ಅಂಕೋಲಾ: ಇಲ್ಲಿ ಗಾಂಧೀಜಿಗೆ ನಿತ್ಯವೂ ಪೂಜೆ!

7

ಅಂಕೋಲಾ: ಇಲ್ಲಿ ಗಾಂಧೀಜಿಗೆ ನಿತ್ಯವೂ ಪೂಜೆ!

Published:
Updated:
Deccan Herald

ಅಂಕೋಲಾ: ಗಾಂಧೀಜಿಯನ್ನು ವರ್ಷ ಪೂರ್ತಿ ಸ್ಮರಿಸುವ ಕುಟುಂಬವೊಂದು ಪಟ್ಟಣದಲ್ಲಿದೆ. ಲಕ್ಷ್ಮೇಶ್ವರದ ಲಿಂಗು ಆಗೇರ ಹಾಗೂ ಥಾಕು ಆಗೇರ ಸಹೋದರರ ಮನೆಯಲ್ಲಿ ಮಹಾತ್ಮ ಗಾಂಧೀಜಿಗೆ ನಿತ್ಯವೂ ಪೂಜೆ ನೆರವೇರಿಸಲಾಗುತ್ತಿದೆ.

‘ಕರ್ನಾಟಕದ ಬಾರ್ಡೋಲಿ’ ಎಂದೇ ಪ್ರಸಿದ್ಧವಾಗಿರುವ ಅಂಕೋಲಾಕ್ಕೆ ಗಾಂಧೀಜಿ 1942ರಲ್ಲಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರ ತ್ಯಾಗ ಮತ್ತು ಆದರ್ಶ ಗುಣಗಳಿಂದ ಸಾವಿರಾರು ಜನ ಪ್ರೇರಣೆಗೊಂಡಿದ್ದರು. ಅವರನ್ನು ಬೆಂಬಲಿಸಿ ಸತ್ಯಾಗ್ರಹದಲ್ಲಿ ತೊಡಗಿದ್ದರು. 

ಆರತಿ ಪೂಜೆ: ಆಗೇರ ಸಹೋದರರು ತಮ್ಮ ಮನೆಯ ಮುಂದೆ ಗಾಂಧೀಜಿಗೆ ಕಟ್ಟೆ ನಿರ್ಮಿಸಿ, ಉಬ್ಬು ಶಿಲ್ಪದ ಪ್ರತಿಮೆ ಸ್ಥಾಪಿಸಿದ್ದಾರೆ. ತಮ್ಮ ಮನೆ ದೇವರ ಜತೆಗೆ ಗಾಂಧೀಜಿಗೂ ಪೂಜೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಗಂಧದ ಕಡ್ಡಿ ಹಚ್ಚಿ, ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ.

ಈ ಕುಟುಂಬದ ಬಲಿಯಾ ಮಾಧು ಆಗೇರ 1931ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಅವರೇ ಸ್ವತಃ ಬಳಪದ ಕಲ್ಲಿನಲ್ಲಿ ಈ ಶಿಲ್ಪ ನಿರ್ಮಿಸಿದ್ದರಂತೆ. 1957ರಲ್ಲಿ ತಮ್ಮ ಮನೆಯ ಅಂಗಳದಲ್ಲಿ ಕಟ್ಟೆ ನಿರ್ಮಿಸಿ ಗಾಂಧೀಜಿಗೂ ದೇವರ ಸ್ಥಾನ ನೀಡಿದ್ದರು. ಈಗ ಅವರ ಮಕ್ಕಳು, ಮೊಮ್ಮಕ್ಕಳು ನಿತ್ಯ ಪೂಜೆ ಮುಂದುವರಿಸಿಕೊಂಡು ಬಂದಿದ್ದಾರೆ.

ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಸವಲತ್ತುಗಳನ್ನು ಬಲಿಯಾ ಆಗೇರರಿಗೆ ನೀಡಲು ಮುಂದಾಗಿತ್ತು. ಆದರೆ, ಅದ್ಯಾವುದನ್ನೂ ‍ಪಡೆಯಲು ನಿರಾಕರಿಸಿದರಂತೆ. ಕಟ್ಟಾ ಗಾಂಧಿವಾದಿಯಾಗಿದ್ದ ಅವರು 1981ರಲ್ಲಿ ನಿಧನರಾದರು. ಅವರ ಕುಟುಂಬ ಸದಸ್ಯರು ಈಗ ‍ಪೂಜೆ ಮುಂದುವರಿಸಿದ್ದು, ಗಾಂಧಿ ಜಯಂತಿಯಂದು ಎಲ್ಲರೂ ಮನೆಯ ಹಬ್ಬದಂತೆ ಪಾಲ್ಗೊಳ್ಳುತ್ತಾರೆ.

ಬಾಸಗೋಡಿನಲ್ಲಿದೆ ಗಾಂಧಿ ದೇಗುಲ!: ಸಮೀಪದ ಬಾಸಗೋಡಿನಲ್ಲಿ ಮಹಾತ್ಮ ಗಾಂಧಿ ಅವರ ದೇವಸ್ಥಾನ ನಿರ್ಮಿಸಿ ಪೂಜಿಸಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರ ರಾಮಾ ವೆಂಕಣ್ಣ ನಾಯಕ ಅವರ ಮುಂದಾಳತ್ವದಲ್ಲಿ 1951ರಲ್ಲಿ ಮಾಣಿ ಬೊಮ್ಮಯ್ಯ ನಾಯಕ, ರಾಮಕೃಷ್ಣ ನಾಯಕ, ಬೊಮ್ಮಯ್ಯ ಗಾಂವಕರ, ಆಯಾ ಮನೆ ಪೋಕ್ಕ ಗೌಡ ಹಾಗೂ ಊರ ನಾಗರಿಕರು ಇದನ್ನು ನಿರ್ಮಿಸಿದರು. ಇಲ್ಲಿ ಗಾಂಧೀಜಿಯ ಕಲ್ಲಿನ ಮೂರ್ತಿಯಿದೆ. ಇಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ಶಾಲಾ ಮಕ್ಕಳು ಬಂದು ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !