ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ನಿರಾಶ್ರಿತರ ಕುಟುಂಬಕ್ಕೆ ಶಾಲೆಯೇ ಮನೆ

ಚುನಾವಣೆ ವೇಳೆಗೆ ಇಲ್ಲಿಂದ ಎಬ್ಬಿಸುವ ಆತಂಕ
Last Updated 14 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮುಂಡಗೋಡ: ‘ಮೂರು ತಿಂಗಳಿಂದ ಸರ್ಕಾರಿ ಶಾಲೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ಚುನಾವಣೆಯೂ ಎದುರಾಗಿದೆ. ಸದ್ಯ ವಾಸಿಸುತ್ತಿರುವ ಕೊಠಡಿ ಮತಕೇಂದ್ರವಾಗಲಿದೆ. ಅಧಿಕಾರಿಗಳು ಬಂದು ಯಾವಾಗ ಏಳು ಅಂತಾರೆ ಗೊತ್ತಿಲ್ಲ. ಪರ್ಯಾಯ ಜಾಗವನ್ನು ಹಂಚಿಕೆ ಮಾಡಿಲ್ಲ. ಎಲ್ಲ ಕಡೆ ಅರಣ್ಯ ಭೂಮಿಯಿದೆ. ಸೂರು ಕಳೆದುಕೊಂಡು ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ’ ಎಂದು ದಿಕ್ಕುತೋಚದಂತೆ ಕುಳಿತಿದ್ದ ಗೋಧುಬಾಯಿ ಧೂಯಿಪಡೆ ಅಲವತ್ತುಕೊಂಡರು.

ಕಳೆದ ಅಗಸ್ಟ್‌ನಲ್ಲಿ ಎದುರಾಗಿದ್ದ ನೆರೆಗೆ ಮನೆ ಕಳೆದುಕೊಂಡಿರುವ ತಾಲ್ಲೂಕಿನ ಯರೇಬೈಲ್ ಗ್ರಾಮದ ಧೂಯಿಪಡೆ ಕುಟುಂದವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಾಸಿಸುತ್ತಿದ್ದಾರೆ.

‘ನಿರಾಶ್ರಿತರ ಕೆಂದ್ರದಿಂದ ಗ್ರಾಮಕ್ಕೆ ಮರಳಿದ ನಂತರ, ಈ ಶಾಲೆಯೇ ಮನೆಯಾಗಿದೆ. ಉಕ್ಕಿ ಹರಿದ ಬೇಡ್ತಿ ಹಳ್ಳದಲ್ಲಿ ಮನೆ ತೇಲಿಹೋಗಿದೆ. ಮನೆ ಕುರುಹು ಕೂಡ ಸಿಗುವುದಿಲ್ಲ. ಆ ಜಾಗದಲ್ಲಿ, ಸದ್ಯ ಜಾನುವಾರುಗಳನ್ನು ಸಾಕಲು ಕೊಟ್ಟಿಗೆ ಕಟ್ಟಲಾಗಿದೆ. ಅಲ್ಲಿ ಮನೆ ಕಟ್ಟಿಕೊಳ್ಳಲು ಮತ್ತೆ ಹಳ್ಳ ಉಕ್ಕಿ ಬಂದಿತು ಎಂಬ ಭಯ ಒಂದೆಡೆಯಾದರೆ, ವಾಸವಿದ್ದ ಸ್ಥಳ ಅರಣ್ಯ ಭೂಮಿ ಆಗಿದೆ. ಗ್ರಾಮದಲ್ಲಿ ಬೇರೆ ಎಲ್ಲಿಯೂ ಜಾಗ ಸಿಗುತ್ತಿಲ್ಲ’ ಎಂದು ಭಾಗು ಧೂಯಿಪಡೆ ಬೇಸರಿಸಿದರು.

‘ಅಧಿಕಾರಿಗಳು ಪರ್ಯಾಯ ಜಾಗ ಕೊಡಿಸಲು ಪ್ರಯತ್ನಿಸಿದರೂ, ಗ್ರಾಮಸ್ಥರು ಸಹಕಾರ ನೀಡುತ್ತಿಲ್ಲ. ಗ್ರಾಮದಲ್ಲಿಯೇ ಚಿಕ್ಕಪ್ಪನಿಗೆ ಸೇರಿದ ಮನೆ ಮತ್ತು ಖಾಲಿ ಜಾಗವಿದ್ದು, ಅಲ್ಲಿ ವಾಸಿಸಲು ಗ್ರಾಮಸ್ಥರು ಸೂಚಿಸುತ್ತಾರೆ. ಆದರೆ ದುಡಿಯಲು ವಲಸೆ ಹೋಗಿರುವ ಆ ಕುಟುಂಬ, ಮರಳಿ ಬಂದಾಗ ಅವರಿಗೆ ಮನೆಯನ್ನು ಬಿಟ್ಟುಕೊಡಬೇಕಾಗುತ್ತದೆ’ ಎಂದರು.

‘ಎಲ್ಲರಿಗೂ ಪರಿಹಾರ ನೀಡಿದಂತೆ, ಅತಿಕ್ರಮಣ ಜಾಗದಲ್ಲಿ ವಾಸವಿದ್ದವರಿಗೂ ಪರಿಹಾರ ನೀಡಲಾಗಿದೆ. ಪರಿಹಾರ ನೀಡಿದ ಮಾತ್ರಕ್ಕೆ, ಹಾಲಿ ವಾಸವಿದ್ದ ಅತಿಕ್ರಮಣ ಜಾಗದ ಮೇಲೆ ಹಕ್ಕು ಸಾಧಿಸಲು ಬರುವುದಿಲ್ಲ. ಈ ಬಗ್ಗೆ ಫಲಾನುಭವಿಗಳು ಮುಚ್ಚಳಿಕೆ ಕೊಡಬೇಕಾಗುತ್ತದೆ’ ಎಂದು ತಹಶೀಲ್ದಾರ್‌ ಶ್ರೀಧರ್ ಮುಂದಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

**
ಎರಡು ಕಂತುಗಳಲ್ಲಿ ₹ 10 ಸಾವಿರ ಪರಿಹಾರ ಬಂದಿತ್ತು. ಈಚೆಗೆ ಮತ್ತೆ ₹ ಒಂದು ಲಕ್ಷ ಖಾತೆಗೆ ಜಮಾ ಆಗಿದೆ. ಇದನ್ನು ಪಡೆಯಲು, ಅನಧಿಕೃತ ವಾಸಸ್ಥಳದ ಮೇಲೆ ಯಾವುದೇ ಹಕ್ಕು ಹೊಂದಿರುವುದಿಲ್ಲ ಎಂದು ಸಹಿ ಮಾಡಿಕೊಡಲಾಗಿತ್ತು
–ಭಾಗು ಧೂಯಿಪಡೆ,ಫಲಾನುಭವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT