ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಳಿ ಸೊಸೈಟಿ ಶತಮಾನೋತ್ಸವ: ಸಹಕಾರ ಕಾನೂನು ತಿದ್ದುಪಡಿಗೆ ಯತ್ನ

Last Updated 22 ಫೆಬ್ರುವರಿ 2020, 13:15 IST
ಅಕ್ಷರ ಗಾತ್ರ

ಶಿರಸಿ: ಸಹಕಾರ ಕ್ಷೇತ್ರದಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆ ಸಚಿವರ ಜತೆ ಚರ್ಚಿಸಿ, ಸಹಕಾರ ಕಾನೂನಿಗೆ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಶನಿವಾರ ಆಯೋಜಿಸಿದ್ದ ತಾಲ್ಲೂಕಿನ ಗೋಳಿಯ ಹಾರೂಗಾರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಹಕಾರ ಕ್ಷೇತ್ರದಿಂದ ರೈತರ ಬದುಕು ಸುಭದ್ರವಾಗಿದೆ. ಸರ್ಕಾರಕ್ಕೆ ಪರ್ಯಾಯವಾಗಿರುವ ಸಹಕಾರ ಕ್ಷೇತ್ರ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಸಹಕಾರ ಕಾನೂನಿನಲ್ಲಿ ಕೆಲವು ದೋಷಗಳಿವೆ. ಇದನ್ನು ಬದಲಾಯಿಸುವ ಬಗ್ಗೆ ಯೋಚಿಸಲಾಗುವುದು ಎಂದರು.

ಶತಮಾನೋತ್ಸವ ಕಾರ್ಯಕ್ರಮವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಶತಮಾನಗಳ ಹಿಂದಿನ ಹಿರಿಯ ಸಹಕಾರಿಗಳ ದೂರದೃಷ್ಟಿಯ ಫಲವಾಗಿ ಸಹಕಾರಿ ಕ್ಷೇತ್ರ ಇಂದಿಗೂ ಬಲಾಢ್ಯವಾಗಿದೆ. ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಜತೆ ಸದಸ್ಯರು, ಸಿಬ್ಬಂದಿಗೆ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ಸಂಘದ ಜತೆ ಸದಸ್ಯರೂ ಸಬಲರಾಗುತ್ತಿದ್ದಾರೆ ಎಂದರು.

ಕೃಷಿ ಸವಾಲು ಎದುರಿಸುವ ಕಾರ್ಯ ಸಹಕಾರ ಸಂಘಗಳಿಂದ ಆಗಬೇಕು. ಬಹುಬೆಳೆ ಬೆಳೆಯಲು ರೈತರಲ್ಲಿ ಅರಿವು ಮೂಡಿಸಬೇಕು. ಕೃಷಿಯಲ್ಲಿ ಹೆಚ್ಚಿನ ಯಾಂತ್ರೀಕರಣಕ್ಕೆ ಅವಕಾಶ ನೀಡಬೇಕು. ಸಂಘದ ಕಾರ್ಯಚಟುವಟಿಕೆಗಳಲ್ಲಿ ಸ್ವಸಹಾಯ ಸಂಘಗಳು, ಮಹಿಳಾ ಸಂಘಗಳನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಮಾಜಿ ನಿರ್ದೇಶಕರು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಹೆಗಡೆ ತಾರೇಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ನೆಗ್ಗು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಹೆಗಡೆ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ, ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಸಹಕಾರಿ ನಿಬಂಧಕಿ ಸುಜಾತಾ ಬಂಟ, ಸಮಿತಿ ಉಪಾಧ್ಯಕ್ಷ ಎಂ.ಆರ್.ಹೆಗಡೆ ಪಟ್ಟಿಗುಂಡಿ, ಗೌರವ ಕಾರ್ಯದರ್ಶಿ ಜಿ.ಆರ್.ಭಟ್ಟ ಟೊಣ್ಣೇಮನೆ, ಸಂಘದ ಉಪಾಧ್ಯಕ್ಷ ಕೇಶವ ಹೆಗಡೆ ಅಮ್ಮಚ್ಚಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಣೇಶ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT