ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಕ್ಕೂ ಹೆಚ್ಚು ಮತ ಗಳಿಸಿ ದಾಖಲೆ ಬರೆದ ನಾಲ್ವರು!

ಜಿಲ್ಲೆಯಲ್ಲಿ ಚರ್ಚೆಯ ವಿಷಯವಾದ ಅತ್ಯಧಿಕ ಮತಗಳ ಅಂತರ, ಎಚ್‌.ಡಿ.ಕುಮಾರಸ್ವಾಮಿ ಅಲೆಗೆ ಕಾಂಗ್ರೆಸ್‌ ತತ್ತರ
Last Updated 17 ಮೇ 2018, 5:42 IST
ಅಕ್ಷರ ಗಾತ್ರ

ಮಂಡ್ಯ: ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳು ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆದು ಜಯಗಳಿಸಿರುವುದು ಜಿಲ್ಲೆಯ ಜನರಲ್ಲಿ ಅಚ್ಚರಿ ಸೃಷ್ಟಿಸಿದೆ. ಎಚ್‌.ಡಿ.ಕುಮಾರಸ್ವಾಮಿ ಅಲೆ ಜಿಲ್ಲೆಯಲ್ಲಿ ಸೃಷ್ಟಿಸಿದ ಬದಲಾವಣೆ ಈಗ ಚರ್ಚೆಯ ವಿಷಯವಾಗಿದೆ.

ನಾಗಮಂಗಲ ಕ್ಷೇತ್ರದಲ್ಲಿ ಸುರೇಶ್‌ಗೌಡ 1,12,396 ಮತ ಗಳಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇಷ್ಟೊಂದು ಮತ ಹರಿದು ಬರುತ್ತವೆ ಎಂದು ಅವರೇ ಎಣಿಸಿರಲಿಕ್ಕಿಲ್ಲ. ಹೆಚ್ಚೆಂದರೆ ನಾಲ್ಕೈದು ಸಾವಿರ ಮತಗಳ ಅಂತರದಿಂದ ಸೋಲು–ಗೆಲುವಾಗಬಹುದು ಎಂದೇ ಎಣಿಸಲಾಗಿತ್ತು. ಆದರೆ ಮತ ಎಣಿಕೆ ಆರಂಭವಾದ ನಂತರ ಹರಿದು ಬಂದ ಮತಗಳು ಅಚ್ಚರಿ ಸೃಷ್ಟಿಸಿದವು. ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಸುರೇಶ್‌ಗೌಡ ಅವರು ಪಡೆಯುತ್ತಿದ್ದ ಮತಗಳು ಏರುಗತಿಯಲ್ಲೇ ಇದ್ದವು. ಏಳೆಂಟು ಸುತ್ತು ಮುಕ್ತಾಯಗೊಳ್ಳುವ ಹೊತ್ತಿಗೆ ಸುರೇಶ್‌ಗೌಡರ ಗೆಲುವು ಖಚಿತವಾಗಿತ್ತು. ಪ್ರತಿ ಸುತ್ತಿನಲ್ಲಿ ಅವರು ಪಡೆಯುತ್ತಿದ್ದ ಮತಗಳ ಘೋಷಣೆ ಮಾಡುತ್ತಿದ್ದಾಗ ಹೊರಗೆ ನಿಂತಿದ್ದ ಜನರ ಕೂಗು ಮುಗಿಲು ಮುಟ್ಟಿತ್ತು. ಅವರು 47,667 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದರು.

ಫಲಿತಾಂಶ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌ಗೌಡ ಸಹ ಅಚ್ಚರಿ ವ್ಯಕ್ತಪಡಿಸಿದರು.‘ಜನರು ತಕ್ಕ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾಗಮಂಗಲ ಜನರು ದೊಡ್ಡ ಬಹುಮಾನವನ್ನೇ ಕೊಟ್ಟಿದ್ದಾರೆ. ಗೆಲುವು ನಿರೀಕ್ಷಿತವಾಗಿತ್ತು. ಆದರೆ ಮತಗಳ ಅಂತರ ಕಂಡು ಮನಸ್ಸು ತುಂಬಿ ಬಂದಿದೆ. ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಪ್ರಭಾವದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ’ ಎಂದು ಹೇಳಿದರು.

ಕೊಚ್ಚಿ ಹೋದ ಅಭಿವೃದ್ಧಿ ಮಾತು : ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳುತ್ತಿದ್ದ ₹ 2 ಸಾವಿರ ಕೋಟಿ ಅನುದಾನದ ವಿಷಯ ಎಚ್‌.ಡಿ.ಕುಮಾರಸ್ವಾಮಿ ಅಲೆಗೆ ಕೊಚ್ಚಿ ಹೋಗಿದೆ. ಅಭಿವೃದ್ಧಿ ಕೆಲಸಗಳು ಹಾಗೂ ಕುಮಾರಸ್ವಾಮಿ ನಾಮಬಲದ ನಡುವೆ ನಡೆದ ಹೋರಾಟದಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಪ್ರಚಾರದ ಕಡೆಯ ದಿನ ಮುಖ್ಯಮಂತ್ರಿ ಬಂದು ಪ್ರಚಾರ ನಡೆಸಿದ್ದ ಕಾರಣ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದೇ ಎಣಿಸಲಾಗಿತ್ತು. ಆದರೆ ಎಣಿಕೆಗಳೆಲ್ಲವೂ ತಲೆಕೆಳಗಾದವು. ಕುಮಾರಸ್ವಾಮಿ ಪ್ರಚಾರದ ಕೊನೆಯ ದಿನ ಮಳವಳ್ಳಿಗೆ ಬರಬೇಕಾಗಿತ್ತು. ಅವರು ಬರಲಿಲ್ಲ, ಆದರೆ ಅವರು ಫೋನ್‌ ಮೂಲಕ ಹಾಸನದಿಂದಲೇ ಭಾಷಣ ಮಾಡಿದರು. ಇತ್ತ ಮಳವಳ್ಳಿಯಲ್ಲಿ ಸ್ಪೀಕರ್‌ಗೆ ಮೊಬೈಲ್‌ ಫೋನ್‌ ಸಂಪರ್ಕ ಮಾಡಿ ಜನರಿಗೆ ಮಾತು ಕೇಳಿಸಲಾಯಿತು. ಕುಮಾರಸ್ವಾಮಿ ಫೋನ್‌ ಮೂಲಕವೇ ಮನಬಿಚ್ಚಿ ಮಾತಯಾಚನೆ ಮಾಡಿದರು. ಅವರ ಮಾತುಗಳು ಜನರಲ್ಲಿ ಭಾವುಕತೆ ಸೃಷ್ಟಿಸಿದವು.

ಡಾ.ಅನ್ನದಾನಿ ಕೂಡ ಲಕ್ಷ ಮತ ನಿರೀಕ್ಷೆ ಮಾಡಿರಲಿಲ್ಲ. ಅವರು 1,03,038 ಮತ ಗಳಿಸಿ 26,760 ಮತಗಳ ಅಂತರದಿಂದ ವಿಜಯಮಾಲೆ ಧರಿಸಿದರು. ಮೊದಲ ಸುತ್ತಿನಿಂದ ಕಡೆಯ ಸುತ್ತಿನವರೆಗೂ ಅವರು ಮುನ್ನಡೆ ಕಾಯ್ದುಕೊಂಡು ಬಂದು ಗೆಲುವಿನ ನಗೆ ಬೀರಿದರು.

ಮೂರನೇ ಸುತ್ತಲ್ಲೇ ಕಾಲ್ಕಿತ್ತರು: ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ಅವರಿಗೆ ಮೂರನೇ ಸುತ್ತಲ್ಲೇ ಸೋಲು ಸ್ಪಷ್ಟವಾಗಿತ್ತು. ರವೀಂದ್ರ ಶ್ರೀಕಂಠಯ್ಯ ಮೂರನೇ ಸುತ್ತಿನಲ್ಲಿ 11 ಸಾವಿರ ಮತ ಮುಂದಿದ್ದರು. ಇದರಿಂದ ಕಂಗೆಟ್ಟ ರಮೇಶ್‌ ಬಂಡಿಸಿದ್ದೇಗೌಡ ಎಣಿಕೆ ಕೇಂದ್ರದಿಂದ ಕಾಲ್ಕಿತ್ತರು. ಯಾರ ಜತೆಯೂ ಮಾತನಾಡದೆ ಹೊರ ನಡೆದರು. 21 ಸುತ್ತಗಳ ಎಣಿಕೆ ಮುಗಿದಾಗ ರವೀಂದ್ರ ಶ್ರೀಕಂಠಯ್ಯ 1,01,307 ಮತ ಗಳಿಸಿ ದಾಖಲೆ ಸೃಷ್ಟಿಸಿದ್ದರು. 43,688 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದರು.

ಇನ್ನು ಮದ್ದೂರು ಕ್ಷೇತ್ರದಲ್ಲಿ ಡಿ.ಸಿ.ತಮ್ಮಣ್ಣ ಗೆಲುವಿನ ಓಟದಲ್ಲಿ ಎಲ್ಲರಿಗಿಂತಲೂ ಮುಂದಿದ್ದರು. 19ನೇ ಸುತ್ತಿನವರೆಗೂ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡರನ್ನು ಕಟ್ಟಿ ಹಾಕಿದ್ದರು. 1,09,239 ಮಗಗಳಿಸಿ ಜಿಲ್ಲೆಯಲ್ಲೇ ಅತ್ಯಧಿಕ 54,030 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.

ಒಂದೇ ಚುನಾವಣೆಯಲ್ಲಿ ಒಂದೇ ಪಕ್ಷದ ನಾಲ್ವರು ಅಭ್ಯರ್ಥಿಗಳು ಲಕ್ಷಕ್ಕೂ ಅಧಿಕ ಮತ ಪಡೆದು ಜಯದ ದಾಖಲೆ ಮಾಡಿದ್ದು ಇದೇ ಮೊದಲು. ಜಿಲ್ಲೆಯ ಒಟ್ಟು 14,88,460 ಮತಗಳಲ್ಲಿ ಶೇ 42ರಷ್ಟು ಮತಗಳು ಜೆಡಿಎಸ್‌ವೊಂದಕ್ಕೇ ಚಲಾವಣೆಯಾಗಿದ್ದು ಅತಿ ದೊಡ್ಡ ಗೆಲುವು ಆ ಪಕ್ಷದ ಪಾಲಾಯಿತು. ಎಚ್‌.ಡಿ.ಕುಮಾರಸ್ವಾಮಿ ಅವರ ಅಲೆಯ ನಡುವೆ ಕಾಂಗ್ರೆಸ್‌ ಒಂದು ಸ್ಥಾನವನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಕಷ್ಟ ಕೇಳಿಲ್ಲ. ಮಂಡ್ಯ ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಕುಮಾರಸ್ವಾಮಿ ಮಂಡ್ಯಕ್ಕೆ ಬಂದಾಗಲೆಲ್ಲ ಹೇಳುತ್ತಿದ್ದರು. ಸಿದ್ದರಾಮಯ್ಯ ಅವರ ಮೇಲಿದ್ದ ಜನಾಕ್ರೋಶ ಈ ಚುನಾವಣೆಯ ಫಲಿತಾಂಶದಲ್ಲಿ ಅನಾವರಣಗೊಂಡಿತು. ಆ ಮೂಲಕ ಏಳೂ ಕ್ಷೇತ್ರಗಳು ಜೆಡಿಎಸ್‌ ಪಾಲಾದವು.

ಮುಂದುವರಿದ ಸಚಿವ ಸ್ಥಾನದ ಚರ್ಚೆ

ರಾಜಧಾನಿಯಲ್ಲಿ ಸರ್ಕಾರ ರಚನೆ ವಿಷಯ ಕಗ್ಗಂಟಾಗಿದೆ. ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಆದರೆ ಮಂಡ್ಯ ಜಿಲ್ಲೆಯ ಜನರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭಾವನೆ ಇದೆ. ಆ ಮೂಲಕ ಜಿಲ್ಲೆಯ ಇಬ್ಬರು ಶಾಸಕರು ಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂಬ ಚರ್ಚೆಗಳು ಭರ್ಜರಿಯಾಗಿ ನಡೆಯುತ್ತಿವೆ. ಡಿ.ಸಿ.ತಮ್ಮಣ್ಣ ಹಾಗೂ ಸಿ.ಎಸ್‌.ಪುಟ್ಟರಾಜು ಮಂತ್ರಿಯಾಗುತ್ತಾರೆ ಎಂಬ ವಿಷಯ ಎಲ್ಲೆಡೆ ಹರಡಿದೆ.

ಜಿಲ್ಲೆಯ ಏಳೂ ಜೆಡಿಎಸ್‌ ಶಾಸಕರು ಈಗ ಬೆಂಗಳೂರಿನಲ್ಲಿದ್ದಾರೆ. ಅವರ ಜೊತೆ ಸ್ಥಳೀಯ ಮುಖಂಡರೂ ಬೆಂಗಳೂರಿಗೆ ತೆರಳಿದ್ದಾರೆ. ಮಂಗಳವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಜಯೋತ್ಸವ ಆಚರಿಸಿದ ನಂತರ ಅಂದೇ ರಾಜಧಾನಿಗೆ ತೆರಳಿ ಮೊಕ್ಕಾಂ ಹೂಡಿದ್ದಾರೆ. ಸರ್ಕಾರ ರಚನೆಯ ಕಸರತ್ತಿನಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ.

ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ

ಸಂಸದ ಸಿ.ಎಸ್‌.ಪುಟ್ಟರಾಜು ಅವರು ರಾಜ್ಯ ರಾಜಕೀಯಕ್ಕೆ ಮರಳಿದ್ದಾರೆ. ಮೇಲುಕೋಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕಾರಣ ಅವರು ಸಂಸತ್‌ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಸದಸ್ಯತ್ವ ಅವಧಿ ಇನ್ನೂ ಒಂದು ವರ್ಷ ಇರುವ ಕಾರಣ ಲೋಕಸಭಾ ಉಪ ಚುನಾವಣೆಯೂ ನಡೆಯುತ್ತದೆ. 2013ರಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಒಂದು ವರ್ಷ ಉಳಿದಿರುವಾಗ ಉಪ ಚುನಾವಣೆ ನಡೆದಿತ್ತು.

ಎನ್.ಚಲುವರಾಯಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ ನಟಿ ರಮ್ಯಾ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದರು. ಈಗಲೂ ಅಂಥದ್ದೇ ಪರಿಸ್ಥಿತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT