ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಹೆಸರಿನಲ್ಲಿ ಕೆಲವರಿಂದ ಹುಸಿ ವಾದ’

‘ಮನದಲ್ಲಿ ಬಾಪು: ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ ಸಂಸದ ಅನಂತಕುಮಾರ ಹೆಗಡೆ
Last Updated 16 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಕಾರವಾರ: ‘ಗಾಂಧೀಜಿ ತೀರಿಕೊಂಡ ಬಳಿಕ ಹುಸಿ ಗಾಂಧಿ ವಾದ ಶುರುವಾಯಿತು. ಅದನ್ನೇ ಕೆಲವರು ಜನರಿಗೆ ನಂಬಿಸುತ್ತ ಬಂದರು. ಮಹಾತ್ಮರ ನಿಜವಾದ ಆದರ್ಶಗಳನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುವ ಕೆಲಸ ಈಗ ನಡೆಯುತ್ತಿದೆ’ ಎಂದು ಸಂಸದ ಅನಂತಕುಮಾರ ಹೆಗಡೆಹೇಳಿದರು.

1934ರ ಫೆ.27ರಂದು ಗಾಂಧೀಜಿ ಭೇಟಿ ನೀಡಿದ್ದ ನಗರದ ಕೆ.ಆರ್.ಹಳದೀಪುರಕರ್ ಮನೆಯಲ್ಲಿಬುಧವಾರ ಬಿಜೆಪಿ ಹಮ್ಮಿಕೊಂಡ ‘ಮನದಲ್ಲಿ ಬಾಪು: ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ, ಸ್ವಚ್ಛತೆ, ಸ್ವರಾಜ್ಯ ಮತ್ತು ಸಮಾನತೆ... ಇವು ಗಾಂಧೀಜಿ ಅವರ ಆದರ್ಶಗಳು. ಅವರು ರಾಮರಾಜ್ಯದ ಕನಸು ಕಂಡಿದ್ದರು. ಮಧ್ಯರಾತ್ರಿಯಲ್ಲೂ ಮಹಿಳೆ ನಿರ್ಭೀತಿಯಿಂದ ನಡೆದುಕೊಂಡು ಹೋಗುವಂಥ ವಾತಾವರಣ ಮೂಡಬೇಕು ಎಂಬುದು ಅವರ ಆಶಯವಾಗಿತ್ತು’ ಎಂದರು.

‘ಸೋಗಲಾಡಿ ಆರ್ಥಿಕ ತಜ್ಞರು’:‘ದೇಶದಲ್ಲಿ ಸೋಗಲಾಡಿ ಆರ್ಥಿಕ ತಜ್ಞರಿಂದ ಕೆಲವು ದಿನಗಳಿಂದ ಜಿಜ್ಞಾಸೆ ಶುರುವಾಗಿದೆ. ಅವರೆಲ್ಲ ‘ಸೋ ಕಾಲ್ಡ್’ ವಿಚಾರವಾದಿಗಳು. ಈ ದೇಶಕ್ಕೆ ಮಣ್ಣಿನ ಕಂಪಿನ ಆಧಾರದಲ್ಲಿ ಹೊಸ ನೆಲೆಗಟ್ಟಿನ ಆರ್ಥಿಕತೆಯನ್ನು ನಮ್ಮ ಸಂಘಟನೆ ಕೊಟ್ಟಿದೆ.ಈ ಪಕ್ಷಕ್ಕೆ ದೇಶದ ಬಗ್ಗೆ ಸ್ಪಷ್ಟವಾದ ಕಲ್ಪನೆಯಿದೆ. ರಾಜಕೀಯಕ್ಕೆ ಬರಬೇಕು ಎಂಬ ಒಂದೇ ಕಾರಣಕ್ಕೆ ಈ ಪಕ್ಷವನ್ನು ಕಟ್ಟಿಲ್ಲ’ ಎಂದು ಅನಂತಕುಮಾರ ಹೆಗಡೆ ಹೇಳಿದರು. ಈ ಮೂಲಕ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಎಂದು ಆರೋಪ ಮಾಡುತ್ತಿರುವವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಪಕ್ಷದ ಮುಖಂಡ ನಾಗರಾಜ ನಾಯಕ ಮಾತನಾಡಿ, ‘ಹಿಂದುಳಿದವರ ಉದ್ಧಾರವನ್ನೇ ಉದ್ದೇಶವಾಗಿಟ್ಟುಕೊಂಡು ಮಹಾತ್ಮ ಗಾಂಧಿ ನಮ್ಮ ಜಿಲ್ಲೆಯಲ್ಲೂ ಸಂಚರಿಸಿದ್ದರು. ಅವರು ಭೇಟಿ ನೀಡಿದ ಬಳಿಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು. 1934ರ ಫೆ.28ರಂದು ಬೆಳಿಗ್ಗೆ 4.30ಕ್ಕೆ ಹಳದೀಪುರಕರ ಅವರ ಮನೆಯ ಎದುರು ಗಾಂಧೀಜಿ ಸುಮಾರು 200 ಜನರೊಂದಿಗೆ ಭಜನೆ ಶುರು ಮಾಡಿದ್ದರು. ಈಗಿನ ಹಿಂದೂ ಹೈಸ್ಕೂಲ್‌ ಸಮೀಪದಲ್ಲಿದ್ದ ಮೈದಾನದಲ್ಲಿ ಅಂದು ಸುಮಾರು 2,000 ಜನರಿದ್ದ ಸಾರ್ವಜನಿಕ ಸಭೆ ನಡೆಸಿದ್ದರು. ಆಗ ಅವರ ಉದ್ದೇಶ ಈಡೇರಿಕೆಗಾಗಿ₹ 560 ಸಂಗ್ರಹಿಸಿ ನೀಡಲಾಗಿತ್ತು’ ಎಂದು ತಿಳಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಗೋಪೂಜೆ ಮಾಡಲಾಯಿತು. ಅಲ್ಲದೇ ಗಿಡವೊಂದನ್ನು ನೆಡಲಾಯಿತು. ವೇದಿಕೆ ಕಾರ್ಯಕ್ರಮದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಗಾಂಧಿ ಸಂಕಲ್ಪ ಯಾತ್ರೆಯ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ವಿನೋದ ಪ್ರಭು, ಎನ್.ಎಸ್.ಹೆಗಡೆ, ವೆಂಕಟೇಶ ನಾಯ್ಕ, ಜಿ.ಜಿ.ಹೆಗಡೆ, ನಾಗರಾಜ ನಾಯ್ಕ ಗುನಗಿ, ಮನೋಜ ಭಟ್, ಎಂ.ಜಿ.ನಾಯ್ಕ, ಶೈಲೇಶ್ ಹಳದೀಪುರಕರ್ ಮತ್ತು ಅನಿರುದ್ಧ ಹಳದೀಪುರಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT