ಮಾವಿನ ಹೂವಿಗೆ ಇಬ್ಬನಿಯ ಆತಂಕ

7
ಮುಂಡಗೋಡ ತಾಲ್ಲೂಕಿನಲ್ಲಿ 700 ಹೆಕ್ಟೇರ್ ಪ್ರದೇಶದಲ್ಲಿ ಆಲ್ಫೊನ್ಸ್ ತಳಿಯ ಕೃಷಿ

ಮಾವಿನ ಹೂವಿಗೆ ಇಬ್ಬನಿಯ ಆತಂಕ

Published:
Updated:
Prajavani

ಮುಂಡಗೋಡ: ಹಸಿರೆಲೆ ಕಾಣದಷ್ಟು ಹೂವುಗಳಿಂದ ಮೈದುಂಬಿಕೊಂಡು ಮಾವಿನ ಗಿಡಗಳು ಸಿಂಗಾರಗೊಂಡಿವೆ. ಕೆಲವೆಡೆ ಇನ್ನೂ ಚಿಗುರುತ್ತ, ಹೂವು ಬಿಡುವ ಪ್ರಕ್ರಿಯೆ ಮುಂದುವರಿದಿದೆ. ಆಗಾಗ ಬೀಳುತ್ತಿರುವ ಇಬ್ಬನಿ ಮಾವಿನಗಿಡದ ಸಿಂಗಾರಕ್ಕೆ ಆತಂಕ ಮೂಡಿಸುತ್ತಿದೆ.

ವರ್ಷದ ಕೊನೆಯ ತಿಂಗಳುಗಳಲ್ಲಿ ಹಿಂಗಾರು ಮಳೆ ಸುರಿದ ಪರಿಣಾಮ ಮಾವಿನ ಗಿಡಗಳಲ್ಲಿ ಹೂವು ಬಿಡುವ ಪ್ರಕ್ರಿಯೆಗೆ ಸ್ವಲ್ಪ ಹಿನ್ನಡೆಯಾಗಿದೆ. ತಾಲ್ಲೂಕಿನಲ್ಲಿ ಸುಮಾರು ಎರಡು ಸಾವಿರ ಹೆಕ್ಟೇರ್‌ಗಳಷ್ಟು ಮಾವಿನ ಕ್ಷೇತ್ರವಿದ್ದು, ನವಂಬರ್‌ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಮಾವು ಬೆಳೆಯ ಮೇಲೆ ಪರಿಣಾಮ ಬೀರಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ, ಸರಾಸರಿ ಹತ್ತರಲ್ಲಿ ಐದಾರು ಗಿಡಗಳು ಹೂವುಗಳಿಂದ ಮೈದುಂಬಿಕೊಂಡಿವೆ.

‘ಬಂಗಾರದ ಬಣ್ಣ ಸೂಸುವ ಹೂವುಗಳಿಂದ ಸಿಂಗಾರಗೊಂಡಿರುವ ಮಾವಿನ ಗಿಡಗಳು, ತಕ್ಕಮಟ್ಟಿಗೆ ಭರವಸೆ ಮೂಡಿಸಿವೆ. ಪೂರ್ಣಪ್ರಮಾಣದಲ್ಲಿ ಹೂ ಬಿಟ್ಟರೆ ಮಾತ್ರ, ಉತ್ತಮ ಫಸಲಿನ ಬಗ್ಗೆ ಅಂದಾಜಿಸಬಹುದು. ಹೂವು ಹಿಡಿದಿರುವ ಮರಗಳ ಸಂಖ್ಯೆ ಹೆಚ್ಚಾಗಿ, ಅಲ್ಲೊಂದು ಇಲ್ಲೊಂದು ಚಿಗುರೆಲೆಯ ಗಿಡಗಳಿದ್ದರೆ ವ್ಯಾಪಾರಸ್ಥರು ಸಹ ಫಸಲು ಗುತ್ತಿಗೆ ಹಿಡಿಯಲು ಮುಂದೆ ಬರುತ್ತಾರೆ’ ಎನ್ನುತ್ತಾರೆ ಮಾವು ಬೆಳೆಗಾರ ರಾಜು ಗುಬ್ಬಕ್ಕನವರ.

‘ಮಾವು ಒಂದು ವರ್ಷ ಉತ್ತಮ ಇಳುವರಿ ನೀಡಿದರೆ, ಮತ್ತೊಂದು ವರ್ಷ ಕಡಿಮೆ ಫಸಲು ನೀಡುತ್ತದೆ. ಮಾರ್ಚ್ ಅಂತ್ಯಕ್ಕೆ ಮಾವು ಮಾರುಕಟ್ಟೆಗೆ ಬಂದರೆ ಉತ್ತಮ ದರ ಸಿಗುತ್ತದೆ. ಈ ವರ್ಷವೂ ಮಾವು ಬೆಳೆಗಾರರ ಕೈಹಿಡಿಯುವ ನಿರೀಕ್ಷೆಯಿದೆ’ ಎಂದು ಬೆಳೆಗಾರ ಶಿವಜ್ಯೋತಿ ಹೇಳಿದರು.

‘ತೇವಾಂಶದಿಂದ ಚಿಗುರೆಲೆ ಮೂಡಿ ಮತ್ತೆ ಹೂವು ಬಿಡಲು ಸಮಯ ತೆಗೆದುಕೊಳ್ಳುತ್ತದೆ. ಜನವರಿ ಅಂತ್ಯದವರೆಗೆ ಹೂವು ಬಿಡುವ ಪ್ರಮಾಣವನ್ನು ನಿಖರವಾಗಿ ಗುರುತಿಸಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಸದ್ಯ ಶೇ 30ರಷ್ಟು ಕಡಿಮೆಯಿದೆ. ವಾಡಿಕೆಯಂತೆ ಮಾರ್ಚ್‌ ಅಂತ್ಯದೊಳಗೆ ಕಾಯಿಗಳು ಪಕ್ವಗೊಂಡು, ಎಪ್ರಿಲ್‌ ಮೊದಲ ವಾರ ಮಾರುಕಟ್ಟೆಗೆ ಬರಬೇಕು. ಬಿಸಿಲು ಹಾಗೂ ಚಳಿಯ ವಾತಾವರಣ ಸದ್ಯ ಹೂವು ಬಿಡಲು ಪೂರಕವಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ನಾಗಾರ್ಜುನ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !