ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಗೆ ‘ಶುಭ್ರತೆ’ಯ ನಮನ

ಹಾದಿ–ಬೀದಿ ಸ್ವಚ್ಛಗೊಳಿಸಿ ರಾಷ್ಟ್ರಪಿತನನ್ನು ನೆನೆದ ಸಾರ್ವಜನಿಕರು, ಅಧಿಕಾರಿಗಳು, ವಿದ್ಯಾರ್ಥಿಗಳು
Last Updated 2 ಅಕ್ಟೋಬರ್ 2019, 12:19 IST
ಅಕ್ಷರ ಗಾತ್ರ

ಶಿರಸಿ: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಿರಸಿ ಜೀವಜಲ ಕಾರ್ಯಪಡೆ, ಅರಣ್ಯ ಕಾಲೇಜು, ರೋಟರಿ ಕ್ಲಬ್, ಸ್ಕೌಟ್ಸ್‌ ಮತ್ತು ಗೌಡ್ಸ್ ತಂಡಗಳು, ಭಾರತ ಸೇವಾದಳ, ನಗರಸಭೆ, ಸರ್ಕಾರದ ವಿವಿಧ ಇಲಾಖೆಗಳು, ಸುಭಾಸ್‌ಚಂದ್ರ ಭೋಸ್ ಕಾರ್ಯಪಡೆ, ವಿವಿಧ ಸಂಘ–ಸಂಸ್ಥೆಗಳು, ಸಾರ್ವಜನಿಕರು ನಗರದ ಎಲ್ಲ ಪ್ರಮುಖ ಬೀದಿಗಳು, ಜನನಿಬಿಡ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಬಿಡಕಿಬೈಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಜನನಿಬಿಡ ಪ್ರದೇಶವಾಗಿರುವ ಹಳೇ ಬಸ್‌ ನಿಲ್ದಾಣ ಆವರಣವನ್ನು ಎಲ್ಲರೂ ಸೇರಿ ಸ್ವಚ್ಛಗೊಳಿಸಿದರು. ಇದೇ ವೇಳೆ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಅಂಗೀಕಾರ ಅಭಿಯಾನಕ್ಕೆ ಸಹಿ ಸಂಗ್ರಹಿಸಲಾಯಿತು.

ತೋಟಗಾರಿಕಾ ಕಾಲೇಜಿನಲ್ಲಿ ಡೀನ್ ಡಾ.ಎನ್.ಕೆ.ಹೆಗಡೆ ಅವರು ಗಾಂಧೀಜಿ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಹಾತ್ಮ ಗಾಂಧಿಜೀಯವರ ಪಂಚ ತತ್ವಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಹಿಂಸೆ, ಶಾಂತಿ-ಸಹಕಾರದಿಂದ ಎಲ್ಲರ ಮನಸ್ಸು ಗೆದ್ದು, ಸ್ನೇಹಮನೋಭಾವದಿಂದ ಇರಬೇಕು ಎಂದು ಕರೆ ನೀಡಿದರು.

ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಎ.ಕೆ.ಕಿಣಿ, ಪ್ರಾಧ್ಯಾಪಕರು, ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಲ್ಲೂಕಿನ ಯಡಳ್ಳಿಯಲ್ಲಿ ಊರವರು, ಶಾಲಾ ಮಕ್ಕಳು ಸೇರಿ ರಸ್ತೆ ಬದಿಯನ್ನು ಸ್ವಚ್ಛಗೊಳಿಸುವ ಜತೆಗೆ, ರಸ್ತೆ ಹೊಂಡ ತುಂಬಿ ಮಾದರಿ ಕಾರ್ಯ ಮಾಡಿದರು.

ಹನುಮಾನ್ ಶಕ್ತಿ ಕೇಂದ್ರ, ರಾಘವೇಂದ್ರ ಸರ್ಕಲ್ ಗೆಳೆಯರ ಬಳಗ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಲಾಲ್‌ ಬಹಾದ್ದೂರ್ ಶಾಸ್ತ್ರಿ ಜನ್ಮದಿನವನ್ನು ಆಚರಿಸಲಾಯಿತು. ರಾಘವೇಂದ್ರ ಸರ್ಕಲ್ ಬಳಿ ಸ್ವಚ್ಛತೆ ನಡೆಸಿದ ಸಂಘಟನೆ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಪ್ರಮುಖರಾದ ಶಕ್ತಿ ಕೇಂದ್ರದ ಅಧ್ಯಕ್ಷ ವಿಜು ಭಟ್ಟ, ಪ್ರಮುಖರಾದ ರಾಜೇಶ ಶೆಟ್ಟಿ, ದೀಪಾ ಮಹಾಲಿಂಗಣ್ಣವರ್, ಚಂದ್ರಕಾಂತ ಶಿರ್ಸಿಕರ್, ಮೋಹನ ತಲಾಸಿ, ಸಂಜಯ ಸಜ್ಜನ್, ಉದಯ ಮಹಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT