ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಹಾಡುಗಾರ್ತಿ ಹನುಮಿ ಗೌಡ ನಿಧನ

Last Updated 22 ಜೂನ್ 2021, 14:01 IST
ಅಕ್ಷರ ಗಾತ್ರ

ಹೊನ್ನಾವರ: ‘ಜಾನಪದ ಶ್ರೀ’ ಪ್ರಶಸ್ತಿ ಪುರಸ್ಕೃತ ಜಾನಪದ ಹಾಡುಗಾರ್ತಿ, ತಾಲ್ಲೂಕಿನ ಮಾಳಕೋಡ ಗ್ರಾಮದ ನಿವಾಸಿ ಹನುಮಿ ಕ್ಷೇತ್ರ ಗೌಡ (74) ಸೋಮವಾರ ರಾತ್ರಿ ನಿಧನರಾದರು.

ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಸಾವಿರಾರು ಜಾನಪದ ಹಾಡುಗಳ ಖನಿಯಾಗಿದ್ದ ಅವರು, ಯಕ್ಷಗಾನ ಅಕಾಡೆಮಿಯ ‘ಜ್ಞಾನ ವಿಜ್ಞಾನ’ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳಿಗೆ ಭಾಜನರಾಗಿದ್ದರು. ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ತೇಜನ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಳ್ಳಂಕಿಯ ಯರ್ಜಿನಮೂಲೆ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ಹನಮಿ, ತಮ್ಮ ಅಜ್ಜಿಯ ಮನೆ ಇರುವ ಹೈಗುಂದದಲ್ಲಿ ಬೆಳೆದರು. ಕೇವಲ 13 ವರ್ಷದವರಿದ್ದಾಗ ಗಂಡನ ಮನೆ ಸೇರಿದರು. ಗ್ರಾಮೊಕ್ಕಲ ಜಾನಪದ ಹಾಡುಗಳನ್ನು ಬಾಲ್ಯದಿಂದಲೇ ಕಲಿತರು. ಊರು ಹಾಗೂ ಪರವೂರುಗಳಲ್ಲಿ ನಡೆಯುತ್ತಿದ್ದ ಶುಭ ಕಾರ್ಯಗಳಲ್ಲಿ ಜಾನಪದ ಹಾಡುಗಳನ್ನು ಹಾಡಿ ತಮ್ಮ ಅಭಿಜಾತ ಪ್ರತಿಭೆಗೆ ತಾಲೀಮು ಪಡೆದುಕೊಂಡರು.

ಕೇದಿಗೆ ಎಲೆಯಿಂದ ಚಾಪೆ ನೇಯುವ ಕಲೆ ಕೂಡ ಅವರಿಗೆ ಕರಗತವಾಗಿತ್ತು. ಶೇಡಿಯಿಂದ ವಿವಿಧ ರೀತಿಯ ಜಾನಪದ ಶೈಲಿಯ ಚಿತ್ತಾರಗಳನ್ನು ಬಿಡಿಸುವಲ್ಲೂ ಹನುಮಿ ಗೌಡ ನಿಷ್ಣಾತರಾಗಿದ್ದರು.

ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಬೆಳಿಗ್ಗೆ ಮಾಳಕೋಡದಲ್ಲಿ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT