ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ:ಪ್ರವಾಸಿ ವೀಸಾ ಒಂದೇ ತಿಂಗಳು–ವಿದೇಶಿಗರಿಗೆ ಅತಂತ್ರರಾಗುವ ಆತಂಕ

ತವರು ದೇಶಗಳಿಗೆ ತೆರಳಲು ವಿಮಾನವಿಲ್ಲ
Last Updated 17 ಡಿಸೆಂಬರ್ 2021, 0:00 IST
ಅಕ್ಷರ ಗಾತ್ರ

ಗೋಕರ್ಣ: ಕಳೆದ ವರ್ಷ ಕೋವಿಡ್ ಕಾರಣದಿಂದ ಇಲ್ಲೇ ಉಳಿದುಕೊಂಡಿದ್ದ ವಿದೇಶಿ ಪ್ರವಾಸಿಗರಿಗೆ ವಿದೇಶಾಂಗ ಇಲಾಖೆಯು ನಿರ್ದಿಷ್ಟ ದಿನಾಂಕದೊಳಗೆ ದೇಶ ಬಿಡುವಂತೆ ಸೂಚಿಸುತ್ತಿದೆ.ಆದರೆ, ಯುರೋಪ್‌ನ ವಿವಿಧ ದೇಶಗಳಲ್ಲಿ ಪುನಃ ಲಾಕ್‌ಡೌನ್ ಶುರುವಾಗಿದ್ದು, ಅವರಿಗೆ ಆತಂಕ ಮೂಡಿಸಿದೆ.

ಇಲ್ಲಿಯವರೆಗೆ ಯಾವುದೇ ಸಮಸ್ಯೆಯಿಲ್ಲದೇ ವೀಸಾ ಮುಂದುವರಿಸಿ ಕೊಡಲಾಗುತ್ತಿತ್ತು. ಆದರೆ, ಈಗ ಪ್ರವಾಸಿ ವೀಸಾವನ್ನು ಒಂದು ತಿಂಗಳ ಅವಧಿಗೆ ಮಾತ್ರ ನೀಡಲಾಗುತ್ತಿದೆ. ವ್ಯಾಪಾರಕ್ಕಾಗಿ ನೀಡುವ ವೀಸಾ ಒಂದು ವರ್ಷದ ಅವಧಿ ಹೊಂದಿದೆ. ಆದರೆ, ಅದಕ್ಕೆ ಹೆಚ್ಚು ಶುಲ್ಕವಿದ್ದು, ಎಲ್ಲರಿಗೂ ಸಿಗುವುದಿಲ್ಲ. ಈ ನಡುವೆ, ಓಮೈಕ್ರಾನ್ ನಿಯಂತ್ರಣದ ಕ್ರಮವಾಗಿ ಜ.31ರವರೆಗೆ ವಿಮಾನಗಳ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ರದ್ದು ಮಾಡಲಾಗಿದೆ.

‘ನಾವು ನಮ್ಮ ದೇಶಕ್ಕೆ ಹೋದರೆ ವಿಮಾನ ನಿಲ್ದಾಣದಲ್ಲೇ ವಾರಗಟ್ಟಲೆ ಕ್ವಾರೆಂಟೈನ್ ಆಗಬೇಕು. ನಮ್ಮ ಹತ್ತಿರ ಅಷ್ಟು ಹಣವೂ ಇಲ್ಲ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತಿದೆ. ಕೋವಿಡ್‌ಗೆ ಹೆದರಿ ಯಾರೂ ಕೆಲಸಕ್ಕೇ ಹೋಗುತ್ತಿಲ್ಲ. ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ’ ಎನ್ನುತ್ತಾರೆ ಬ್ರಿಟನ್ ಪ್ರಜೆ ವಿಲಿಯಂ ಡಿಸ್ಕೊಲ್. ಅವರು ಎರಡು ವರ್ಷಗಳಿಂದ ಗೋಕರ್ಣದಲ್ಲೇ ಇದ್ದಾರೆ.

ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರಿಯಾ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವರಂತೂ ಸತತವಾಗಿ 2– 3 ದಶಕಗಳಿಂದಲೂ ಭೇಟಿ ನೀಡುತ್ತಿದ್ದಾರೆ.

ತಮಗೆ ವೀಸಾ ಅವಧಿಯನ್ನು ವಿಸ್ತರಿಸಬೇಕು ಎಂದು ಹಲವರು ವಿದೇಶಾಂಗ ಇಲಾಖೆಗೆ ಒತ್ತಾಯವನ್ನೂ ಮಾಡಿದ್ದಾರೆ. ಕನಿಷ್ಠ ಐದು ತಿಂಗಳಿಗಾದರೂ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

‘ಹಲವು ವರ್ಷಗಳಿಂದ ಭಾರತಕ್ಕೆ ಬರುತ್ತಿರುವ ಹೆಚ್ಚಿನ ವಿದೇಶಿಯರು,ವೀಸಾ ಅವಧಿ ಕಡಿಮೆ ಇರುವ ಕಾರಣದಿಂದ ಬೇರೆ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ’ ಎಂದು ಸ್ವೀಡನ್ ಮಹಿಳೆ ಜೆನಿತ್ ಪೌಲ್ ಇ–ಮೇಲ್ ಮುಖಾಂತರ ಪ್ರತಿಕ್ರಿಯಿಸಿದ್ದಾರೆ. ಅವರು 1991ರಿಂದಲೇ ಗೋಕರ್ಣಕ್ಕೆ ಬರುತ್ತಿದ್ದಾರೆ.

ಈ ನಡುವೆ, ಹಲವರು ದೇಶದಲ್ಲಿ ಕೋವಿಡ್ ನಿಯಂತ್ರಣ ಕ್ರಮದ ಬಗ್ಗೆ ಮೆಚ್ಚುಗೆಯೂ ವ್ಯಕ್ತಪಡಿಸುತ್ತಾರೆ. ‘ಭಾರತದಲ್ಲಿ ಇರುವವರೇ ನಿಜಕ್ಕೂ ಪುಣ್ಯವಂತರು. ಜರ್ಮನಿಯ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಯಾರ ಮುಖದಲ್ಲೂ ನಗು ಕಾಣಿಸುತ್ತಿಲ್ಲ. ಜರ್ಮನ್ನರ ಸಂತೋಷವೇ ಮಾಯವಾಗಿದೆ’ ಎಂದು ಆ ದೇಶದ ಶೋಲಾ ದುಗುಡ ಹೊರ ಹಾಕುತ್ತಾರೆ.

ಬೀಚ್ ಪ್ರವಾಸೋದ್ಯಮಕ್ಕೆ ಹೊಡೆತ:

ಪ್ರವಾಸೋದ್ಯಮದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಗೋಕರ್ಣದ ಪ್ರವಾಸೋದ್ಯಮಕ್ಕೆ ವಿದೇಶಿಗರ ಆಗಮನವಿಲ್ಲದೇ ಗ್ರಹಣ ಬಡಿದಂತಾಗಿದೆ. ಸ್ವಲ್ಪ ಚೇತರಿಕೆ ಕಂಡು ಬರುತ್ತಿದೆ ಎನ್ನುವಷ್ಟರಲ್ಲಿಯೇ ವಿದೇಶಗಳಲ್ಲಿ ಮತ್ತೆ ಕೋವಿಡ್ ಹೆಚ್ಚುತ್ತಿದೆ. ಇದರಿಂದ ಗೋಕರ್ಣದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಸ್ಥಳೀಯ ಶೇ 90ರಷ್ಟು ಮಂದಿ ಈ ಉದ್ಯಮವನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಧಾರ್ಮಿಕ ಪ್ರವಾಸೋದ್ಯಮ ಈಗ ಪುನಃ ಚೇತರಿಕೆಯ ದಾರಿಯಲ್ಲಿದೆ. ಆದರೆ, ಬೀಚ್ ಪ್ರವಾಸೋದ್ಯಮವು ಮಾತ್ರ ವಿದೇಶಿಗರಿಲ್ಲದೇ ನೆಲಕಚ್ಚಿದೆ.

-----

* ಕೋವಿಡ್‌ನಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ ಇನ್ನೂ ಪ್ರಾರಂಭವಾಗಿಲ್ಲ. ದೇಶ ಬಿಟ್ಟು ಹೋಗಿ ಎಂದು ವಿದೇಶಾಂಗ ಇಲಾಖೆ ನಮ್ಮ ಸೂಚಿಸುತ್ತಿರುವುದು ಚಿಂತೆ ಮೂಡಿಸಿದೆ.

- ವಿಲಿಯಂ ಡಿಸ್ಕೊಲ್, ಬ್ರಿಟನ್ ಪ್ರಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT