ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಿಂದ ಕೆಟ್ಟಿದೆ ಮೆಟಲ್ ಡಿಟೆಕ್ಟರ್!

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೇಜ್‌ರಾಜ್ ಅಷ್ಟು ಸಲೀಸಾಗಿ ಕಚೇರಿಯೊಳಗೆ ಚಾಕು ತೆಗೆದುಕೊಂಡು ಹೋಗಿ ಲೋಕಾಯುಕ್ತರಿಗೆ ಚುಚ್ಚಿ ಬಂದಿರುವುದು ಅಲ್ಲಿನ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ.

ಕಚೇರಿಯ ಪ್ರವೇಶ ದ್ವಾರದಲ್ಲೇ ಮೆಟಲ್ ಡಿಟೆಕ್ಟರ್ (ಲೋಹ ಶೋಧಕ) ಬಾಗಿಲು ಇದೆಯಾದರೂ, ಅದು ಕೆಟ್ಟು ಒಂಬತ್ತು ತಿಂಗಳುಗಳೇ ಕಳೆದು ಹೋಗಿವೆ. ಕಚೇರಿಗೆ ಬರುವ ಪ್ರತಿಯೊಬ್ಬರನ್ನೂ ‘ಹ್ಯಾಂಡ್ ಮೆಟಲ್ ಡಿಟೆಕ್ಟರ್’ನಿಂದ ಪರಿಶೀಲನೆ ನಡೆಸಿಯೇ ಒಳಗೆ ಬಿಡಬೇಕು ಎಂದು ಹಿಂದಿನ ಲೋಕಾಯುಕ್ತರು ಹೇಳಿದ್ದರೂ, ಆ ನಿಯಮವೂ ಪಾಲನೆಯಾಗುತ್ತಿಲ್ಲ.

‘ಒಂದು ವೇಳೆ ಮೆಟಲ್ ಡಿಟೆಕ್ಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಆರೋಪಿ ಚಾಕು ತೆಗೆದುಕೊಂಡು ಬಂದಿರುವುದು ಗೊತ್ತಾಗುತ್ತಿತ್ತು. ಪ್ರವೇಶದ್ವಾರದಲ್ಲೇ ಆತನನ್ನು ತಡೆದು, ಅನಾಹುತನನ್ನು ತಪ್ಪಿಸಬಹುದಿತ್ತು’ ಎಂಬ ಮಾತುಗಳು ಲೋಕಾಯುಕ್ತ ಸಂಸ್ಥೆಯ ನೌಕರರ ವಲಯದಿಂದ ಕೇಳಿಬಂದಿವೆ.

'ಸಂಶಯದಿಂದ ನೋಡುವುದು ಸರಿಯಲ್ಲ': ‘ಜನ ತಮ್ಮ ದೂರುಗಳನ್ನು ಹೊತ್ತು ಕಚೇರಿಗೆ ಬರುತ್ತಾರೆ. ಅವರನ್ನು ಸಂಶಯದಿಂದ ನೋಡುವುದು ಸರಿ
ಯಲ್ಲ. ಆದರೆ, ಈಗ ದುರಂತ ಸಂಭವಿಸಿರುವುದರಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು’ ಎಂದು ಉಪ ಲೋಕಾಯುಕ್ತ ಎನ್‌.ಆನಂದ ಹೇಳಿದರು.

‘ಭದ್ರತಾ ವೈಫಲ್ಯದ ತನಿಖೆಯಾಗಲಿ’
ಬೆಂಗಳೂರು:
ಲೋಕಾಯುಕ್ತ ನ್ಯಾಯಮೂರ್ತಿ ಕಚೇರಿಯಲ್ಲಿ ಆಗಿರುವ ಭದ್ರತಾ ವೈಫಲ್ಯದ ಬಗ್ಗೆ ತನಿಖೆಯಾಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಒತ್ತಾಯಿಸಿದರು.

ವಿಶ್ವನಾಥ ಶೆಟ್ಟಿ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ಇದು ಖಂಡನೀಯ. ಆದರೆ, ಅವರ ಆಪ್ತ ಸಹಾಯಕರು ಮತ್ತು ಗನ್‌ಮ್ಯಾನ್‌ಗಳು ಎಲ್ಲಿಗೆ ಹೋಗಿದ್ದರು? ಆ ವ್ಯಕ್ತಿಗೆ ಲೋಕಾಯುಕ್ತರ ಕೊಠಡಿ ಪ್ರವೇಶಿಸಲು ಏಕೆ ಅವಕಾಶ ನೀಡಿದರೆನ್ನುವುದು ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಇದೊಂದು ಘಟನೆಯಿಂದ ರಾಷ್ಟ್ರಪತಿ ಆಡಳಿತ ಬರಬೇಕೆಂದು ಕೆಲವು ಪಕ್ಷಗಳು ಒತ್ತಾಯಿಸುತ್ತಿರುವುದು ರಾಜಕೀಯ ವಿಚಾರವಾಯಿತು. ಲೋಕಾಯುಕ್ತರು ಸಾರ್ವಜನಿಕರ ಭೇಟಿಗೆ ಮುಕ್ತವಾಗಿರುವವರು. ಆದರೆ, ಇಂಥ ಘಟನೆಗಳಾದರೆ ಲೋಕಾಯುಕ್ತರಿಗೂ ರಕ್ಷಣೆ ಬೇಕಾಗುತ್ತದೆ' ಎಂದರು.

‘ಸರ್ಕಾರ ನಿರ್ಲಕ್ಷ್ಯ’: ‘‌ಲೋಕಾಯುಕ್ತ ಕಚೇರಿಯ ಭದ್ರತಾ ವೈಫಲ್ಯದ ಬಗ್ಗೆ ಗುಪ್ತ ದಳವು ಸರ್ಕಾರಕ್ಕೆ ವರದಿ ನೀಡಿದೆ. ಆದರೂ ಸರ್ಕಾರ ಭದ್ರತಾ ವ್ಯವಸ್ಥೆ ಕಲ್ಪಿಸಲು ನಿರ್ಲಕ್ಷ್ಯ ಮಾಡಿದೆ’ ಎಂದು ನಿವೃತ್ತ ಉಪ ಲೋಕಾಯುಕ್ತ ಸುಭಾಷ್‌ ಬಿ.ಅಡಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT