ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಸಹಾಯದ ನಿರೀಕ್ಷೆಯಲ್ಲಿ ಅರಣ್ಯ ರಕ್ಷಕನ ಕುಟುಂಬ

ಒಂದು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದ ಗುರುನಾಥ ಲಕ್ಷ್ಮಣ ಗಾವಡಾ
Last Updated 29 ಏಪ್ರಿಲ್ 2020, 3:37 IST
ಅಕ್ಷರ ಗಾತ್ರ

ಕಾರವಾರ: ಅವರು ದಶಕಕ್ಕೂ ಅಧಿಕ ಕಾಲ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿದ್ದವರು. ಬರುವ ಅಲ್ಪ ವೇತನದಿಂದಲೇ ಕುಟುಂಬವನ್ನು ಸಂತೋಷದಿಂದ ಸಲಹಿದವರು.ಆದರೆ, ಒಂದು ತಿಂಗಳ ಹಿಂದೆ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಬಳಿಕ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಇದು ಜೊಯಿಡಾ ತಾಲ್ಲೂಕಿನ ಕುಂಬಾರವಾಡ ವನ್ಯಜೀವಿ ವಲಯದಲ್ಲಿಅರಣ್ಯ ರಕ್ಷಕನಾಗಿದ್ದಗುರುನಾಥ ಲಕ್ಷ್ಮಣ ಗಾವಡಾ (40) ಅವರ ಕುಟುಂಬದ ವ್ಯಥೆ.

ಕಾಡಿನಲ್ಲಿರುವ ಪ್ರಾಣಿಗಳ ಗಣತಿಗೆಂದು ಕ್ಯಾಮೆರಾ ಟ್ರ್ಯಾಪ್‌ಗಳ ಸ್ಟ್ಯಾಂಡ್‌ಗಳನ್ನು ಅಳವಡಿಸಲು ಮಾರ್ಚ್ 26ರಂದು ಅವರು ಗುಡ್ಡದ ಮೇಲೆ ಹೋಗಿದ್ದರು. ಆದರೆ, ಅಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡು ಒದ್ದಾಡಿದ್ದರು. ಅವರನ್ನು ಜೊಯಿಡಾದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೆ, ಅಷ್ಟರಲ್ಲಿ ಮೃತಪಟ್ಟಿದ್ದರು.

ಕಲಾ ವಿಭಾಗದಲ್ಲಿ ಪದವೀಧರನಾಗಿದ್ದ ಅವರು, ದಿನಗೂಲಿ ನೌಕರಿಯಾದರೂ ತೊಂದರೆಯಿಲ್ಲ. ಕುಟುಂಬದ ಯೋಗಕ್ಷೇಮ ಮುಖ್ಯ ಎಂದುಕೊಂಡು ತಮ್ಮಊರು ಕುಂಬಾರವಾಡ ಸಮೀಪದ ತೇಲೋಲಿಯಲ್ಲಿ ವಾಸವಿದ್ದರು. ಪತ್ನಿ, ಆರು ವರ್ಷದ ಒಬ್ಬ ಪುತ್ರ, ವಯಸ್ಸಾದ ತಂದೆ ಹಾಗೂ ತಾಯಿಯ ಸುಂದರ ಸಂಸಾರ ಅವರದ್ದಾಗಿತ್ತು. ಮನೆಯಲ್ಲಿ ಸಿರಿತನ ಇಲ್ಲದಿದ್ದರೂ ಸಿಗುವ ವೇತನದಲ್ಲೇ ಜೀವನ ಹೊಂದಿಸಿಕೊಂಡಿದ್ದರು.

‘ನಾನು ಅವರನ್ನು ಬಿ.ಎ ಗುರು ಎಂದೇ ಕರೆಯುತ್ತಿದ್ದೆ.ಕಾಡಿನ ಬಗ್ಗೆ ಅಪಾರ ಮಾಹಿತಿ, ಕಾಳಜಿ ಅವರಿಗಿತ್ತು.ಮುಗ್ಧ ಸ್ವಭಾವದ, ಎಲ್ಲರನ್ನು ಗೌರವದಿಂದ ಕಾಣುವ ವ್ಯಕ್ತಿತ್ವ ಅವರದ್ದಾಗಿತ್ತು. ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು. ಅವರ ಕುಟುಂಬದ ಭವಿಷ್ಯಕ್ಕಾಗಿ ಗೆಳೆಯರೆಲ್ಲ ಸೇರಿ ಹಣಕಾಸು ಹೊಂದಿಸುತ್ತಿದ್ದೇವೆ. ವಿಶೇಷವಾಗಿ ಅವರ ಪುತ್ರ ಗೌತಮನ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹ ಆಗಬೇಕು’ಎನ್ನುತ್ತಾರೆಅವರ ಗೆಳೆಯ ಪ್ರಕಾಶ ಹೊನ್ನಕೇರೆ.

‘ಅರಣ್ಯ ಇಲಾಖೆಯಲ್ಲಿ ಕಾಯಂ ಸಿಬ್ಬಂದಿ ಕರ್ತವ್ಯ ಸಮಯದಲ್ಲಿ ನಿಧನರಾದರೆ ಪರಿಹಾರದ ರೂಪದಲ್ಲಿ ಸಾಕಷ್ಟು ಸೌಲಭ್ಯಗಳು ಅವರ ಕುಟುಂಬಕ್ಕೆ ಸಿಗುತ್ತವೆ. ಆದರೆ, ದಿನಗೂಲಿ ನೌಕರರಿಗೆ ಈ ರೀತಿಯ ಯಾವುದೇ ಸೌಲಭ್ಯಗಳಿಲ್ಲ. ಹಾಗಾಗಿ ಅವರ ಕುಟುಂಬಕ್ಕೆ ಕೈಲಾದ ಸಹಾಯ ಮಾಡುವ ಅಗತ್ಯವಿದೆ’ ಎಂದು ವಿನಂತಿಸುತ್ತಾರೆ.

ನಿರ್ದೇಶಕರಿಗೆ ವರದಿ:‘ಮೃತ ಗುರುನಾಥ ಗಾವಡಾ ಅವರ ಕುಟುಂಬದ ಸ್ಥಿತಿಗತಿಗಳ ಬಗ್ಗೆ ವಿವರವಾದ ವರದಿಯನ್ನು ರಾಜ್ಯ ವನ್ಯಜೀವಿ ಮಂಡಳಿಯ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಅವರಿಂದ ಸಕಾರಾತ್ಮಕಸ್ಪಂದನೆ ಸಿಗುವ ವಿಶ್ವಾಸವಿದೆ. ಅವರ ಕುಟುಂಬಕ್ಕೆನಮ್ಮಿಂದಾದ ಸಹಾಯ ಮಾಡುತ್ತೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡ್ಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಗುರುನಾಥ ಗಾವಡಾ ಅವರ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛಿಸುವವವರು ಅವರ ಪತ್ನಿ ಪ್ರತಿಮಾ ಗುರುನಾಥ ಗಾವಡಾ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.

ಪ್ರತಿಮಾ ಗುರುನಾಥ್ ಗಾವಡಾ, ಖಾತೆ ಸಂಖ್ಯೆ:64132326448.IFSC ಕೋಡ್: SBIN0040358, ಭಾರತೀಯ ಸ್ಟೇಟ್ ಬ್ಯಾಂಕ್, ಕುಂಬಾರವಾಡಾ ಶಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT