ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದಿಂದ ಆಕರ್ಷಕ ಗುಮ್ಮಟೆ ಪಾಂಗ್

ಒಣ ಕಟ್ಟಿಗೆಯನ್ನು ಸುಂದರವಾಗಿ ಕೆತ್ತನೆ ಮಾಡಿದ ಅಮದಳ್ಳಿಯ ರಾಮಚಂದ್ರ
Last Updated 13 ಆಗಸ್ಟ್ 2022, 16:09 IST
ಅಕ್ಷರ ಗಾತ್ರ

ಕಾರವಾರ: ‌‘ಗುಮ್ಮಟೆ ಪಾಂಗ್’ ವಾದ್ಯಕ್ಕೆ ಜಿಲ್ಲೆಯ ಕರಾವಳಿಯಲ್ಲಿ ವಿಶೇಷ ಸಾಂಪ್ರದಾಯಿಕ ಮಹತ್ವವಿದೆ. ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸುವ ಈ ವಾದ್ಯವನ್ನು ತಾಲ್ಲೂಕಿನ ಅಮದಳ್ಳಿಯ ಜಾನಪದ ಕಲಾವಿದರೊಬ್ಬರು, ಮರದ ಒಂದೇ ದಿಮ್ಮಿಯನ್ನು ಬಳಸಿ ತಯಾರಿಸಿದ್ದಾರೆ.

ರೈತರೂ ಆಗಿರುವ ರಾಮಚಂದ್ರ ಬಂಟಾ ಗೌಡ ಅವರು ತಯಾರಿಸಿದ ಈ ವಾದ್ಯವು ಈಗ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿದೆ. ಮರದ ಒಣತುಂಡಿನ್ನು ನಾಜೂಕಾಗಿ ಕೆತ್ತನೆ ಮಾಡಿದ ಅವರು, ಗುಮ್ಮಟೆ ವಾದ್ಯವನ್ನು ಮೂಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯು ವಿವಿಧ ಜನಾಂಗಗಳ ಹತ್ತಾರು ಪ್ರಕಾರಗಳ ಜಾನಪದ ಕಲೆಗಳ ತವರೂರು ಎಂದೇ ಗುರುತಿಸಿಕೊಂಡಿದೆ. ಹಾಲಕ್ಕಿ ಬುಡಕಟ್ಟು ಜನಾಂಗವು ಇದರಲ್ಲಿ ಪ್ರಮುಖವಾದುದು. ಈ ಸಮುದಾಯಕ್ಕೆ ‘ಗುಮ್ಮಟೆ ಪಾಂಗ್’ ಅತ್ಯಂತ ‍ಪ್ರಮುಖ ಜಾನಪದ ಸಂಗೀತ ವಾದ್ಯವಾಗಿದೆ.

ಸುಗ್ಗಿ ಕುಣಿತ, ಚೌತಿ ಹಬ್ಬಗಳಂಥ ವಿಶೇಷ ಸಂದರ್ಭಗಳಲ್ಲಿ ಗುಮ್ಮಟೆಯ ನಾದ ಕೇಳುತ್ತಲೇ ಇರಬೇಕು. ಅದನ್ನು ಲಯಬದ್ಧವಾಗಿ ಬಾರಿಸುವ ವಾದಕರ ಸುತ್ತ ಕುಳಿತು ಹತ್ತಾರು ಮಂದಿ ಹಾಡುತ್ತಿರುತ್ತಾರೆ. ಅದನ್ನು ನೋಡುವುದು, ಆನಂದಿಸುವುದೇ ವಿಶಿಷ್ಟ ಅನುಭವ ನೀಡುತ್ತದೆ.

ಮಣ್ಣಿನ ಮಡಕೆಯಂತೆಯೇ ಕಾಣುವ ಗುಮ್ಮಟೆ ಪಾಂಗ್, 4– 5 ಅಡಿ ಉದ್ದವಾಗಿರುತ್ತದೆ. ಅದರ ಒಂದು ಬದಿ ಚಿಕ್ಕ ರಂಧ್ರವಿದ್ದರೆ, ಇನ್ನೊಂದೆಡೆ ದೊಡ್ಡ ರಂಧ್ರವಿರುತ್ತದೆ. ದೊಡ್ಡ ರಂಧ್ರಕ್ಕೆ ಚರ್ಮವನ್ನು ಬಿಗಿದು ಕಟ್ಟಿ ಬಾರಿಸಲಾಗುತ್ತದೆ. ಇದರಿಂದ ಹೊರಡುವ ನಾದವು ಸಾಕಷ್ಟು ದೂರದವರೆಗೂ ಕೇಳಿಸುತ್ತದೆ. ಇದನ್ನು ಬಳಸಿ ಹಾಲಕ್ಕಿಗಳು ತಮ್ಮ ಗ್ರಾಮ್ಯ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಮೊದಲಾದ ಕಥೆಯನ್ನಾಧರಿಸಿ ಜಾನಪದ ಆಚರಣೆಗಳನ್ನು ಇಂದಿಗೂ ಮಾಡುತ್ತಾರೆ.

ಕೆಲವರು ಅನುಕೂಲಸ್ಥರು ಈ ವಾದ್ಯವನ್ನು ತಾಮ್ರದಿಂದಲೂ ರಚಿಸಿದ್ದಾರೆ. ಆದರೆ, ಮರದಿಂದ ತಯಾರಿಸಿರುವುದು ಅತ್ಯಂತ ವಿರಳವಾಗಿದೆ. ರಾಮಚಂದ್ರ ಗೌಡ ತಮಗೆ ಸಿಕ್ಕಿದ ಉತ್ತಮವಾದ ಮರದ ಒಣ ದಿಮ್ಮಿಯನ್ನು ಗುಮ್ಮಟೆ ತಯಾರಿಸಲು ಬಳಸಿಕೊಂಡಿದ್ದಾರೆ.

ಕೃಷಿಯೊಂದಿಗೆ ಸಂಭ್ರಮ:ಅಂಬೈಕೊಡಾರ ಎಂಬಲ್ಲಿ ರಾಮಚಂದ್ರ ಅವರ ಮೂಲ ಮನೆಯಿತ್ತು. ಹಲವು ವರ್ಷಗಳ ಹಿಂದೆ ನೌಕಾನೆಲೆಯಿಂದ ನಿರಾಶ್ರಿತರಾಗಿ ಸಂಪದ್ಭರಿತ ಕೃಷಿಭೂಮಿಯನ್ನು ಕಳೆದುಕೊಂಡರು. ಅಮದಳ್ಳಿಯಲ್ಲಿ ಅವರ ತಂದೆ ಖರೀದಿಸಿದ ಜಮೀನಿನಲ್ಲಿ ಮನೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇಲ್ಲಿಯೂ ತಮ್ಮ ಕೃಷಿ ಕಾರ್ಯವನ್ನು ಬಿಡದೇ ಬೇರೆಯವರ ಹೊಲ ಗೇಣಿಗೆ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಮದಳ್ಳಿಯ ಪ್ರಸಿದ್ಧ ದಿಂಡಿ ಹಬ್ಬದ ಸ್ತಬ್ಧಚಿತ್ರಗಳ (ಹಗರಣ) ಸಂದರ್ಭದಲ್ಲಿ ಸ್ವಂತ ಖರ್ಚಿನಿಂದ ಬೃಹತ್ ಗಾತ್ರದ ಆನೆ, ಹಡಗು ತಯಾರಿಸಿ ನೆರೆದವರನ್ನು ರಂಜಿಸುತ್ತಾರೆ.

‘ಬಹುಮುಖ ಪ್ರತಿಭೆ ರಾಮಚಂದ್ರ ಗೌಡ ಅವರು ಬಿಡುವಿನ ಸಮಯದಲ್ಲಿ ಒಣ ಮರದ ದಿಮ್ಮಿಯ ಗುಮ್ಮಟೆಯನ್ನು ತಯಾರಿಸಿಕೊಂಡಿದ್ದಾರೆ. ಕೆಲವು ದಿನಗಳವರೆಗೆ ಸಮಯ ದೊರೆತಾಗಲೆಲ್ಲ ಗುಮ್ಮಟೆ ಕೆತ್ತುವ ಕಾಯಕ ನಡೆಸುತ್ತಿದ್ದರು. ಅಂತಿಮವಾಗಿ ಸುಂದರವಾದ ಗುಮ್ಮಟೆ ವಾದ್ಯವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರೂಪದ ಅವರ ಕಾರ್ಯ ಅಭಿನಂದನಾರ್ಹ’ ಎನ್ನುತ್ತಾರೆ ಮುದಗಾದ ಸಾಹಿತಿ, ಜಿ.ಡಿ.ಗೋವಿಂದಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT