ಮೂರು ತಾಲ್ಲೂಕುಗಳಿಗೆ ಮಾತ್ರ ಅನುದಾನ: ಕಾರವಾರ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗದ್ದಲ

ಕಾರವಾರ: ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಹೊಸ ಕಾಮಗಾರಿಗಳಿಗೆ ಹಳಿಯಾಳ, ಮುಂಡಗೋಡ ಮತ್ತು ಜೊಯಿಡಾ ತಾಲ್ಲೂಕುಗಳನ್ನು ಮಾತ್ರ ಪರಿಗಣಿಸಿರುವ ವಿಚಾರವು ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ದೊಡ್ನಳ್ಳಿ ಕ್ಷೇತ್ರದ ಸದಸ್ಯೆ ಉಷಾ ಹೆಗಡೆ, ‘ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ವಲಯದಿಂದ 197 ಹೊಸ ಕಾಮಗಾರಿಗಳಿಗೆ ₹ 7.83 ಅನುದಾನ ಮಂಜೂರಾಗಿತ್ತು. ಈ ಹಣವನ್ನು ಮೂರೇ ತಾಲ್ಲೂಕುಗಳಿಗೆ ನೀಡಿದ್ದು ಯಾಕೆ’ ಎಂದು ಪ್ರಶ್ನಿಸಿದರು. ಆಗ ಎಲ್ಲ ಸದಸ್ಯರೂ ಗ್ರಾಮೀಣ ನೀರಿನ ಯೋಜನೆಯ ಸಹಾಯಕ ಎಂಜಿನಿಯರ್ ಶಂಕರ್ ಕುರ್ಡೇಕರ್ ವಿರುದ್ಧ ಮುಗಿಬಿದ್ದರು.
ಈ ನಡುವೆ ಉಷಾ ಹೆಗಡೆ, ‘12 ತಾಲ್ಲೂಕುಗಳ ದೊಡ್ಡ ಜಿಲ್ಲೆಯಲ್ಲಿ ಅನುದಾನ ಸರಿಯಾಗಿ ಹಂಚಿಕೆಯಾಗಿಲ್ಲ. ಇದು ಜಿಲ್ಲಾ ಉಸ್ತುವಾರಿ ಸಚಿವರು ಇಡೀ ಜಿಲ್ಲೆಗೆ ಮಾಡುತ್ತಿರುವ ಅನ್ಯಾಯ ಎಂದು ಭಾವಿಸಬೇಕಾಗುತ್ತದೆ’ ಎಂದು ಆರೋಪಿಸಿದರು.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ‘ಸಚಿವರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂಬ ಮಾತನ್ನು ಖಂಡಿಸುತ್ತೇವೆ. ಅವರ ವಿರುದ್ಧ ಆಡಿದ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಭೆ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದು ಒಕ್ಕೊರಲಿನಿಂದ ಹೇಳಿದರು.
ಅಂಕೋಲಾದ ಸದಸ್ಯ ಜಗದೀಶ ನಾಯ್ಕ ಮೊಗಟಾ ಅವರು ಉಷಾ ಹೆಗಡೆ ಅವರನ್ನು ಬೆಂಬಲಿಸಿದರು. ಸಭೆಯಲ್ಲಿ ಗದ್ದಲ ಹೆಚ್ಚಾದಾಗ ಮಧ್ಯಪ್ರವೇಶಿಸಿದ ಅಧ್ಯಕ್ಷೆ ಜಯಶ್ರೀ ಮೊಗೇರ, ‘ನಿಮ್ಮ ಮಾತನ್ನು ವಾಪಸ್ ಪಡೆಯುವುದು ಸೂಕ್ತ. ಇದು ಸದಸ್ಯರ ಸಲಹೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಉಷಾ ಹೆಗಡೆ, ‘ಅನುದಾನ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಉದ್ದೇಶದಿಂದಷ್ಟೇ ಹೇಳಿದ್ದೇನೆ’ ಎಂದು ಸಮಜಾಯಿಷಿ ನೀಡಿದರು. ಬಳಿಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್, ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಯ ಕುರಿತು ಪ್ರತ್ಯೇಕ ಸಭೆ ಆಯೋಜಿಸಲಾಗುವುದು ಎಂದು ಪ್ರಕಟಿಸಿ ಸದಸ್ಯರನ್ನು ಸಮಾಧಾನಗೊಳಿಸಿದರು.
ಪಿಡಿಒ ಇಲ್ಲದ ಗ್ರಾಮ ಪಂಚಾಯ್ತಿ: ‘ಭಟ್ಕಳ ತಾಲ್ಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಹಲಗೇರಿಗೆ ನಿಯೋಜನೆ ಮಾಡಲಾಗಿದೆ. ಮೂರು ತಿಂಗಳಾದರೂ ಬೇರೆಯವರ ನೇಮಕವಾಗಿಲ್ಲ’ ಎಂದು ಸದಸ್ಯರಾದ ಪುಷ್ಪಾ ಗೋವಿಂದ ನಾಯ್ಕ ಹಾಗೂ ಆಲ್ಬರ್ಟ್ ಡಿಕೋಸ್ತ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾಧಿಕಾರಿ ವಿ.ಎಂ.ಹೆಗಡೆ, ‘ಚುನಾವಣೆಯ ಸಂದರ್ಭದಲ್ಲಿ ಪಿಡಿಒ ಒಂದು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ದೂರು ಬಂದಿತ್ತು. ಅದಕ್ಕೆ ಬೇರೆಡೆಗೆ ನಿಯೋಜನೆ ಮಾಡಲಾಗಿದೆ’ ಎಂದರು.
ಇದರಿಂದ ಅಸಮಾಧಾನಗೊಂಡ ಪುಷ್ಪಾ ಗೋವಿಂದ ನಾಯ್ಕ, ‘ಅವರು ರಾಜಕಾರಣ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಕೊಡಿ. ಬೇರೆಯವರನ್ನೂ ನೇಮಕ ಮಾಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಸಿಇಒ ಮೊಹಮ್ಮದ್ ರೋಷನ್, ‘ಪಿಡಿಒಗಳ ವರ್ಗಾವಣೆ ಸಂಪೂರ್ಣ ಆಡಳಿತಾತ್ಮಕ ಹಾಗೂ ಗಂಭೀರ ವಿಚಾರ. ಇದರ ಸಂಪೂರ್ಣ ಮಾಹಿತಿ ಪಡೆದು 15 ದಿನಗಳಲ್ಲಿ ತಿಳಿಸಲಾಗುವುದು’ ಎಂದು ಭರವಸೆ ನೀಡಿದರು.
ಇನ್ನೂ ಬಾರದ ಹಣ: ‘ಶಾಲಾ ಆಟದ ಮೈದಾನ ಸಂಬಂಧ ಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡ ಕಾಮಗಾರಿಗಳಿಗೆ ನಾಲ್ಕು ವರ್ಷಗಳಾದರೂ ಹಣ ಬಿಡುಗಡೆಯಾಗಿಲ್ಲ. ಪಿಡಿಒಗಳು ಈ ಮೊದಲು ಒಂದು ಎಕರೆ ಜಮೀನು ಇರಬೇಕು ಎಂದು ಹೇಳುತ್ತಿದ್ದರು. ಈಗ 20 ಗುಂಟೆ ಎನ್ನುತ್ತಿದ್ದಾರೆ. ಅವರಿಗೆ ಸರಿಯಾದ ಮಾಹಿತಿಯಿಲ್ಲ. ಬಡವರನ್ನು ದುಡಿಸಿಕೊಂಡು ಮತ್ತಷ್ಟು ಬಡವರನ್ನಾಗಿ ಮಾಡಬೇಡಿ’ ಎಂದು ಆಲ್ಬರ್ಟ್ ಡಿಕೋಸ್ತ ಅಸಮಾಧಾನ ವ್ಯಕ್ತಪಡಿಸಿದರು.
‘ವಿಶೇಷ ಅನುದಾನ ಅಗತ್ಯ’: ‘ಜಿಲ್ಲೆಯ ಶಿಥಿಲ ಶಾಲೆಗಳ ಕಟ್ಟಡ ದುರಸ್ತಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಅದಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಸದಸ್ಯ ಶಿವಾನಂದ ಹೆಗಡೆ ಅವರು ಸಿಇಒ ಮೊಹಮ್ಮದ್ ರೋಶನ್ ಅವರಿಗೆ ಮನವಿ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ವಿತರಣೆ ವಿಳಂಬವಾಗಿದೆ. ಅವು ಕಳೆಪಯಾಗಿವೆ ಎಂದೂ ಸದಸ್ಯರು ಆರೋಪಿಸಿದರು. ಅವುಗಳ ಪೂರೈಕೆಗೆ ಸರ್ಕಾರವೇ ಗುತ್ತಿಗೆ ನೀಡಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಶಾಲೆಗಳಿಗೆ ಏಕರೂಪದ ಸಮಯ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಮಯವನ್ನು ಒಂದೇ ರೀತಿಯಿಡಬೇಕು. ಈಗ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬೇರೆ ಬೇರೆ ಸಮಯದಲ್ಲಿ ಆರಂಭವಾಗುವ ಕಾರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಸಿದ್ದಾಪುರದ ಸದಸ್ಯೆ ಸುಮಾ ನಾಯ್ಕ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ, ‘ಎರಡೂ ಶಾಲೆಗಳಿಗೆ ಏಕರೂಪದ ಸಮಯ ನಿಗದಿ ಮಾಡಲಾಗಿದ್ದು, ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ತರಗತಿಗಳು ನಡೆಯಲಿವೆ’ ಎಂದು ಸ್ಪಷ್ಟಪಡಿಸಿದರು.
ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ ನಾಯ್ಕ, ಜಯಮ್ಮ ಕೃಷ್ಣ ಹಿರಳ್ಳಿ, ಸಂಜಯ ಮಾರುತಿ ಹಣಬರ ವೇದಿಕೆಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.