ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃ ಘಟಕಕ್ಕೆ ಮರು ವರ್ಗಾವಣೆ: ಶ್ರೀರಾಮುಲು ಚಾಲನೆ

ಬಸ್ ನಿಲ್ದಾಣ, ಆರ್.ಟಿ.ಓ ಕಚೇರಿ ಕಾಮಗಾರಿಗೆ
Last Updated 4 ಮೇ 2022, 14:34 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್, ಮುಷ್ಕರ ಹೂಡಿಕೆ ಕಾರಣಕ್ಕೆ ಅನ್ಯ ಘಟಕಗಳಿಗೆ ವರ್ಗಾವಣೆಯಾಗಿದ್ದ ಸಾರಿಗೆ ಸಂಸ್ಥೆಯ ನೌಕರರನ್ನು ಮಾತೃ ಘಟಕಕ್ಕೆ ಶೀಘ್ರವೇ ಮರು ವರ್ಗಾವಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇಲ್ಲಿನ ಹಳೆ ಬಸ್ ನಿಲ್ದಾಣ ಆವರಣದಲ್ಲಿ ₹6.78 ಕೋಟಿ ವೆಚ್ಚದ ಬಸ್ ನಿಲ್ದಾಣ, ₹5 ಕೋಟಿ ವೆಚ್ಚದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಕಟ್ಟಡ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಅಪಘಾತ ರಹಿತ ಚಾಲನೆ ಮಾಡಿದ ಶಿರಸಿ ವಿಭಾಗದ 40 ಚಾಲಕರಿಗೆ ಬೆಳ್ಳಿ ಪದಕಗಳನ್ನು ವಿತರಿಸಿದರು.

‘ಒತ್ತಡದ ನಡುವೆಯೂ ಸಂಸ್ಥೆ, ಪ್ರಯಾಣಿಕರ ಹಿತ ಕಾಯುವ ಕೆಲಸವನ್ನು ಬಸ್ ಚಾಲಕರು, ನಿರ್ವಾಹಕರು ಮಾಡುತ್ತಿದ್ದಾರೆ. ಪ್ರಾಮಾಣಿಕ ಸಿಬ್ಬಂದಿಯಿಂದ ಸಂಸ್ಥೆಯ ಗೌರವವೂ ಉಳಿದಿದೆ’ ಎಂದು ಶ್ಲಾಘಿಸಿದರು.

‘ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗೆ ಈಗಿನ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. 4 ಸಾವಿರ ಹೊಸ ಬಸ್ ಖರೀದಿಸಲಾಗುತ್ತಿದ್ದು, ಶಿರಸಿ ವಿಭಾಗಕ್ಕೆ 150 ಬಸ್ ನೀಡಲಾಗುವುದು’ ಎಂದರು.

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ವರ್ಷದೊಳಗೆ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಮೊದಲಿಗಿಂತ ವಿಸ್ತಾರವಾದ ನಿಲ್ದಾಣವಾಗಲಿದೆ. ಮಳಿಗೆ ಹೆಚ್ಚಿಸುವ ಕೆಲಸವಾಗದೆ ಪ್ರಯಾಣಿಕರಿಗೆ ಅಗತ್ಯವಾಗುವಂತೆ ನಿಲ್ದಾಣ ನಿರ್ಮಾಣ ಮಾಡಬೇಕು’ ಎಂದರು.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ‘ಸಾರಿಗೆ ಸಂಸ್ಥೆ ಬಡವರು, ಮಧ್ಯಮ ವರ್ಗದವರ ಸಂಸ್ಥೆಯಾಗಿದೆ. ಜನರೇ ಸಾರಿಗೆ ಸಂಸ್ಥೆಯನ್ನು ಮೇಲಕ್ಕೆತ್ತಬೇಕು’ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಸಾರಿಗೆ ಇಲಾಖೆ ಅಪರ ಆಯುಕ್ತ ಮಾರುತಿ ಸಾಮ್ರಾಣಿ, ಜಂಟಿ ಆಯುಕ್ತೆ ಜಿ.ಶೋಭಾ, ಆರ್.ಟಿ.ಒ. ಸಿ.ಡಿ.ನಾಯ್ಕ, ಇತರರು ಇದ್ದರು. ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ರಾಜಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT