ಕಾರವಾರ: 84ವರ್ಷಗಳ ಹಿಂದೆ ‘ಬಾಪು’ ವಾಸ್ತವ್ಯ; ಅಚ್ಚಳಿಯದ ಗಾಂಧೀಜಿ ಹೆಜ್ಜೆ ಗುರುತು

7
ವಾಸ್ತವ್ಯ ಹೂಡಿದ್ದ ಮನೆಯೀಗ ವಸ್ತು ಸಂಗ್ರಹಾಲಯ

ಕಾರವಾರ: 84ವರ್ಷಗಳ ಹಿಂದೆ ‘ಬಾಪು’ ವಾಸ್ತವ್ಯ; ಅಚ್ಚಳಿಯದ ಗಾಂಧೀಜಿ ಹೆಜ್ಜೆ ಗುರುತು

Published:
Updated:
Deccan Herald

ಕಾರವಾರ: ಮಹಾತ್ಮ ಗಾಂಧೀಜಿಯ ಹೆಸರು ಕೇಳಿದ ಕೂಡಲೇ ಕರಾವಳಿಯ ಮಣ್ಣು ಪುಳಕಗೊಳ್ಳುತ್ತದೆ. ಎಂಟು ದಶಕಗಳ ಹಿಂದೆ ಅವರು ಇಲ್ಲಿ ಕಾಲಿಟ್ಟ ನೆನಪಿನ ಮಾಲೆ ಬಿಚ್ಚಿಕೊಳ್ಳುತ್ತದೆ. ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು ಎಂದು 120 ವರ್ಷಗಳ ಹಿಂದಿನ ಮನೆ ಇಂದಿಗೂ ಸಾರಿ ಹೇಳುತ್ತಿದೆ.

ಗಾಂಧೀಜಿ 1934ರ ಫೆಬ್ರುವರಿ ಮೂರನೇ ವಾರದಲ್ಲಿ (24 ಅಥವಾ 25ರಂದು) ಕುಂದಾಪುರದಿಂದ ಜಿಲ್ಲೆಗೆ ಭೇಟಿ ನೀಡಿದ್ದರು. ನಂತರ ನಗರದ ಹಳದೀಪುರಕರ್ ಕುಟುಂಬದ ಈ ಮನೆಯಲ್ಲಿ ಉಳಿದುಕೊಂಡಿದ್ದರು. ಬಳಿಕ ಫೆ.27ರಂದು ಈಗಿನ ಗೀತಾಂಜಲಿ ಚಲನಚಿತ್ರ ಮಂದಿರವಿರುವ ಜಾಗದಲ್ಲಿದ್ದ ಬಯಲಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

ಯಾಕಾಗಿ ಭೇಟಿ?: ಅಂದು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸುವುದು, ‘ಹರಿಜನ ನಿಧಿ’ ಸಂಗ್ರಹ ಮಾಡುವುದು ಗಾಂಧೀಜಿಯ ಉದ್ದೇಶವಾಗಿತ್ತು. ಇದಕ್ಕಾಗಿ ಅವರು ದೇಶದಾದ್ಯಂತ ಸಂಚರಿಸುತ್ತಿದ್ದರು. ಇದರ ಭಾಗವಾಗಿ ಕರಾವಳಿಯಲ್ಲೂ ಪ್ರಯಾಣಿಸಿದ್ದರು.

‘ಬಾಪೂ’ ಭೇಟಿಯ ಸವಿನೆನಪನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡ ಕುಟುಂಬದ ಹಿರಿಯ ಸದಸ್ಯ ಎ.ಎನ್.ಹಳದೀಪುರಕರ್, ‘ಗಾಂಧೀಜಿ ನಮ್ಮ ಮನೆಗೆ ಬಂದು ಉಳಿದುಕೊಂಡಿದ್ದರು ಎಂದು ಹಿರಿಯರು ಹೇಳುವಾಗ ರೋಮಾಂಚನವಾಗುತ್ತದೆ. ಅಜ್ಜ ಕೃಷ್ಣರಾವ್ ಹಳದೀಪುರಕರ್ ಗಾಂಧೀಜಿಯನ್ನು ಕರೆದುಕೊಂಡು ಬಂದಿದ್ದರಂತೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರ ಅಣ್ಣ ಸುಬ್ಬರಾವ್ ಅವರನ್ನು ಬ್ರಿಟಿಷರು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಿದ್ದರು. ಅಲ್ಲಿಂದ ನಮ್ಮ ಕುಟುಂಬಕ್ಕೆ ಗಾಂಧೀಜಿ ಜತೆ ಒಡನಾಟ ಶುರುವಾಯಿತು. ಅದೇ ಕಾರಣದಿಂದ ಇಲ್ಲಿಗೂ ಭೇಟಿ ನೀಡಿದರು’ ಎಂದು ಹೆಮ್ಮೆಯಿಂದ ಹೇಳಿದರು.

 

ಅಂದು ಅಂಕೋಲಾಕ್ಕೂ ಭೇಟಿ ನೀಡಿದ್ದ ಗಾಂಧೀಜಿ, ಅಲ್ಲಿ ಸುಕ್ರು ಮಾಸ್ಟರ್ ಎಂಬುವವರು ತೆರೆದಿದ್ದ ಹರಿಜನ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅಲ್ಲಿನ ನೋಂದಣಿ ಪುಸ್ತಕದಲ್ಲಿ ಸಹಿ ಮಾಡಿದ್ದರು. ಇದೇವೇಳೆ, ಅಲ್ಲಿನ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಕೆಲವು ನಿಮಿಷ ಮಾತನಾಡಿದ್ದರು. ಬಳಿಕ ಅದೇ ಜಾಗ ಗಾಂಧಿ ಮೈದಾನವಾಯಿತು. ನಂತರ ಅಲ್ಲಿ ಸ್ಮರಣಾರ್ಥ ಭವನ ನಿರ್ಮಿಸಲಾಯಿತು.

ಬಳಿಕ ಕಾರವಾರಕ್ಕೆ ಬಂದು ಫೆ.28ರಂದು ಹಳದೀಪುರಕರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಸುಸಂದರ್ಭವನ್ನು ಪದೇಪದೇ ನೆನಪು ಮಾಡಿಕೊಳ್ಳುವ ಸಲುವಾಗಿ ಹಾಗೂ ಗಾಂಧೀಜಿ ಅವರ ಗೌರವಾರ್ಥ ಮನೆ, ಅಲ್ಲಿರುವ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬರಲಾಗಿದೆ ಎಂದು ಎ.ಎನ್.ಹಳದೀಪುರಕರ್ ತಿಳಿಸಿದರು.

ಮನೆಯ ಗೋಡೆಗಳಲ್ಲಿ ನೆನಪಿನ ಸಾಲು: ಸುಮಾರು ಒಂದೂಕಾಲು ಶತಮಾನದಷ್ಟು ಹಳೆಯದಾಗಿರುವ ಮನೆಯನ್ನು ಮಾಲೀಕರು ಸಂರಕ್ಷಿಸಿದ್ದಾರೆ. ಮಣ್ಣಿನ ಗೋಡೆ, ಸಾಗವಾನಿಯಂತಹ ಗಟ್ಟಿಮುಟ್ಟಾದ ಮರಗಳಿಂದ ನಿರ್ಮಿಸಲಾದ ವಿಶಾಲ ಚಾವಣಿಗೆ ಮಂಗಳೂರು ಹೆಂಚನ್ನು ಹೊದಿಸಲಾಗಿದೆ.

ಸಾರ್ವಜನಿಕರು ಗಾಂಧೀಜಿಗೆ ಉಡುಗೊರೆಯಾಗಿ ನೀಡುತ್ತಿದ್ದ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುತ್ತಿದ್ದರು. ಆ ಹಣವನ್ನು ಹರಿಜನರ ಅಭಿವೃದ್ಧಿಗೆ ಬಳಸುತ್ತಿದ್ದರು. ಹೀಗಾಗಿ ಹಳದೀಪುರಕರ್ ಅವರೂ ಹರಾಜಿನಲ್ಲಿ ಭಾಗವಹಿಸಿ ಕೆಲವು ವಸ್ತುಗಳನ್ನು ಪಡೆದುಕೊಂಡಿದ್ದರು. ಅವುಗಳಲ್ಲಿ ಬೆಳ್ಳಿಯ ಮಾನಪತ್ರ, ಗಂಧದ ಪೆಟ್ಟಿಗೆಯೂ ಸೇರಿವೆ. ಈಗ ವಸ್ತು ಸಂಗ್ರಹಾಲಯವಾಗಿ ಪರಿವರ್ತನೆಯಾಗಿರುವ ಮನೆಯ ಗೋಡೆಗಳಲ್ಲಿ ಇವುಗಳನ್ನು ಇಡಲಾಗಿದೆ. ಗಾಂಧೀಜಿ ಜತೆ ಅಜ್ಜ, ತಂದೆಯವರು ತೆಗೆಸಿಕೊಂಡ ಫೋಟೊ ಕೂಡ ಗಮನ ಸೆಳೆಯುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !