ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ

l ಸಮುದ್ರದಂತೆ ಕಾಣುವ ಗದ್ದೆಗಳು l ಉಕ್ಕಿ ಹರಿಯುತ್ತಿದೆ ಲಕ್ಷ್ಮಣ ತೀರ್ಥ ನದಿ l ಕೆಲವೆಡೆ ಸಂಭವಿಸಿದ ಹಾನಿ
Last Updated 13 ಜೂನ್ 2018, 11:37 IST
ಅಕ್ಷರ ಗಾತ್ರ

ಮಡಿಕೇರಿ/ಗೋಣಿಕೊಪ್ಪಲು/ ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿಯಿತು. ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲೂ ಬಿಡುವು ನೀಡುತ್ತಾ ಭಾರಿ ಮಳೆ ಸುರಿಯುತ್ತಿದೆ. ಮಳೆ ಹಾಗೂ ಗಾಳಿಗೆ ಕೃಷಿ ಚಟುವಟಿಕೆಗೂ ಅಡ್ಡಿ ಉಂಟಾಗಿದೆ. ಸಸಿ ಮಡಿ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ.

ದಕ್ಷಿಣ ಕೊಡಗು, ನಾಪೋಕ್ಲು ಭಾಗದ ಗದ್ದೆಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಕಾಫಿ ತೋಟದ ಕೆಲಸಕ್ಕೂ ಅಡ್ಡಿ ಉಂಟಾಗಿದೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 85.52 ಮಿ.ಮೀ. ಮಳೆಯಾಗಿದೆ. ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ 216 ಮಿ.ಮೀ. ದಾಖಲೆಯ ಮಳೆ ಸುರಿದಿದೆ. ಉಳಿದಂತೆ ಶ್ರೀಮಂಗಲದಲ್ಲಿ 179 ಮಿ.ಮೀ., ಶಾಂತಳ್ಳಿ 171 ಮಿ.ಮೀ., ನಾಪೋಕ್ಲು 126 ಮಿ.ಮೀ., ಸೋಮವಾರಪೇಟೆ 138.20 ಮಿ.ಮೀ. ಹಾಗೂ ಶನಿವಾರಸಂತೆಯಲ್ಲಿ 100 ಮಿ.ಮೀ. ಮಳೆಯಾಗಿದೆ. ಜೋರು ಮಳೆ ಸುರಿದ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಜನವರಿಯಿಂದ ಇದುವರೆಗೂ ಜಿಲ್ಲೆಯಲ್ಲಿ 847.01 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 406.66 ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿ ನಲ್ಲಿ 66.50 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 108.73 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 81.34 ಮಿ.ಮೀ. ಮಳೆ ಸುರಿದಿದೆ.

ಜಲಾವೃತಗೊಂಡ ಗದ್ದೆಗಳು: ದಕ್ಷಿಣ ಕೊಡಗಿನ ಶ್ರೀಮಂಗಲ, ಇರ್ಪು, ಕುಟ್ಟ, ಬಿರುನಾಣಿ, ಬಾಳೆಲೆ, ಹುದಿಕೇರಿ, ಪೊನ್ನಂಪೇಟೆ ಭಾಗಕ್ಕೆ ಮಂಗಳವಾರ ಧಾರಾಕಾರ ಮಳೆ ಸುರಿಯಿತು.

ಮುಂಜಾನೆಯಿಂದ ಬೆಳಿಗ್ಗೆ 9 ಗಂಟೆವರೆಗೆ ಈ ಭಾಗದಲ್ಲಿ ಸಾಧಾರಣ ಮಳೆ ಬೀಳುತ್ತಿತ್ತು. 10 ಗಂಟೆಯ ಬಳಿಕ ತೀವ್ರಗೊಂಡಿತು. ಗುಡುಗು ಸಹಿತ ಬಿದ್ದ ಧಾರಾಕಾರ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದವು. ಶ್ರೀಮಂಗಲ, ಕಾನೂರು, ನಿಟ್ಟೂರು, ಬಾಳೆಲೆ ಭಾಗದ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯಿತು.

ನದಿಯ ಎಡಬಲದ ಗದ್ದೆಗಳು ಜಲಾವೃತಗೊಂಡಿದ್ದು, ಸಾಗರದಂತೆ ಕಂಡು ಬರುತ್ತಿವೆ. ಕೊಟ್ಟಗೇರಿ ಬಾಳೆಲೆ ನಡುವಿನ ಲಕ್ಷ್ನಣ ತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚಿದ್ದು ನದಿನೀರು ಗದ್ದೆಗಳನ್ನು ಆವರಿಸಿದೆ.

ಈ ಭಾಗದ ಸೇತುವೆ ದಡ ಕುಸಿದು ವಾಹನ ಸಂಪರ್ಕ ಕಡಿತಗೊಂಡಿದೆ. ಸೇತುವೆಯ ಒಂದು ಬದಿಯ ದಡ ಕುಸಿದಿರುವುದರಿಂದ ಜನಸಂಚಾರಕ್ಕೂ ಅಡಚಣೆಯಾಗಿದೆ. ಕಿರುಗೂರು ನಲ್ಲೂರು ನಡುವಿನ ಕೀರೆ ಹೊಳೆ ಕೂಡ ತುಂಬಿ ಹರಿಯುತ್ತಿದೆ. ಕಾನೂರು ಬಳಿಯಲ್ಲಿ ಲಕ್ಷ್ನಣ ತೀರ್ಥ ನದಿ ನೀರು ಗದ್ದೆಗಳನ್ನು ಆವರಿಸಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದ ನಿಟ್ಟೂರು, ಬಾಳೆಲೆ ನಡುವೆ ನೂತನ ಸೇತುವೆ ನಿರ್ಮಾಣಗೊಂಡಿರುವುದರಿಂದ ಈ ಭಾಗದ ರಸ್ತೆ ಸಂಚಾರ ಇದೀಗ ಸುಗಮವಾಗಿದೆ.

ಬಿರುನಾಣಿ ಭಾಗದಲ್ಲಿಯೂ ಮಳೆಯ ರಭಸ ತೀವ್ರಗೊಂಡಿದ್ದು, ಇಲ್ಲಿನ ಕೆ.ಕೆ.ಆರ್ ಮತ್ತು ಬರಪೊಳೆಗಳು ಮೈದುಂಬಿ ಹರಿಯುತ್ತಿವೆ. ಇರ್ಪು ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ಜಲಪಾತದ ನೀರು ಬಂಡೆಕಲ್ಲಿನ ಮೇಲೆ ಹಾಲ್ನೊರೆ ಚೆಲ್ಲುತ್ತಾ ಸಾಗುತ್ತಿರುವ ದೃಶ್ಯ ನಯನ ಮನೋಹರವಾಗಿದೆ.

ಶ್ರೀಮಂಗಲ, ಕುಟ್ಟ ಭಾಗಕ್ಕೂ ಮಳೆ ಬಿಡುವಿಲ್ಲದಂತೆ ಬಿದ್ದಿತು. ಹುದಿಕೇರಿ, ಕುಟ್ಟ, ಬಾಳೆಲೆ, ಶ್ರೀಮಂಗಲ ಕ್ಲಸ್ಟರ್ ವಿಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಪದವಿ ಪೂರ್ವ ಕಾಲೇಜುಗಳು ಎಂದಿನಂತೆ ನಡೆದವು. ಆದರೆ, ವಿದ್ಯಾರ್ಥಿಗಳ ಹಾಜರಿ ಕ್ಷೀಣಿಸಿತ್ತು.

ಗೋಣಿಕೊಪ್ಪಲು, ಹಾತೂರು, ಪಾಲಿಬೆಟ್ಟ, ತಿತಿಮತಿ, ಆನೆಚೌಕೂರು ಭಾಗಗಳಿಗೆ ಸಾಧಾರಣ ಮಳೆಯಾಯಿತು. ಸಂಜೆ ಗೋಣಿಕೊಪ್ಪಲಿಗೂ ಗುಡುಗು ಸಹಿತ ಧಾರಾಕಾರ ಮಳೆ ಬಿದ್ದಿತು.

ವಿರಾಜಪೇಟೆ–15 ಮನೆಗಳು ಜಖಂ

ವಿರಾಜಪೇಟೆ ಪಟ್ಟಣ ಹಾಗೂ ಸೇರಿದಂತೆ ಗ್ರಾಮಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಉತ್ತಮ ಮಳೆ ಸುರಿದಿದೆ. ಸೋಮವಾರ ಕೊಂಚ ಮಟ್ಟಿಗೆ ಇಳಿಮುಖಗೊಂಡಿದ್ದ ಮಳೆಯು ಮಂಗಳವಾರ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಪಟ್ಟಣ ಪ್ರದೇಶ ಸೇರಿದಂತೆ ಸಮೀಪದ ಕುಕ್ಲೂರು, ಕದನೂರು, ಒಂಟಿಯಂಗಡಿ, ಕಾಕೋಟು ಪರಂಬು, ಬಿಟ್ಟಂಗಾಲ, ಆರ್ಜಿ, ಬೇಟೋಳಿ, ಅಮ್ಮತ್ತಿ, ಕಾವಾಡಿ, ಬಿಳುಗುಂದ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದೆ.

ಮಂಗಳವಾರ ಮಳೆ ಮತ್ತೆ ಬಿರುಸುಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೆಲವು ಶಾಲೆಗಳಿಗೆ ಮಧ್ಯಾಹ್ನದ ನಂತರ ರಜೆ ನೀಡಲಾಯಿತು.

ವಿರಾಜಪೇಟೆ ಭಾಗಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 99.4 ಮಿ.ಮೀ. ಮಳೆ ಸುರಿದಿದೆ. ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಿಂದ ವಿದ್ಯುತ್‌ ಕಡಿತವುಂಟಾಗಿದೆ. ರಾತ್ರಿ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಪಟ್ಟಣದ ನೆಹರೂ ನಗರದಲ್ಲಿ ಮನೆಯ ಹಿಂಬದಿಯ ಗುಡ್ಡ ಕುಸಿದು ಜಖಂಗೊಂಡಿದೆ.

ಕಳೆದ ಒಂದು ವಾರದಿಂದ ತಾಲ್ಲೂಕಿ ನಾದ್ಯಂತ ನಿರಂತರವಾಗಿ ಸುರಿಯು ತ್ತಿರುವ ಭಾರಿ ಗಾಳಿ ಮಳೆಗೆ ಈವರೆಗೆ 15 ಮನೆಗಳು ಜಖಂಗೊಂಡಿದ್ದು, ₹ 1.93 ಲಕ್ಷ ನಷ್ಟ ಉಂಟಾಗಿದೆ.

ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಹುದಿಕೇರಿ ಗ್ರಾಮದ ಎಚ್.ಬಿ. ಸೋಮಯ್ಯ ಅವರಿಗೆ ಸೇರಿದ ಮನೆಯ ಒಂದು ಭಾಗ ಜಖಂಗೊಂಡಿದ್ದು, ₹5,300 ನಷ್ಟ ಉಂಟಾಗಿದೆ.

ತಿತಿಮತಿಯ ಸೀತಾ, ಅದೇ ಊರಿನ ಜೋಯಿಸ್ ಅವರ ಮನೆಗೂ ಹಾನಿಯಾಗಿದೆ. ಕೈಕೇರಿ ಗ್ರಾಮದ ಮಾಚಯ್ ಅವರ ಮನೆಯೂ ಕುಸಿದಿದೆ. ತಹಶೀಲ್ದಾರ್‌ ಆರ್. ಗೋವಿಂದರಾಜ್ ಅವರು ಸೋಮವಾರ ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದ ಕಾವೇರಿ ಹೊಳೆ ಬದಿ ಹಾಗೂ ಪಾಲಿಬೆಟ್ಟಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ಕುಟ್ಟ, ತಿತಿಮತಿ ಮಾಯಮುಡಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಸೇರಿದಂತೆ ವಿವಿಧೆಡೆಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.

ಹೋಬಳಿವಾರು ಮಳೆ ವಿವರ

ಮಡಿಕೇರಿ ಕಸಬಾ 36.20, ಸಂಪಾಜೆ 20.60, ಭಾಗಮಂಡಲ 82.80, ವಿರಾಜಪೇಟೆ ಕಸಬಾ 94, ಪೊನ್ನಂಪೇಟೆ 59.40, ಅಮ್ಮತಿ 56, ಬಾಳೆಲೆ 48, ಶಾಂತಳ್ಳಿ 171, ಕೊಡ್ಲಿಪೇಟೆ 56.60, ಸುಂಟಿಕೊಪ್ಪ 16.02, ಕುಶಾಲನಗರ 6.20 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT