ಮಂಗಳವಾರ, ಸೆಪ್ಟೆಂಬರ್ 22, 2020
22 °C
ಮುಂದುವರಿಯದ ಮಳೆಯ ಅಬ್ಬರ

ಕಾಳಿಯಲ್ಲಿ ಕಂಡು ಕೇಳರಿಯದ ಪ್ರವಾಹ: ಗುರುವಾರವೂ ಶಾಲೆ, ಕಾಲೇಜುಗಳಿಗೆ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳು ಹಾಗೂ ಹಳ್ಳ ಕೊಳ್ಳಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸತತ ಎರಡನೇ ದಿನವಾದ ಬುಧವಾರವೂ ಕಾಳಿಯ ರೌದ್ರಾವತಾರ ಮುಂದುವರಿದಿತ್ತು.

ಕದ್ರಾ ಅಣೆಕಟ್ಟೆಗೆ ಹಿಂದೆಂದೂ ಕಂಡು ಕೇಳರಿಯದಂತಹ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಬುಧವಾರ ಮಧ್ಯಾಹ್ನದ ವೇಳೆಗೆ 1.42 ಲಕ್ಷ ಕ್ಯುಸೆಕ್ ದಾಖಲಾಗಿದ್ದ ಕಾರಣ 1.52 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಜಲಾಶಯದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಅಣೆಕಟ್ಟೆಯ 10 ಗೇಟ್‌ಗಳು ತೆರೆದೇ ಇಡಲಾಗಿತ್ತು. 

ಇದರ ಪರಿಣಾಮ ಮಲ್ಲಾಪುರದ ಕೈಗಾ ಟೌನ್‌ಶಿಪ್, ಮಲ್ಲಾಪುರ ಗ್ರಾಮ, ಹಿಂದೂವಾಡ, ಕ್ರಿಶ್ಚಿಯನ್ ವಾಡ, ಮುಸ್ಲಿಂ ವಾಡಗಳಲ್ಲಿ ನೀರು ತುಂಬಿತು. ಕೈಗಾ– ಕಾರವಾರ ಹೆದ್ದಾರಿ ಮತ್ತಷ್ಟು ಪ್ರಮಾಣದಲ್ಲಿ ಜಲಾವೃತವಾಯಿತು. 

ನೆರೆ ಪೀಡಿತರ ನೆರವಿಗೆ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ನೌಕಾಪಡೆಯ ಸಿಬ್ಬಂದಿ ಧಾವಿಸಿದ್ದಾರೆ. ಮಂಗಳವಾರ ತಡರಾತ್ರಿಯವರೆಗೂ ಕಾರ್ಯಾಚರಣೆ ಮಾಡಲಾಗಿದ್ದು, ನೌಕಾಪಡೆಯ ಸಿಬ್ಬಂದಿ 500 ಜನರನ್ನು ರಕ್ಷಿಸಿದ್ದಾರೆ. ಬುಧವಾರ ಬೆಳಿಗ್ಗೆ ಏಳು ಗಂಟೆಗೇ ಮತ್ತೆ ರಕ್ಷಣಾ ಕಾರ್ಯ ಆರಂಭಿಸಿ, ಕೈಗಾ ಅಣುವಿದ್ಯುತ್ ಸ್ಥಾವರದ 100 ಸಿಬ್ಬಂದಿಯನ್ನು ಟೌನ್‌ಶಿಪ್‌ನಿಂದ ತೆರವು ಮಾಡಲಾಯಿತು. ಅಂತೆಯೇ ಹಿಂದೂವಾಡದಲ್ಲಿ 55 ಮಹಿಳೆಯರು ಮತ್ತು ಮಕ್ಕಳನ್ನು ಕೂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಬರಲಾಯಿತು. 

ಸೀಬರ್ಡ್ ನೌಕಾನೆಲೆಯಿಂದ ತುರ್ತು ಕಾರ್ಯಾಚರಣೆಗೆ ಮೂರು ವಾಹನಗಳು, ಮುಳುಗು ತಜ್ಞರು, ಜೆಮಿನಿ ದೋಣಿಗಳು, ಲೈಫ್ ಜಾಕೆಟ್‌ಗಳು, ಹಗ್ಗ ಮುಂತಾದ ಸಲಕರಣೆಗಳನ್ನು ಪ್ರವಾಹ ಪೀಡಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ ಅಂಕೋಲಾ ತಾಲ್ಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಸಂಪೂರ್ಣ ಜಲಾವೃತವಾಗಿರುವ ಅಗ್ರಗೋಣ, ಕೊಡ್ಸಣಿ, ಉಳುವರೆ, ಜೂಗ, ಶೇಡಿಕಟ್ಟೆ ಗ್ರಾಮಗಳಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದರು. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜನ, ಜಾನುವಾರು ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸ ಮುಂದೂಡಲು ಜಿಲ್ಲಾಧಿಕಾರಿ ಮನವಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಹಾಗೂ ಅದರಿಂದ ಹಾನಿ ಹೆಚ್ಚಾಗುತ್ತಿದೆ. ಆದ್ದರಿಂದ ಮುಂದಿನ ಮೂರು ದಿನ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರು ಜಿಲ್ಲೆಗೆ ಪ್ರಯಾಣಿಸದಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮನವಿ ಮಾಡಿದ್ದಾರೆ.

ಜಿಲ್ಲೆಯನ್ನು ಪ್ರವೇಶಿಸುವ ಎಲ್ಲ ರಸ್ತೆಗಳಲ್ಲೂ ಪ್ರವಾಹ, ಗುಡ್ಡ ಕುಸಿತ ಅಥವಾ ಮರ ಬೀಳುವ ಅಪಾಯಕಾರಿ ಸಂದರ್ಭಗಳೇ ಹೆಚ್ಚಿವೆ. ಆದ್ದರಿಂದ ಈ ದಿನಗಳಲ್ಲಿ ಪ್ರಯಾಣಿಸಿ ಸಂಕಷ್ಟಕ್ಕೆ ಗುರಿಯಾಗಬಾರದು. ಹಾಗಾಗಿ ಪ್ರವಾಸವನ್ನು ಮುಂದೂಡುವಂತೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು