ಗಣೇಶನಿಗೆ ಪೂರ್ಣಕುಂಭದ ಸ್ವಾಗತ

7

ಗಣೇಶನಿಗೆ ಪೂರ್ಣಕುಂಭದ ಸ್ವಾಗತ

Published:
Updated:
Deccan Herald

ಭಟ್ಕಳ: ತಾಲ್ಲೂಕಿನ ಹನುಮಾನ ನಗರದ ರಜತ ಮಹೋತ್ಸವದ ಗಣೇಶನ ಮೂರ್ತಿಯನ್ನು ಗುರುವಾರ ತೆರೆದ ರಥದಲ್ಲಿ ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು.

ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ 25 ವರ್ಷ ತುಂಬಿದೆ. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಐದು ದಿನ ನಡೆಯಲಿರುವ ರಜತ ಮಹೋತ್ಸವದ ಮೊದಲ ದಿನ ಮಂಗಲಮೂರ್ತಿಯನ್ನು ಸುಮಂಗಲೆಯರು ಪೂರ್ಣಕುಂಭ ಹಿಡಿದು ಸ್ವಾಗತ ಕೋರಿದ್ದು ಮೆರುಗು ತಂದಿತು.

ಗುರುವಾರ ಬೆಳಿಗ್ಗೆ ತಾಲೂಕಿನ ಚೌಥ್ನಿಯ ಗುಡಿಗಾರರ ಮನೆಯಿಂದ ಗಣೇಶನ ಮೂರ್ತಿಯನ್ನು ಅಲಂಕೃತ ರಥದಲ್ಲಿ ತರಲಾಯಿತು. ಪೂರ್ಣಕುಂಭ ಕಲಶ ಹಿಡಿದ ಮಹಿಳೆಯರು ಸುಮಾರು ನಾಲ್ಕು ಕಿ.ಮೀ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಚೆಂಡೆಯ ವಾದನವೂ ಮೆರವಣಿಗೆಗೆ ಕಳೆ ನೀಡಿತು.

ಪುರುಷರು ಬಿಳಿ ಅಂಗಿ, ಬಿಳಿ ಪಂಚೆ, ಕೇಸರಿ ಶಾಲು ತೊಟ್ಟು ಗಮನ ಸೆಳೆದರು. ಮೆರವಣಿಗೆಯಲ್ಲಿ ತಂದ ಗಣೇಶನ ಮೂರ್ತಿಗೆ ಮುತ್ತೈದೆಯರು ಆರತಿ ಎತ್ತಿ ಮಂಟಪಕ್ಕೆ ಬರ ಮಾಡಿಕೊಂಡರು.

ಬಳಿಕ ರಮೇಶ್ ಭಟ್ ನೇತೃತ್ವದಲ್ಲಿ ವಿಘ್ನ ವಿನಾಶಕನಿಗೆ ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಸಾಮೂಹಿಕ ಸಹಸ್ರಮೋದಕ ಹವನ, ಮಹಾಪೂಜೆ ನೆರವೇರಿತು. ಪ್ರಸಾದ ವಿತರಣೆಯ ಬಳಿಕ ಊರಿನವರೇ ಆದ ಭೀಮಯ್ಯ ನಾಯ್ಕ ಹಾಗೂ ಮಕ್ಕಳಿಂದ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಭಾ ಕಾರ್ಯಕ್ರಮ, ಕುಮಟಾದ ದತ್ತಾತ್ರೇಯ ನಾಯ್ಕ ತಂಡದವರಿಂದ ಹರಿಕೀರ್ತನೆ, ರಾತ್ರಿ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಗಮನ ಸೆಳೆದ 'ರಾಮ ಮಂದಿರ': ರಜತ ಮಹೋತ್ಸವದ ಸಂಭ್ರಮದಲ್ಲಿ ಅಯೋಧ್ಯೆಯ ರಾಮ ಮಂದಿರ ಮಾದರಿಯ ಮಂಟಪವು ಎಲ್ಲರ ಗಮನ ಸೆಳೆಯಿತು. ಮಂಟಪದ ಎದುರು ಗಣಪತಿಯ ಮೂರ್ತಿಯನ್ನು ಇಟ್ಟು ಪೂಜಿಸಲಾಯಿತು.

ಕಾರ್ಯಕ್ರಮವನ್ನು ಡ್ರೋನ್ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದಿದ್ದು ವಿಶೇಷವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !