆಗೆ ಪ್ರಸ್ತಾವ ಕಳಿಸಲಾಗಿದೆ. ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಮುಖ್ಯ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಈಚಿನ ವರ್ಷದಲ್ಲಿ ನಡೆದಿದೆ’ ಎಂದು ಪಿಡಿಒ ಪಿ.ಎಚ್.ಯಲ್ಲಾರಿ ತಿಳಿಸಿದರು.

-----------------------

ಮೊಗಳ್ಳಿ–ಹೊಸಕೇರಿ ಸಂಪರ್ಕಿಸುವ ರಸ್ತೆ ಎತ್ತರಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ನೆರೆಯಿಂದ ಸಂಪರ್ಕ ಕಡಿತವಾಗದಂತೆ ನೋಡಿಕೊಳ್ಳಲಾಗುವುದು.

ಶಿವರಾಮ ಹೆಬ್ಬಾರ

ಕಾರ್ಮಿಕ ಸಚಿವ

-----------------------

ಅಂಕಿ–ಅಂಶ

4,874

ಭಾಶಿ ಜನಸಂಖ್ಯೆ

1,547

ಮನೆಗಳ ಸಂಖ್ಯೆ

6

ಗ್ರಾಮಗಳ ಸಂಖ್ಯೆ

800 ಎಕರೆ

ನೆರೆಗೆ ಹಾನಿಯಾಗುವ ಕೃಷಿ ಭೂಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT