ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಮೊಗವಳ್ಳಿ: ಇಳಿಮುಖಗೊಂಡ ಮಳೆ, ರಭಸ ಕಳೆದುಕೊಂಡ ನದಿಗಳು- ದೂರವಾಗದ ನೆರೆ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಳೆದ ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆ ಶನಿವಾರ ಶಾಂತಗೊಂಡಿದೆ. ಉಕ್ಕಿ ಹರಿದಿದ್ದ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಜನರಲ್ಲಿ ತುಸು ನೆಮ್ಮದಿ ಹುಟ್ಟಿಸಿದೆ. ಆದರೆ, ಬನವಾಸಿ ಹೋಬಳಿಯ ಮೊಗವಳ್ಳಿ ಇನ್ನೂ ವರದೆಯ ಅಬ್ಬರಕ್ಕೆ ಸಿಕ್ಕು ನಲುಗುತ್ತಿದೆ.

ಶನಿವಾರ ಸಂಜೆಯವರೆಗೂ ಗ್ರಾಮ ಜಲಾವೃತ ಸ್ಥಿತಿಯಲ್ಲಿತ್ತು. 80ಕ್ಕೂ ಹೆಚ್ಚು ಮನೆಗಳಿಗೆ ನದಿ ನೀರು ಆವರಿಸಿಕೊಂಡಿದೆ. ಈ ಭಾಗದಲ್ಲಿ ಮಣ್ಣಿನ ಗೋಡೆಗಳ ಮನೆಗಳು ಹೆಚ್ಚಿದ್ದು ಹಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.

ಜನರನ್ನು ಹೊಸಕೇರಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಮುಂದಾಗುವ ಅಧಿಕಾರಿಗಳ ಪ್ರಯತ್ನ ಕೈಗೂಡಿಲ್ಲ. ಬೆರಳೆಣಿಕೆಯಷ್ಟು ಜನ ಮಾತ್ರ ಕಾಳಜಿ ಕೇಂದ್ರಕ್ಕೆ ತೆರಳಿದ್ದಾರೆ. ಉಳಿದವರು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಎರಡು ದಿನಗಳಿಂದ ಸತತ ಮಳೆ ಸುರಿದ ಪರಿಣಾಮ ಕಕ್ಕಳ್ಳಿ ರಸ್ತೆಯಲ್ಲಿ ಗುಡ್ಡ ಕುಸಿತ ಮುಂದುವರೆದಿದೆ. ಮುಷ್ಕಿ, ಧೋರಣಗಿರಿ ಭಾಗದ ಹಲವೆಡೆ ರಸ್ತೆಗಳು ಮಣ್ಣಿನಿಂದ ಮುಚ್ಚಿಹೋಗಿವೆ.

ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆಗೆ ಎರಡು ದಶಕದ ಹಿಂದೆ ನಿರ್ಮಿಸಲಾಗಿದ್ದ ತೂಗುಸೇತುವೆ ಕೊಚ್ಚಿಹೋಗಿದೆ. ಹುಲೇಕಲ್ ಮತ್ತು ಇಟಗುಳಿ ನಡುವೆ ಇದ್ದ ಸಂಪರ್ಕ ಕೊಂಡಿಯನ್ನು ಇದು ತಪ್ಪಿಸಿದೆ. ಶಿರಸಿ–ಕುಮಟಾ ರಸ್ತೆಯ ನಡುವೆ ಹಲವೆಡೆ ನೀರು ತುಂಬಿಕೊಂಡ ಪರಿಣಾಮ ಕುಸಿತದ ಸಮಸ್ಯೆ ಸೃಷ್ಟಿಯಾಗಿ, ಭಾರಿ ವಾಹನಗಳ ಸಂಚಾರಕ್ಕೆ ಕೆಲಹೊತ್ತು ಅಡ್ಡಿಯಾಗಿತ್ತು.

ತಾಲ್ಲೂಕಿನಲ್ಲಿ ಸುಮಾರು 1 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕೃಷಿಭೂಮಿ ಜಲಾವೃತ ಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 30ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಬನವಾಸಿ ಭಾಗದಲ್ಲಿ ಇನ್ನಷ್ಟು ಮನೆಗಳು ಕುಸಿಯುವ ಸಾಧ್ಯತೆ ಇದ್ದು, ಹಾನಿಯ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು