ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಲ್ಲಿ ಮತ್ತೆ ಏಲಕ್ಕಿ ಕಂಪು

ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆ: ಸಾವಯವ ನಂಟು ಬಿಡಲೊಪ್ಪದ ದತ್ತಾತ್ರೇಯ
Last Updated 11 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಸಾಂಬಾರು ಪದಾರ್ಥಗಳಲ್ಲಿ ದುಬಾರಿ ಎನಿಸಿರುವ ‘ಏಲಕ್ಕಿ’ ಬೆಳೆ ಪ್ರದೇಶ ನಾನಾ ಕಾರಣಗಳಿಂದ ಕೆಲವು ವರ್ಷಗಳಿಂದ ಕುಸಿತ ಕಾಣುತ್ತಿದೆ. ಈಚೆಗೆ ಕೆಲವು ರೈತರು ಏಲಕ್ಕಿ ಬೆಳೆಯಲು ಆಸಕ್ತಿಯಿಂದ ಮುಂದಾಗಿದ್ದು, ತಾಲ್ಲೂಕಿನ ಮಾವಿನಕೊಪ್ಪದ ದತ್ತಾತ್ರೇಯ ಸೋಮೇಶ್ವರ ಹೆಗಡೆ ಅವರಲ್ಲಿ ಒಬ್ಬರಾಗಿದ್ದಾರೆ.

ಅಡಿಕೆ ತೋಟದಲ್ಲಿ ಅಲ್ಲಲ್ಲಿ ಪಾರಂಪರಿಕವಾಗಿ ಏಲಕ್ಕಿ ಬೆಳೆಯುತ್ತಿದ್ದ ಇವರು ಕಳೆದ ನಾಲ್ಕು ವರ್ಷಗಳಿಂದ ನಾಲ್ಕು ಎಕರೆಯಷ್ಟು ಭೂಮಿಯಲ್ಲಿ ನಾಲ್ಕು ಸಾವಿರ ಏಲಕ್ಕಿ ಗಿಡ ಬೆಳೆಸಿದ್ದಾರೆ. ಮನೆ ಸಮೀಪದಲ್ಲಿರುವ ಬೇಣದಲ್ಲೂ ಏಲಕ್ಕಿ ಗಿಡ ಬೆಳೆಸುವ ಮೂಲಕ ಹೊಸತನದ ಕೃಷಿಗೆ ನಾಂದಿ ಹಾಡಿದ್ದಾರೆ.

ಏಲಕ್ಕಿ ಬೆಳೆಗೆ ಕೊಳೆರೋಗ, ಸೊರಗು ರೋಗ ಬಾಧಿಸುವ ಸಮಸ್ಯೆ ಇರುವೆ ನಡುವೆಯೂ ಸಾವಯವ ಪದ್ಧತಿಗೆ ಒತ್ತು ನೀಡುತ್ತಿರುವುದು ದತ್ತಾತ್ರೇಯ ಅವರ ವಿಶೇಷ. ವಾರ್ಷಿಕ ಸರಾಸರಿ 1 ಕ್ವಿಂಟಲ್‍ನಷ್ಟು ಒಣ ಏಲಕ್ಕಿ ಉತ್ಪಾದಿಸುತ್ತಿದ್ದಾರೆ.

‘ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಏಲಕ್ಕಿ ಬೆಳೆಯುವ ಪದ್ಧತಿ ಹಿಂದಿನಿಂದಲೂ ಇತ್ತು. ಕೆಲವು ದಶಕಗಳ ಕಾಲ ನೀರಿನ ಕೊರತೆಯಿಂದ ಏಲಕ್ಕಿ ಬೆಳೆಯುವುದನ್ನು ಕೈಬಿಟ್ಟಿದ್ದೆವು. ನಾಲ್ಕು ವರ್ಷಗಳ ಹಿಂದೆ ಪುನಃ ಏಲಕ್ಕಿ ಬೆಳೆಯುವ ಆಸಕ್ತಿ ಮೂಡಿದ್ದರಿಂದ ನಾಲ್ಕು ಸಾವಿರ ಸಸಿಗಳನ್ನು ನಾಟಿ ಮಾಡಲಾಯಿತು’ ಎನ್ನುತ್ತಾರೆ ದತ್ತಾತ್ರೇಯ ಹೆಗಡೆ.

‘ಮೊದಲಿನಿಂದಲೂ ಸಾವಯವ ಪದ್ಧತಿಯ ಕೃಷಿ ನಂಬಿಕೊಂಡಿರುವ ನನಗೆ ಏಲಕ್ಕಿಯನ್ನೂ ರಾಸಾಯನಿಕ ಬಳಸದೆ ಬೆಳೆಯುವ ಹಂಬಲವಿತ್ತು. ಮೊದಲ ವರ್ಷ ಸುಮಾರು ಒಂದು ಸಾವಿರ ಗಿಡಗಳು ಪ್ರಾಣಿಗಳ ಹಾವಳಿಗೆ ತುತ್ತಾಗಿದ್ದವು. ನಂತರದ ವರ್ಷದಲ್ಲೂ ಒಂದು ಸಾವಿರದಷ್ಟು ಗಿಡಗಳು ಅತಿಯಾದ ಮಳೆಗೆ ಕೊಳೆರೋಗಕ್ಕೆ ತುತ್ತಾಗಿ ಹಾಳಾದವು. ಆ ನಂತರದಲ್ಲೂ ರೋಗಬಾಧೆಗೆ ಮತ್ತೆ ಸಾವಿರಾರು ಗಿಡ ನಾಶವಾಯಿತು. ಆದರೂ ಸಾವಯವ ಪದ್ಧತಿ ಕೈಬಿಡಲು ಮನಸ್ಸಾಗಲಿಲ್ಲ’ ಎಂದು ಹೇಳಿದರು.

‘ಸದ್ಯ ಒಂದು ಸಾವಿರ ಗಿಡಗಳು ಮಾತ್ರ ಉಳಿದುಕೊಂಡಿವೆ. ಕೆಲವು ಗಿಡಗಳಿಗೆ ಮಾತ್ರ ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ನೀಡುತ್ತಿದ್ದೇನೆ. ಉಳಿದಂತೆ ಪಾರಂಪರಿಕ ದಡ್ಡಿ ಗೊಬ್ಬರ ಮಾತ್ರ ನೀಡಿ ಗಿಡ ಆರೈಕೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚು ಇಳುವರಿ ಸಾಧ್ಯವಾಗದಿದ್ದರೂ ಸಮಾಧಾನಕರ ಪ್ರಮಾಣದ ಬೆಳೆ ಗಳಿಸುತ್ತಿದ್ದೇನೆ’ ಎಂದು ವಿವರಿಸಿದರು.

2 ಸಾವಿರ ಕ್ವಿಂಟಲ್ ಶುಂಠಿ ಸಂಸ್ಕರಣೆ:

ಪ್ರಗತಿಪರ ರೈತರಾಗಿರುವ ದತ್ತಾತ್ರೇಯ ಹೆಗಡೆ ಕೃಷಿ ಚಟುವಟಿಕೆಯ ಜತೆಗೆ ಹಸಿ ಶುಂಠಿ ಖರೀದಿಸಿ ಅದನ್ನು ಸಂಸ್ಕರಣೆ ಮಾಡಿ ಸಾಂಬಾರು ಉತ್ಪನ್ನ ಸಿದ್ಧಪಡಿಸುವ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಸುಮಾರು 2 ಸಾವಿರ ಕ್ವಿಂಟಲ್ ಹಸಿ ಶುಂಠಿಯನ್ನು ಸ್ಥಳಿಯ ರೈತರಿಂದ ಖರೀದಿಸುತ್ತಿದ್ದಾರೆ.

‘ಬೇಸಿಗೆಯಲ್ಲಿ ಕೃಷಿ ಚಟುವಟಿಕೆ ಕಡಿಮೆ ಇರುವ ಕಾರಣ ಹಸಿ ಶುಂಠಿ ಸಂಸ್ಕರಿಸುವ ಕೆಲಸ ಆರಂಭಿಸಿದೆ. ಈಗ ಗರಿಷ್ಠ ಪ್ರಮಾಣದಲ್ಲಿ ಶುಂಠಿ ಆವಕವಾಗುತ್ತಿದೆ. ಇದಕ್ಕಾಗಿ ಕೃಷಿ ಚಟುವಟಿಕೆ ಜತೆಗೆ ಶುಂಠಿ ಸಂಸ್ಕರಣೆಗೆ 15 ಜನರ ಕಾರ್ಮಿಕ ತಂಡವನ್ನು ಕಟ್ಟಿಕೊಂಡು ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ದತ್ತಾತ್ರೇಯ ಹೆಗಡೆ.

--------------

ರಾಸಾಯನಿಕ ಬಳಸಿ ಏಲಕ್ಕಿ ಬೆಳೆದರೆ ನಾಲ್ಕೈದು ಪಟ್ಟು ಹೆಚ್ಚು ಬೆಳೆ ತೆಗೆಯಬಹುದು. ನನಗೆ ಲಾಭಕ್ಕಿಂತ ಸಾವಯವ ಪದ್ಧತಿ ಉಳಿಸುವುದು ಮುಖ್ಯ.

-ದತ್ತಾತ್ರೇಯ ಹೆಗಡೆ ಮಾವಿನಕೊಪ್ಪ, ಏಲಕ್ಕಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT