ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಗ್ ಟರ್ನ್‌

Last Updated 6 ಜೂನ್ 2018, 19:40 IST
ಅಕ್ಷರ ಗಾತ್ರ

ಕ್ರೌರ್ಯವನ್ನು ತೋರಿಸಿ, ಪ್ರೇಕ್ಷಕನಿಗೆ ಹೇಸಿಗೆಯಾಗುವಂತೆ ಮಾಡಿ ಅದರಿಂದಲೇ ಕಮರ್ಷಿಯಲ್ ಆಗಿ ಗೆಲ್ಲುವ ಸಿನಿಮಾಗಳ ದೊಡ್ಡ ಪರಂಪರೆಯೇ ಹಾಲಿವುಡ್‌ನಲ್ಲಿದೆ. ಸಾಮಾನ್ಯವಾಗಿ ಇಂಥ ಚಿತ್ರಗಳನ್ನು ಮಾಡುವಾಗ ನಿರ್ದೇಶಕ, ಇದೇ ಮಾದರಿಯ ಹಿಂದಿನ ಚಿತ್ರಗಳಲ್ಲಿ ತೋರಿಸಿದ್ದಕ್ಕಿಂತ ಬೇರೆ ರೀತಿಯಲ್ಲಿ ಇನ್ನಷ್ಟು ಭೀಕರವಾಗಿ ತೋರಿಸುವ ಸವಾಲು ಇರುತ್ತದೆ. ಹಿಂದಿನ ಸಿನಿಮಾದಲ್ಲಿ ಒಂದು ಕೈ ಕತ್ತರಿಸಿದ ದೃಶ್ಯವಿದ್ದರೆ ಈ ಸಲ ಎರಡು ಕೈ ಕತ್ತರಿಸುವ, ಅದನ್ನು ತಿನ್ನುವುದನ್ನು ತೋರಿಸುವುದರ ಮೂಲಕ ರೋಚಕಗೊಳಿಸುವ ದಾರಿ ಅದು. ಇದೊಂದು ಬಗೆಯಲ್ಲಿ ವಿಕೃತಿಯನ್ನು ಮಾರುವ ಅಂಗಡಿ. ಈ ವಿಕೃತ ರೋಚಕತೆಯ ದಾರಿಯಲ್ಲಿನ ಸಿನಿಮಾಗಳು ಎಲ್ಲಿಯವರೆಗೆ ಸಾಗಿವೆ ಎನ್ನುವುದನ್ನು ಅರಿಯಲು ‘ರಾಂಗ್ ಟರ್ನ್’ ಸರಣಿಯ ಸಿನಿಮಾಗಳನ್ನು ನೋಡಬೇಕು.

ಅಮೆರಿಕದಲ್ಲಿ ನಿರ್ಮಾಣವಾದ ಈ ಸರಣಿಯ ಮೊದಲ ಸಿನಿಮಾ ಬಂದಿದ್ದು 2003ರಲ್ಲಿ. ಅದರ ಯಶಸ್ಸಿನಿಂದ ಅದರ ಮುಂದಿನ ಭಾಗ ‘ರಾಂಗ್ ಟರ್ನ್ 2’ ಎಂಬ ಸಿನಿಮಾ ‘ಡೆಡ್ ಎಂಡ್’ ಎಂಬ ಅಡಿಶೀರ್ಷಿಕೆಯೊಟ್ಟಿಗೆ 2007ರಲ್ಲಿ ಬಂತು. ನಂತರ 2009, 11, 12, 14ರಲ್ಲಿ ಈ ಸರಣಿಯ ಸಿನಿಮಾಗಳು ಬಂದವು. ಇಲ್ಲಿನ ಎಲ್ಲ ಚಿತ್ರಗಳಲ್ಲಿಯೂ ಕ್ರೌರ್ಯವೊಂದೇ ಬಂಡವಾಳ. ಅದನ್ನು ಬಗೆಬಗೆಯಾಗಿ ತೋರಿಸಲು ಕಥೆಯೆಂಬುದು ನೆಪವಷ್ಟೆ.

ಒಂದು ಪ್ರದೇಶದಲ್ಲಿ ಮನುಷ್ಯರನ್ನೇ ತಿಂದು ಬದುಕುವ ವಿಕಾರ ಮುಖದ ಮನುಷ್ಯರ ಕುಟುಂಬ ಇರುತ್ತದೆ. ಆ ಕಾಡಿಗೆ ಭೇಟಿ ಕೊಡುವ ಜನರನ್ನು ಹಿಡಿದು ತಂದು ದೇಹವನ್ನು ಬಗೆಬಗೆಯಾಗಿ ಕತ್ತರಿಸಿ ಅಡುಗೆ ಮಾಡಿಕೊಂಡು ತಿನ್ನುತ್ತಾರೆ. ಅಂಥ ಜಾಗಕ್ಕೆ ರಿಯಾಲಿಟಿ ಷೋ ಮಾಡಲು ಹೋಗುವ ಒಂದು ತಂಡದ ಗತಿ ಏನಾಗುತ್ತದೆ ಎನ್ನುವುದು 2007ರಲ್ಲಿ ಬಂದ ‘ರಾಂಗ್ ರೂಟ್‌2’ ನ ಕಥೆ. ಕರುಳನ್ನು ಕಿತ್ತು ನೇತು ಹಾಕುವುದು, ವಿಕಾರ ಶಿಶುವಿಗೆ ಬೆರಳನ್ನು ಕತ್ತರಿಸಿ ಬಾಯಿಗಿಟ್ಟು ತಿನ್ನಿಸುವುದು, ನೆತ್ತಿಯ ಮೇಲೆ ಕೊಡಲಿಯಲ್ಲಿ ಹೊಡೆದು ಇಡೀ ದೇಹವನ್ನು ಅರ್ಧಕ್ಕೆ ಸೀಳಿ ಹಾಕಿ ಎಳೆದುಕೊಂಡು ಹೋಗುವುದು ಹೀಗೆ ವಾಕರಿಕೆ ದೃಶ್ಯಗಳಿಂದಲೇ ಇಡೀ ಚಿತ್ರ ತುಂಬಿಹೋಗಿದೆ. ಜಾನ್ ಲಿಂಚ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮಕ್ಕಳು ಮತ್ತು ಮಾನಸಿಕ ದುರ್ಬಲರೊಂದಿಗೆ ಕೂತು ನೋಡುವ ಸಿನಿಮಾ ಅಲ್ಲವೇ ಅಲ್ಲ ಇವು. ಥ್ರಿಲ್ಲರ್ ಜಾನರ್‌ನ ಒಂದು ಕವಲು ಎಷ್ಟು ವಿಕೃತಿಗೆ ತಲುಪಿದೆ ಎನ್ನುವುದನ್ನು ತಿಳಿಯಲು ಈ ಸಿನಿಮಾವನ್ನು ನೋಡಬೇಕು. ಅಂತರ್ಜಾಲದಲ್ಲಿ  https://bit.ly/2xA3TFN ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT