ಶುಕ್ರವಾರ, ಮೇ 27, 2022
30 °C
ಗಡಿನಾಡ ಕನ್ನಡ ಉತ್ಸವದಲ್ಲಿ ಡಾ.ಸಿ.ಸೋಮಶೇಖರ ಸಲಹೆ

ಸರ್ಕಾರಿ ನೌಕರರಲ್ಲಿ ಜನತತ್ವ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸರ್ಕಾರಿ ನೌಕರರು ಕಚೇರಿಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಾಣುವುದನ್ನು ರೂಢಿಸಿಕೊಳ್ಳಬೇಕು. ಆಡಳಿತದಲ್ಲಿ ಜನತತ್ವ, ಜನಸ್ಪಂದನೆ ಇರಬೇಕು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಗಡಿನಾಡ ಕನ್ನಡ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಹಣ, ಅಧಿಕಾರದ ಹಿಂದೆ ಬಿದ್ದು ನೈತಿಕತೆಗೆ ಧಕ್ಕೆ ತಂದುಕೊಳ್ಳಬಾರದು. ಪ್ರಾಮಾಣಿಕ ಸೇವೆ, ನಿಷ್ಕಳಂಕ ಜೀವನ ಶೈಲಿ ಮೂಲಕ ಉತ್ತಮ ಹೆಸರು ಗಳಿಸಲು ಪ್ರಯತ್ನಿಸಿ’ ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ‘ಮಾತೃಭಾಷೆ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಸಹಕಾರಿಯಾಗಿದೆ. ಭಾಷೆಯ ಮೇಲೆ ಅಭಿಮಾನ ಹೊಂದಿರಬೇಕು’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ‘ಡಿಸೆಂಬರ್ ಒಳಗೆ ಕೇಂದ್ರೀಯ ವೇತನ ಆಯೋಗ ಜಾರಿಯಾಗಲಿದೆ. ನೌಕರರ ಸಂಘ ಎನ್‍ಪಿಎಸ್ ರದ್ದತಿಗೆ ಮುಂದಿನ ಹೋರಾಟ ಕೈಗೊಳ್ಳಲಿದೆ’ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರನ್ನು ಸನ್ಮಾನಿಸಲಾಯಿತು. 19 ಮಂದಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಪಂಚಾಯ್ತಿ ಸಿಇಒ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ ಕುಮಾರ ನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನೌಕರರ ಸಂಘಟನೆಯ ಪದಾಧಿಕಾರಿಗಳಾದ ಬಿ.ಎಚ್.‌ವೆಂಕಟೇಶಯ್ಯ, ಸಿ.ಆರ್.ಶ್ರೀನಿವಾಸ, ಮಲ್ಲಿಕಾರ್ಜುನ ಬಳ್ಳಾರಿ, ಶ್ರೀನಿವಾಸ ತಿಮ್ಮೆಗೌಡ, ಎಸ್.ಬಸವರಾಜು ಇದ್ದರು. ಸುರೇಶ ಶೆಟ್ಟಿ ಸ್ವಾಗತಿಸಿದರು.

ಸೈಕಲ್ ತುಳಿದ ಡಿಸಿ, ಎಸ್ಪಿ:

ಗಡಿನಾಡ ಕನ್ನಡ ಉತ್ಸವದ ಅಂಗವಾಗಿ ನಗರದಿಂದ ಗೋವಾ ಗಡಿಭಾಗದವರೆಗೆ ಸೈಕಲ್ ಜಾಥಾ ನಡೆಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಸೇರಿದಂತೆ ನೂರಾರು ಜನರು ಸೈಕಲ್ ಮೂಲಕ ಅಲ್ಲಿಗೆ ತೆರಳಿದ್ದರು.

ಜಿಲ್ಲಾ ರಂಗಮಂದಿರದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಉರ್ದು ಭಾಷೆಗಳ 27 ಕವಿಗಳು ಕವನ ವಾಚಿಸಿದರು‌. 25 ಕ್ಕೂ ಹೆಚ್ಚು ಜನ‌ ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು‌.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.