ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಹಳ್ಳಿಗರ ಮನಃಪರಿವರ್ತನೆ; ಬೆಂಕಿ ಪ್ರಕರಣ ಕಡಿಮೆ

ಉತ್ತರ ಕನ್ನಡ ಅರಣ್ಯ ವಿಭಾಗದಲ್ಲಿ ಸಾಧನೆ
Last Updated 24 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಅರಣ್ಯ ಇಲಾಖೆ ಮತ್ತು ಹಳ್ಳಿಗರ ನಡುವೆ ಬಾಂಧವ್ಯ ಬೆಸೆದಿರುವ ‘ಕಾಡಿನ ಕ್ಯಾಲೆಂಡರ್’, ಕೆನರಾ ವೃತ್ತದಲ್ಲಿ ಅರಣ್ಯ ಬೆಂಕಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಿದೆ. ಬಿರುಬೇಸಿಗೆಯಲ್ಲಿ ಅರಣ್ಯ ಇಲಾಖೆಗೆ ಸವಾಲಾಗಿದ್ದ ಕಾಡಿನ ರಕ್ಷಣೆ, ಜನರ ಸಹಭಾಗಿತ್ವದ ಸರಳ ಸೂತ್ರದಿಂದ ಸುಲಭಗೊಂಡಿದೆ.

ಆರು ಅರಣ್ಯ ವಿಭಾಗಗಳನ್ನೊಳಗೊಂಡ ಉತ್ತರ ಕನ್ನಡ ಜಿಲ್ಲೆಯ ಕೆನರಾ ವೃತ್ತದಲ್ಲಿ 2018–19ನೇ ಸಾಲಿನಲ್ಲಿ ಒಟ್ಟು 811 ಬೆಂಕಿ ಪ್ರಕರಣಗಳಿಂದ ಒಟ್ಟು 654.58 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಹಾನಿಯಾಗಿತ್ತು. ಆದರೆ, 2019–20ರಲ್ಲಿ ಕೇವಲ 254 ಬೆಂಕಿ ಪ್ರಕರಣಗಳು ದಾಖಲಾಗಿವೆ. 121.96 ಹೆಕ್ಟೇರ್ ಕಾಡಿಗೆ ಧಕ್ಕೆಯಾಗಿದೆ. ‌

ಈ ಹಿಂದೆ ಯಲ್ಲಾಪುರ, ಹಳಿಯಾಳ ಅರಣ್ಯ ವಿಭಾಗಗಳಲ್ಲಿ ಅನುಷ್ಠಾನಗೊಳಿಸಿದ್ದ ಕ್ಯಾಲೆಂಡರ್ ವಿತರಣೆ, ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮವು ಇಡೀ ಕೆನರಾ ವೃತ್ತಕ್ಕೆ ವಿಸ್ತಾರಗೊಂಡಿದೆ. ಆರು ವಿಭಾಗಗಳಿಂದ ಸುಮಾರು 21,200 ಕ್ಯಾಲೆಂಡರ್‌ಗಳನ್ನು ಹಳ್ಳಿಗಳಲ್ಲಿ ವಿತರಿಸಲಾಗಿದೆ.

‘ಕಾಡಿಗೆ ಬೆಂಕಿ ಪ್ರಕರಣಗಳ ಬಹುತೇಕ ಸಂದರ್ಭದಲ್ಲಿ ಮನುಷ್ಯನ ಹಸ್ತಕ್ಷೇಪ ಇರುತ್ತದೆ. ಈ ಕಾರಣಕ್ಕೆ ಕಾಡಿನ ಜೊತೆ ಜೀವನ ನಡೆಸುವ ಹಳ್ಳಿಗರ ಸಹಕಾರ ಪಡೆದು, ಗಿಡ–ಮರಗಳನ್ನು ರಕ್ಷಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ಸಭೆ ನಡೆಸಿ, ವೃಕ್ಷ ರಕ್ಷಣೆಯ ಮಹತ್ವವನ್ನು ಮನತಟ್ಟುವ ಮೂಲಕ ತಿಳಿಸಿ, ಅಲ್ಲಿನ ಜನರಿಗೆ ಕ್ಯಾಲೆಂಡರ್ ವಿತರಿಸಿದ್ದಾರೆ. ಗ್ರಾಮ ಅರಣ್ಯ ಸಮಿತಿ ಸದಸ್ಯರು, ಇಲಾಖೆಯ ಕೆಳಹಂತದ ಸಿಬ್ಬಂದಿಯಲ್ಲಿ ಅರಣ್ಯ ರಕ್ಷಣೆಯ ತಿಳಿವಳಿಕೆ ಮೂಡಿಸಲಾಗಿದೆ’ ಎನ್ನುತ್ತಾರೆ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ್.

‘ಫೆಬ್ರುವರಿಯಿಂದ ಬೆಂಕಿ ಬೀಳುವ ಪ್ರಕರಣ ಹೆಚ್ಚಾಗುವ ಕಾರಣಕ್ಕೆ ಡಿಸೆಂಬರ್, ಜನೆವರಿ ಹೊತ್ತಿಗಾಗಲೇ ಜಾಗೃತಿ ಕಾರ್ಯಕ್ರಮ ಪೂರ್ಣಗೊಳಿಸಿದೆವು. ‘ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ’ ಈ ಘೋಷವಾಕ್ಯ, ವನ್ಯಜೀವಿ, ಕಾಡಿನ ಚಿತ್ರವಿರುವ ಕ್ಯಾಲೆಂಡರ್ ನಿತ್ಯ ಬೆಳಗಾದರೆ ಮನೆಯ ಜಗುಲಿಯಲ್ಲಿ ಕಣ್ಣಿಗೆ ಬೀಳುವುದರಿಂದ, ಕಾಡಿನೊಡನೆ ಬಂಧ, ಜಾಗೃತಿಯ ಪ್ರಜ್ಞೆ ಜನರಲ್ಲಿ ಮೂಡುತ್ತದೆ ಎಂಬ ಆಶಯ ನಮ್ಮದಾಗಿತ್ತು. ಇದಕ್ಕೆ ನಿರೀಕ್ಷಿತ ಫಲಿತಾಂಶವೂ ದೊರೆತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ಲಾಕ್‌ಡೌನ್‌ ಇರುವ ಕಾರಣ ಜನರು ಮನೆಯಿಂದ ಹೊರಬರುತ್ತಿಲ್ಲ. ಆದರೆ, ಹಳ್ಳಿಗೆ ಬಂದವರ ಸಂಖ್ಯೆ ಹೆಚ್ಚಾಗಿದೆ. ಕಾಡಿನಲ್ಲಿ ಸಂಚಾರ ಅಲ್ಲಲ್ಲಿ ಹೆಚ್ಚಿದ್ದರೂ, ಬೆಂಕಿ ಪ್ರಕರಣಗಳು ಕಡಿಮೆ ಇವೆ.
– ಡಿ.ಯತೀಶಕುಮಾರ್, ಸಿಸಿಎಫ್, ಕೆನರಾ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT