ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿ ಮೇಲೆ ಕೋವಿಡ್ -19 ಕರಿನೆರಳು, ಏಕಾಏಕಿ ದರ ಕುಸಿತ ಕಂಡ ಬೆಳೆ

Last Updated 19 ಮಾರ್ಚ್ 2020, 4:35 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಪೂರ್ವ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶುಂಠಿಯ ಮೇಲೆ ಕೊರೊನಾ ವೈರಸ್‌ನ ಕರಿನೆರಳು ಬಿದ್ದಿದೆ. ರೈತರು ನೆಲದಿಂದ ಬೆಳೆ ತೆಗೆದು, ಅಂಗಳದಲ್ಲಿ ರಾಶಿ ಹಾಕಿ ಮಾರಾಟಕ್ಕೆ ಅಣಿಯಾಗುವಷ್ಟರಲ್ಲಿ ಮಾರುಕಟ್ಟೆ ದರ ಕುಸಿದಿದೆ.

ರೈತರ ಆರ್ಥಿಕ ಸಬಲತೆಗೆ ಬೆನ್ನೆಲುಬಾಗಿರುವ ಇಲ್ಲಿನ ಶುಂಠಿ, ಮುಂಬೈ, ಚೆನ್ಹೈ, ಹೈದ್ರಾಬಾದ್ ಮಾರುಕಟ್ಟೆಗಳಿಗೆ ಹೋಗುತ್ತದೆ. ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಅರ್ಧದಷ್ಟು ಬೆಳೆ ಕೊಳೆರೋಗಕ್ಕೆ ತುತ್ತಾದರೂ, ಇನ್ನರ್ಧ ಬೆಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಕ್ವಿಂಟಲ್‌ವೊಂದಕ್ಕೆ ₹ 5100ರಷ್ಟಿದ್ದ ದರ, ಒಂದು ವಾರದಲ್ಲಿ ₹ 3500ರಿಂದ ₹ 4000ಕ್ಕೆ ಇಳಿಕೆಯಾಗಿದೆ.

ತಾಲ್ಲೂಕಿನಲ್ಲಿ ಸುಮಾರು 135 ಎಕರೆ ಶುಂಠಿ ಬೆಳೆಯುವ ಪ್ರದೇಶವಿದೆ. ಇದರಲ್ಲಿ ಹೆಚ್ಚಿನ ಭಾಗ ಇರುವುದು ಬನವಾಸಿ ಹೋಬಳಿಯಲ್ಲಿ. ರೈತರು ಇನ್ನುಳಿದ ಬೆಳೆಗಳ ಜೊತೆಗೆ, ಅರ್ಧ ಎಕರೆ, ಒಂದು ಎಕರೆಯಲ್ಲಿ ಶುಂಠಿ ಬೆಳೆಯುತ್ತಾರೆ. ಕೆಲವರು ಲೀಸ್‌ನ ಮೇಲೆ ಜಮೀನು ಪಡೆದು ಶುಂಠಿ ನಾಟಿ ಮಾಡುತ್ತಾರೆ.

‘ಐದು ಕ್ವಿಂಟಲ್ ಶುಂಠಿ ಬಿತ್ತನೆ ಮಾಡಿದ್ದೆ. ಈಗ 50 ಕ್ವಿಂಟಲ್ ಫಸಲು ಸಿಕ್ಕಿದೆ. ಕೊಳೆರೋಗ ಬರದಿದ್ದರೆ, 100 ಕ್ವಿಂಟಲ್ ಬೆಳೆ ಕೈಗೆ ಸಿಗುತ್ತಿತ್ತು. ಉತ್ತಮ ಬೆಳೆ ಬಂದರೆ, ಒಂದು ಕ್ವಿಂಟಲ್‌ಗೆ ಬೀಜದಿಂದ ಗರಿಷ್ಠ 40 ಕ್ವಿಂಟಲ್‌ ಬೆಳೆ ತೆಗೆಯಬಹುದು. ಶುಂಠಿ ಬೆಳೆ ವೆಚ್ಚದಾಯಕ. ಎಕರೆಗೆ ಕನಿಷ್ಠ ₹ 2ಲಕ್ಷ ಖರ್ಚು ಮಾಡಬೇಕು. ಆಗಾಗ ರಾಸಾಯನಿಕ ಸಿಂಪಡಿಸಬೇಕು. ಹೀಗಾಗಿ, ಬೆಲೆ ಬಂದರಷ್ಟೇ ಈ ಬೆಳೆ ಲಾಭ’ ಎನ್ನುತ್ತಾರೆ ಬೆಳೆಗಾರ ರಾಮಚಂದ್ರ ಆರ್ಯರ್.

’ದರ ಕುಸಿತವಾದಾಗ ಬೀಜ ತಯಾರಿಸಿಟ್ಟರೆ ಶುಂಠಿ ಲಾಭವಾಗುತ್ತದೆ. ಆದರೆ, ಕೊಳೆರೋಗವಿಲ್ಲದ, ಹಳೆಯ ಬೀಜ ಮಾತ್ರ ನಾಟಿಗೆ ಬರುತ್ತದೆ. ಈಗಾಗಲೇ ರೈತರು ಗದ್ದೆಯಲ್ಲಿರುವ ಶುಂಠಿ ಕಿತ್ತು, ಅಂಗಳದಲ್ಲಿ ರಾಶಿ ಹಾಕಿದ್ದಾರೆ. ಮಾರ್ಚ್ ಕೊನೆಯ ವೇಳೆಗೆ ಮತ್ತೆ ನಾಟಿ ಆರಂಭವಾಗುತ್ತದೆ. ಅಷ್ಟರೊಳಗೆ ಬೆಳೆದಿರುವ ಉತ್ಪನ್ನ ಮಾರಾಟವಾಗಿ, ರೈತರ ಬಳಿ ಹಣ ಇರಬೇಕು’ ಎಂದು ಅವರು ಹೇಳಿದರು.

‘ಶುಂಠಿ ಎಂಟು ತಿಂಗಳ ಬೆಳೆ. ಮಾರುಕಟ್ಟೆಯ ದರ ನೋಡಿ, ರೈತರು ನೆಲದಿಂದ ಬೆಳೆ ತೆಗೆಯುತ್ತಾರೆ. ಈ ಬಾರಿ ಬೆಳೆ ತೆಗೆದ ಮೇಲೆ ದರ ಕುಸಿದಿದೆ. ಹೊಸ ಮಣ್ಣಿನಲ್ಲಿ ಒಳ್ಳೆಯ ಬೆಳೆ ಬರುತ್ತದೆ. ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಮುಂಡಗೋಡನ ರೈತರೊಬ್ಬರು ಎಕರೆಗೆ 450 ಚೀಲ ಬೆಳೆ ತೆಗೆದಿದ್ದಾರೆ’ ಎಂದು ವಿಜ್ಞಾನಿ ಡಾ.ಶಿವಶೆಂಕರಮೂರ್ತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT