ಸೋಮವಾರ, ಸೆಪ್ಟೆಂಬರ್ 23, 2019
28 °C
ಶಿರಸಿಯಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ

‘ಜನರ ಸ್ಪಂದನದಿಂದ ಅರಣ್ಯ ಅಪರಾಧ ಕಡಿಮೆ’

Published:
Updated:
Prajavani

ಶಿರಸಿ: ಅರಣ್ಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಬುಧವಾರ ಇಲ್ಲಿ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಯಿತು.

ನಗರದ ಮಕ್ಕಳ ಉದ್ಯಾನದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ಮಾತನಾಡಿ, ‘ದೇಶದಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿದೆ. ಸಿಬ್ಬಂದಿ ಕೊರತೆಯ ನಡುವೆಯೂ ಅರಣ್ಯ ಸಂರಕ್ಷಣೆಯಾಗುತ್ತಿದೆ. ಸರ್ಕಾರ ಅರಣ್ಯ ಇಲಾಖೆಗೆ ಸುಧಾರಿತ ಸೌಲಭ್ಯ, ಆಯುಧಗಳನ್ನು ಕಲ್ಪಿಸಬೇಕು’ ಎಂದರು.

ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ ಮಾತನಾಡಿ, ‘ಹೆಚ್ಚು ಕಾಳಜಿಯಿಂದ ಅರಣ್ಯ ಸಂರಕ್ಷಣೆ ಮಾಡುತ್ತಿರುವ ಕೆನರಾ ವೃತ್ತದಲ್ಲಿ ಗ್ರಾಮ ಅರಣ್ಯ ಸಮಿತಿಗಳಿಂದ ಸಹ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ. ಹಿಂದಿನಷ್ಟು ಸಿಬ್ಬಂದಿ ಕೊರತೆ ಇಲಾಖೆಯಲ್ಲಿ ಈಗ ಇಲ್ಲ. ಯುವಜನರು ಇಲಾಖೆಗೆ ಸೇರ್ಪಡೆಗೊಳ್ಳುತ್ತಿರುವುದು ಆಶಾದಾಯಕವಾಗಿದೆ. ಸೇವಾ ಮನೋಭಾವದಿಂದ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ಜನರ ಸಕಾರಾತ್ಮಕ ಸ್ಪಂದನ ಇದ್ದರೆ ಅರಣ್ಯ ಅಪರಾಧ ಕಡಿಮೆ ಮಾಡಬಹುದು’ ಎಂದರು.

ಡಿವೈಎಸ್ಪಿ ಜಿ.ಟಿ.ನಾಯಕ ಮಾತನಾಡಿ, ಖಾಕಿ ಧರಿಸುವ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಮುಂದೆ ಸಾಕಷ್ಟು ಸವಾಲುಗಳಿವೆ. ಅರಣ್ಯ ಕಳ್ಳತನ ಹೆಚ್ಚಿದರೆ ಮುಂಬರುವ ದಿನಗಳಲ್ಲಿ ಆತಂಕ ಹೆಚ್ಚಾಗಲಿದ್ದು, ಎರಡು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು.

ಡಿಸಿಎಫ್ ಎಸ್.ಜಿ.ಹೆಗಡೆ, ಅರಣ್ಯ ಜಾಗೃತ ದಳದ ಡಿಸಿಎಫ್ ಯು.ಡಿ.ನಾಯ್ಕ ಇದ್ದರು. ಆರ್‌ಎಫ್‌ಒ ಪವಿತ್ರಾ ವರದಿ ವಾಚಿಸಿದರು. ಎಸಿಎಫ್ ಡಿ.ರಘು ನಿರೂಪಿಸಿದರು.

 

Post Comments (+)