ಕಾರವಾರ: ಬೆಳಿಗ್ಗೆ 8 ಗಂಟೆಯಾದರೂ ಸಮೀಪದಲ್ಲಿ ಬರುತ್ತಿರುವವರು ಸ್ಪಷ್ಟ ವಾಗಿ ಕಾಣುವುದಿಲ್ಲ. ವಾಹನಗಳು ಹೆಡ್‌ಲೈಟ್ ಬೆಳಗಿಕೊಂಡೇ ಬಹಳ ಎಚ್ಚರಿಕೆಯಿಂದ ಸಾಗುವ ಸ್ಥಿತಿ. ಮಳೆ ಇಲ್ಲದಿದ್ದರೂ ಕಟ್ಟಡಗಳ ಚಾವಣಿಯಿಂದ ನೀರು ತೊಟ್ಟಿಕ್ಕುವ ಸದ್ದು...
ಇದು ಸಮುದ್ರದ ದಡದಲ್ಲೇ ಇರುವ ಜಿಲ್ಲಾಕೇಂದ್ರದಲ್ಲಿ ಒಂದು ವಾರದಿಂದ ಕಂಡು ಬರುತ್ತಿರುವ ವಾತಾವರಣ. ಬೆಳ್ಳನೆ ಇಬ್ಬನಿ ಇಡೀ ಊರನ್ನೇ ದಟ್ಟವಾಗಿ ಕವಿಯುತ್ತಿದೆ.
ಅದರೊಂದಿಗೆ ಚುಮುಚುಮು ಚಳಿಯೂ ಮುದ ನೀಡುತ್ತಿದೆ. ಇಂಥ ವಾತಾವರಣವನ್ನು ಸದ್ಯದ ವರ್ಷಗಳಲ್ಲಿ ಕಂಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಉತ್ತರ ಭಾರತದಿಂದ ಬೀಸುತ್ತಿರುವ ಶೀತಗಾಳಿಯು ಇಂಥ ವಾತಾವರಣ ಮೂಡಲು ಮುಖ್ಯ ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು. ಈ ವರ್ಷ ಅಕಾಲಿಕವಾಗಿ ಮಳೆಯಾಗಿದ್ದು, ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚಿದೆ. ಹಾಗಾಗಿ ಇಬ್ಬನಿಯ ಪ್ರಮಾಣ ಜಾಸ್ತಿಯಿದೆ ಎಂದು ಅವರು ವಿವರಿಸುತ್ತಾರೆ.
ಇಲ್ಲಿನ ಹಚ್ಚಹಸುರಿನ ಬೆಟ್ಟಗುಡ್ಡ ಗಳು, ಸದಾ ತುಂಬಿ ಹರಿಯುವ ಕಾಳಿ ನದಿ, ಮಳೆಗಾಲವನ್ನು ಹೊರತು ಪಡಿಸಿ ಇತರ ದಿನಗಳಲ್ಲಿ ಶಾಂತವಾಗಿರುವ ಅರಬ್ಬಿ ಸಮುದ್ರದಿಂದಾಗಿ ಕಾರವಾರ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಹಾಗಾಗಿ ‘ಕರ್ನಾಟಕದ ಕಾಶ್ಮೀರ’ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಈಗ ದಟ್ಟ ವಾದ ಇಬ್ಬನಿ ಕವಿಯುತ್ತಿರುವುದು ಈ ವರ್ಣನೆಯನ್ನು ಮತ್ತಷ್ಟು ಆಪ್ತವಾಗಿಸಿದೆ.
ಕಲ್ಲಂಗಡಿ ಬೆಳೆಗಾರರಿಗೆ ಚಿಂತೆ:
ಕೆಲವು ದಿನಗಳಿಂದ ದಟ್ಟವಾಗಿ ಇಬ್ಬನಿ ಸುರಿಯುತ್ತಿರುವುದು ಕಲ್ಲಂಗಡಿ, ಗೋಡಂಬಿ, ಮಾವು ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ಚಿಂತೆ ಮೂಡಿಸಿದೆ.
‘ಹವಾಮಾನ ವೈಪರೀತ್ಯದಿಂದಾಗಿ ಕಲ್ಲಂಗಡಿ ಬೆಳೆಯ ಮೇಲೆ ದುಷ್ಪರಿ ಣಾಮ ಬೀರುತ್ತಿದೆ. ನವೆಂಬರ್‌ವರೆಗೂ ಮಳೆ ಆಗಿದ್ದರಿಂದ ಈ ವರ್ಷ ಕಲ್ಲಂ ಗಡಿ ಫಸಲು ಬೆಳೆಯುವುದು ತಡವಾಗಬಹುದು. ತೇವಾಂಶ ಅಧಿಕವಾಗಿದ್ದರೆ ಗೊಂಡೆ ರೋಗದಂತಹ ಸಮಸ್ಯೆ ಕಾಡುತ್ತದೆ’ ಎಂದು ಅಂಕೋಲಾದ ಭಾವಿಕೇರಿಯ ಕಲ್ಲಂಗಡಿ ಬೆಳೆಗಾರ ಶುಭಾಂಗ ನಾಯ್ಕ ಹೇಳುತ್ತಾರೆ.
‘ಗೇರು ಹಾಗೂ ಕೆಲವೆಡೆ ಮಾವಿನ ಮರಗಳು ಈಗ ಹೂ ಬಿಡುತ್ತಿವೆ. ಇಬ್ಬನಿ ಕವಿದ ವಾತಾವರಣ ಮುಂದುವರಿದರೆ ಅವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಹೂವಿನ ದಂಟಿನ ರಸ ಹೀರುವ ಕೀಟಗಳು ಮಸುಕಾದ ವಾತಾವರಣ ಬಹಳ ಸಕ್ರಿಯವಾಗಿರುತ್ತವೆ. ಇಬ್ಬನಿಯೊಂದಿಗೆ ಮೋಡವೂ ಕವಿದರೆ ಫಸಲಿನ ಆಸೆ ಕೈಬಿಡಬೇಕಷ್ಟೇ’ ಎಂದು ಹೊನ್ನಾವರದ ಕವಲಕ್ಕಿಯ ರೈತ ವಿನಯ ನಾಯ್ಕ ಹೇಳುತ್ತಾರೆ. ಹಳಿಯಾಳ ತಾಲ್ಲೂಕಿನ ಅಂಬೇವಾಡಿಯ ರೈತ ಜ್ಯೋತಿಬಾ ಪಾಟೀಲ ಅವರೂ ಇದೇ ರೀತಿಯ ಆತಂಕ ವ್ಯಕ್ತಪಡಿಸುತ್ತಾರೆ.
-------
* ಕೆಲವು ಬೆಳೆಗಳಿಗೆ ಇಬ್ಬನಿಯಿಂದ ಎಲೆ ಮುರುಟು ರೋಗ ಬರಬಹುದು. ಆದರೆ, ತೇವಾಂಶವನ್ನೇ ಬಳಸಿ ಬೆಳೆಯುವ ಬೆಳೆಗಳಿಗೆ ಇಬ್ಬನಿಯು ಅನುಕೂಲಕರವಾಗುತ್ತದೆ.
- ಜಿ.ಎನ್.ಗುಡಿಗಾರ್, ಕೃಷಿ ಇಲಾಖೆ ಅಧಿಕಾರಿ
---------
ಕಾರವಾರದಲ್ಲಿ ಅತಿ ಕಡಿಮೆ ಉಷ್ಣಾಂಶ
ಯಾವಾಗ; ಡಿಗ್ರಿ ಸೆಲ್ಷಿಯಸ್
1970 ಡಿ.13; 12.5
2011 ಡಿ.26; 15.7
2008 ಡಿ.29; 15.9
2013 ಡಿ.11; 15.9
––––––
ಈ ವರ್ಷದ ಅತಿ ಕಡಿಮೆ ಉಷ್ಣಾಂಶ: (ಡಿಗ್ರಿ ಸೆಲ್ಷಿಯಸ್)
ಡಿ.23; 20
ಡಿ.2; 21
ಡಿ.24, 25, 26, 27; 22
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.