ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಗೆ ತಾತ್ವಿಕ ಒಪ್ಪಿಗೆ: ಸಚಿವ ಉಮೇಶ ಕತ್ತಿ

Last Updated 2 ಡಿಸೆಂಬರ್ 2021, 14:16 IST
ಅಕ್ಷರ ಗಾತ್ರ

ಯಲ್ಲಾಪುರ: ‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಈಗಾಗಲೇ ಅರಣ್ಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ, ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಹಿನ್ನಡೆಯಾಗಿತ್ತು’ ಎಂದು ಅರಣ್ಯ ಮತ್ತು ಪರಿಸರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದರು.

ಪಟ್ಟಣಕ್ಕೆ ಗುರುವಾರ ಸಂಜೆ ತಮ್ಮ ಕುಟುಂಬದೊಂದಿಗೆ ಖಾಸಗಿ ಭೇಟಿ ನೀಡಿದ ಅವರು, ‘ಪ್ರಜಾವಾಣಿ’ ಜೊತೆ ಮಾತನಾಡಿದರು.

‘ಹೈಕೋರ್ಟ್, ವನ್ಯಜೀವಿ ಮಂಡಳಿಯಿಂದ ಸಾಧಕ ಬಾಧಕದ ವರದಿ ಕೇಳಿರುವುದು ಪರಿಸರವಾದಿಗಳಿಗೆ ಹಿನ್ನಡೆಯಾಗಿದೆ. ಮಂಡಳಿಯು ಯೋಜನೆಗೆ ಪೂರಕ ವರದಿಯನ್ನು ನೀಡಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ. ಅದಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಬೆಳೆಸಲು ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಲಿವೆಯೇ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿ, ‘ಪರಿಸರ ಪ್ರವಾಸೋದ್ಯಮ ಸ್ಥಾಪಿಸಲು ಯಾರಾದರೂ ಉದ್ಯಮಿಗಳು ಮುಂದೆ ಬಂದರೆ ಅವರಿಗೆ ಅರಣ್ಯ ಇಲಾಖೆ ಎಲ್ಲ ಸಹಕಾರ ನೀಡಲಿದೆ’ ಎಂದು ತಿಳಿಸಿದರು.

ವರಿಷ್ಠರಿಗೆ ಅಧಿಕಾರವಿದೆ:

ಸಚಿವರ ಮೌಲ್ಯಮಾಪನ ಹಾಗೂ ಪಕ್ಷ ಸಂಘಟನೆ ಕುರಿತು ಪ್ರತಿಕ್ರಿಯಿಸಿ, ‘ಸರ್ಕಾರ ನಡೆಸಲು ಮಂತ್ರಿಮಂಡಲ ಹೇಗಿರಬೇಕು ಎಂಬ ನಿಲುವು ತಳೆಯಲು ವರಿಷ್ಠರಿಗೆ ಅಧಿಕಾರ ಇದೆ. ಮುಖ್ಯಮಂತ್ರಿ ಹಾಗೂ ನನ್ನನ್ನೂ ಸೇರಿದಂತೆ ಮೌಲ್ಯಮಾಪನ ಮಾಡಲು, ಅಥವಾ ಪಕ್ಷ ಸಂಘಟನೆಗೆ ಜೋಡಿಸಲು ಪಕ್ಷಕ್ಕೆ ಎಲ್ಲ ರೀತಿಯ ಹಕ್ಕಿದೆ’ ಎಂದರು.

‘ಬೇರೆ ಪ್ರಕರಣವಾದರೆ ಪರಿಶೀಲನೆ’:

‘ಅರಣ್ಯ ಹಕ್ಕು ಪಡೆಯಲು 1980ರ ಪೂರ್ವದ ದಾಖಲೆ ಪೂರೈಸಿ, ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ನೀಡಲು ತೊಡಕಾಗುತ್ತಿದೆ. ಕೆಲವೆಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಮಾನವೀಯ ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಇಲಾಖೆಯಿಂದ ಸೂಚನೆ ನೀಡಬೇಕು’ ಎಂದು ವನವಾಸಿ ಕಲ್ಯಾಣದ ಪ್ರಮುಖರು ವಿನಂತಿಸಿಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುನೀಡಲು 1980ರ ಪೂರ್ವದ ದಾಖಲೆಗಳನ್ನು ಪೂರೈಸಿ ಅದನ್ನು ಅರಣ್ಯ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಜೈಲಿಗೆ ಹೋದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರೆ ಇಲಾಖೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಬೇರೆ ಯಾವುದೇ ಪ್ರಕರಣವಾದರೆ ಅದನ್ನು ಪರಿಶೀಲಿಸಬಹುದು’ ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವನವಾಸಿ ಕಲ್ಯಾಣದ ರಾಜ್ಯ ಹಿತರಕ್ಷಾ ಪ್ರಮುಖ ದೊಂಡು ಪಾಟೀಲ್, ವನವಾಸಿ ಪ್ರಮುಖರಾದ ಬಜ್ಜು ಪಿಂಗಳೆ, ಲಕ್ಷ್ಮಣ ತೋರಥ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಶೋಕ ಭಟ್ಟ, ಹಿಮವತಿ ಭಟ್ಟ, ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಾಲಸುಬ್ರಹ್ಮಣ್ಯ, ಕೆ.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT