ಶುಕ್ರವಾರ, ಜುಲೈ 30, 2021
20 °C
ಲಾಕ್‌ಡೌನ್‌ನಿಂದ ಆರ್ಥಿಕ ತೊಂದರೆಗೆ ಒಳಗಾದ ಸಂಸ್ಥೆಗಳ ನೆರವಿಗೆ ಯೋಜನೆ

ಸಣ್ಣ ಉದ್ದಿಮೆ ಸಹಾಯಕ್ಕೆ ಜಿ.ಇ.ಸಿ.ಎಲ್

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಕಾರವಾರ: ಲಾಕ್‌ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿದ ಸಣ್ಣ ಉದ್ಯಮಗಳ ನೆರವಿಗೆ ಪ್ರಕಟಿಸಲಾದ, ‘ತುರ್ತು ಹಣಕಾಸು ಖಾತರಿ ಯೋಜನೆ’ಯಡಿ (ಜಿ.ಇ.ಸಿ.ಎಲ್) ಜಿಲ್ಲೆಯಲ್ಲಿ ಈವರೆಗೆ 1,108 ಉದ್ಯಮಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಒಟ್ಟು ₹ 16.10 ಕೋಟಿ ಮೊತ್ತ ಮಂಜೂರಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯಮಗಳನ್ನು ಮುಚ್ಚಲಾಗಿತ್ತು. ಆದರೆ, ನಿರ್ಬಂಧಗಳು ತೆರವಾದ ಬಳಿಕ ಪುನರಾರಂಭಿಸಲು ಹಣಕಾಸು ಕೊರತೆ ಎದುರಾಗಿತ್ತು. ಉದ್ದಿಮೆಗಾಗಿ ಮಾಡಿದ್ದ ಸಾಲದ ಕಂತುಗಳ ಮರುಪಾವತಿಗೂ ಸಣ್ಣ ಉದ್ಯಮಿಗಳ ಪರದಾಡಿದ್ದರು. ಅಂತಹವರ ನೆರವಿಗೆ ಒಟ್ಟು ₹ 3 ಲಕ್ಷ ಕೋಟಿಯನ್ನು ‘ಆತ್ಮ ನಿರ್ಭರ್ ಪ್ಯಾಕೇಜ್’ ಅಡಿ ಕೇಂದ್ರ ಸರ್ಕಾರ ಘೋಷಿಸಿತ್ತು.

‘ಈ ಯೋಜನೆ ಪ್ರಕಾರ ಫೆ.29ರಂದು ಅನ್ವಯವಾಗುವಂತೆ, ಉದ್ಯಮಿಗಳು ಪಾವತಿಸಬೇಕಾದ ಸಾಲದ ಬಾಕಿ ಮೊತ್ತದ ಶೇ 20ರಷ್ಟನ್ನು ಪುನಃ ಸಾಲವನ್ನಾಗಿ ಬ್ಯಾಂಕ್‌ಗಳಿಂದ ನೀಡಲಾಗುತ್ತದೆ. ಉದಾಹರಣೆಗೆ ಒಬ್ಬ ಉದ್ಯಮಿ ₹ 10 ಲಕ್ಷ ಸಾಲ ಪಾವತಿಸಲು ಬಾಕಿಯಿದ್ದರೆ ಅವರಿಗೆ ₹ 2 ಲಕ್ಷ ಸಾಲ ಪಡೆಯಲು ಅರ್ಹತೆ ಇರುತ್ತದೆ. ಇದಕ್ಕೆ ಬ್ಯಾಂಕ್‌ಗಳಲ್ಲಿ ಶೇ 9.25ರ ಗರಿಷ್ಠ ಬಡ್ಡಿಯಲ್ಲಿ  ಹಾಗೂ ಕಿರು ಹಣಕಾಸು ಸಂಸ್ಥೆಗಳಲ್ಲಿ ಗರಿಷ್ಠ 14ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ’ ಎಂದು ಜಿಲ್ಲಾ ಸಹವರ್ತಿ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ.ಪಿಂಜರ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಇದಕ್ಕೆ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟೀ ಕಂಪನಿಯು (ಎನ್.ಸಿ.ಜಿ.ಟಿ.ಸಿ) ಬ್ಯಾಂಕ್‌ಗಳಿಗೆ ಸಂಪೂರ್ಣ ಖಾತರಿಯನ್ನು ನೀಡುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೂ ಇದು ಅನ್ವಯವಾಗುತ್ತದೆ. ಮುದ್ರಾ ಯೋಜನೆಯಡಿ ಸಾಲ ‍ಪಡೆದವರೂ ಇದರ ಪ್ರಯೋಜನ ‍ಪಡೆದುಕೊಳ್ಳಬಹುದು. ಸಾಲದ ಮೊತ್ತ ಗರಿಷ್ಠ ₹ 25 ಕೋಟಿ ಹಾಗೂ 2019–20ನೇ ಸಾಲಿನಲ್ಲಿ ₹ 100 ಕೋಟಿಯ ಒಳಗೆ ವಹಿವಾಟು ಮಾಡಿದ ಉದ್ದಿಮೆಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು. 

‘ಇದಕ್ಕೆ ಯಾವುದೇ ಪರಿಷ್ಕರಣಾ ಶುಲ್ಕ, ಮರುಪಾವತಿ ಶುಲ್ಕು ವಿಧಿಸುವುದಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಮರು ಪಾವತಿ ಮಾಡಬೇಕು. ಸಿಬಿಲ್ ಮತ್ತು ಸಿ.ಎಂ.ಆರ್ ಶ್ರೇಯಾಂಕವೂ ಇದಕ್ಕೆ ಬೇಕಾಗಿಲ್ಲ. ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿರುವ ಉದ್ಯಮಗಳಿಗೆ ಮರು ಚಾಲನೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಹಲವರಿಗೆ ಪ್ರಯೋಜನ’: ‘ಜಿಲ್ಲೆಯಲ್ಲಿ 12,273 ಬ್ಯಾಂಕ್‌ ಖಾತೆಗಳು ಜಿ.ಇ.ಸಿ.ಎಲ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅರ್ಹವಾಗಿವೆ. ಆದರೆ, ಅವುಗಳಲ್ಲಿ ಕೆಲವು ಖಾತೆದಾರರ ಸಾಲದ ಮರು ಪಾವತಿ ಮೊತ್ತ ಕಡಿಮೆ ಇರುವ ಕಾರಣ ಅವರಿಗೆ ಸಿಗಬಹುದಾದ ನೆರವೂ ಕಡಿಮೆಯಿರುತ್ತದೆ. ಅಂಥವರು ಈ ಯೋಜನೆಗೆ ಆಸಕ್ತಿ ತೋರದಿರಬಹುದು. ಆದರೆ, ದೊಡ್ಡ ಮೊತ್ತದ ಸಾಲ ಮರುಪಾವತಿ ಇರುವ ಸಣ್ಣ ಉದ್ಯಮಿಗಳಿಗೆ ಇದರಿಂದ ಪ್ರಯೋಜನವಾಗಲಿದೆ’ ಎಂದು ಪಿ.ಎಂ.ಪಿಂಜರ್ ತಿಳಿಸಿದರು.

ಜಿಲ್ಲೆಯಲ್ಲಿ ಜಿ.ಇ.ಸಿ.ಎಲ್ ಸ್ಥಿತಿಗತಿ

12,273 ಖಾತೆಗಳು

ಸಾಲ ಪಡೆಯಲು ಅರ್ಹವಾದವು

₹ 223.35 ಕೋಟಿ

ಮರುಪಾವತಿ ಆಗಬೇಕಿರುವ ಮೊತ್ತ

1,108 ಖಾತೆಗಳು

ಜಿ.ಇ.ಸಿ.ಎಲ್ ಅಡಿ ಸಾಲ ಪಡೆದವು

₹ 16.10 ಕೋಟಿ

ಜಿ.ಇ.ಸಿ.ಎಲ್ ಅಡಿ ಮಂಜೂರಾದ ಮೊತ್ತ

* ಜೂನ್ 20ರವರೆಗಿನ ಅಂಕಿ ಅಂಶಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು