ದಾನಿಗಳಿಂದ ‘ಸ್ಮಾರ್ಟ್’ ಆದ ಸರ್ಕಾರಿ ಶಾಲೆ

7
ಇಂಗ್ಲಿಷ್‌ನಲ್ಲೂ ಚುರುಕಿನ ವಿದ್ಯಾರ್ಥಿಗಳು; ಮಾದರಿಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ದಾನಿಗಳಿಂದ ‘ಸ್ಮಾರ್ಟ್’ ಆದ ಸರ್ಕಾರಿ ಶಾಲೆ

Published:
Updated:
Deccan Herald

ಕಾರವಾರ: ಖಾಸಗಿ ಶಾಲೆಗಳಲ್ಲೂ ಬೆರಳಣಿಕೆಯಲ್ಲಿರುವ ‘ಸ್ಮಾರ್ಟ್‌ ಕ್ಲಾಸ್’ ಸೌಲಭ್ಯವನ್ನು ಅಳವಡಿಸಿಕೊಳ್ಳುವ ಮೂಲಕ ನಗರದ ಬಝಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ತಾಲ್ಲೂಕಿನಲ್ಲೇ ವಿಶೇಷತೆ ಮೆರೆದಿದೆ.

ಶಾಲೆಯ ಶಿಕ್ಷಕರು, ಪಾಲಕರು ಸೇರಿದಂತೆ ಒಟ್ಟು 16 ಮಂದಿ ದಾನಿಗಳಿಂದಾಗಿ ಶಾಲೆಯು ‘ಸ್ಮಾರ್ಟ್‌’ ಆಗಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಶಾಲೆಯಲ್ಲಿನ ಇಂಗ್ಲಿಷ್ ಭಾಷೆಯ ಶಿಕ್ಷಣ ಕೂಡ ಅತ್ಯುತ್ತಮವಾಗಿದ್ದು, ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇಲ್ಲ ಎಂದೆನಿಸಿಕೊಂಡಿದೆ.

₹ 2 ಲಕ್ಷ ಖರ್ಚು: ‘ಸ್ಮಾರ್ಟ್‌ ಕ್ಲಾಸ್‌ ಕೊಠಡಿ ಸಿದ್ಧಪಡಿಸಲು ಸುಮಾರು ₹ 2 ಲಕ್ಷ ಖರ್ಚು ಮಾಡಲಾಗಿದೆ. ಇವೆಲ್ಲವೂ ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ. ಪ್ರಮುಖವಾಗಿ ಬೆಂಗಳೂರಿನ ಅಚಲ ಭಾರತಿ ಸಂಸ್ಥೆ ಹಾಗೂ ಅಮದಳ್ಳಿಯ ಪ್ರೇಮಾಶ್ರಮ ಟ್ರಸ್ಟ್‌ನವರು ₹ 1.28 ಲಕ್ಷ ಮೌಲ್ಯದ ಸ್ಮಾರ್ಟ್‌ ಕ್ಲಾಸ್‌ ಸಾಮಗ್ರಿಗಳನ್ನು ನೀಡಿದ್ದಾರೆ. ಅದು, ಪ್ರಾಜೆಕ್ಟರ್, ಪರದೆ, ಕಂಪ್ಯೂಟರ್, ಧ್ವನಿವರ್ಧಕಗಳನ್ನು ಒಳಗೊಂಡಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ರೋಡ್ರಿಗಸ್ ತಿಳಿಸಿದರು.

‘ಒಂದರಿಂದ ಏಳನೇ ತರಗತಿಯವರೆಗಿನ ಎಲ್ಲ ಮಕ್ಕಳಿಗೂ ‘ಸ್ಮಾರ್ಟ್‌ ಕ್ಲಾಸ್’ ಒದಗಿಸಲಾಗುತ್ತಿದೆ. ಒಂದರಿಂದ ಮೂರನೇ ತಗತಿಯ ವಿದ್ಯಾರ್ಥಿಗಳಿಗೆ ಸಾಮಾನ್ಯ ಕನ್ನಡ, ಇಂಗ್ಲಿಷ್, ಗಣಿತ ಪಾಠಗಳ, ನಾಲ್ಕನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್ ಹಾಗೂ ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ‘ಸ್ಮಾರ್ಟ್‌ ಕ್ಲಾಸ್’ ಮೂಲಕ ಬೋಧಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಮನಸ್ಸಿನಲ್ಲಿ ಉಳಿಯುವ ಪಾಠಗಳು’

‘ಸ್ಮಾರ್ಟ್ ಕ್ಲಾಸ್’ಗಳಲ್ಲಿ ಮಕ್ಕಳು ವಿಷಯಗಳನ್ನು ಬಹುಬೇಗ ಗ್ರಹಿಸುತ್ತಾರೆ. ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರಿಕರಿಸುವುದರಿಂದ ಪಠ್ಯದ ವಿಷಯಗಳು ದೀರ್ಘವಾಗಿ ಅವರ ಮನಸ್ಸಿನಲ್ಲಿ ಉಳಿಯುತ್ತವೆ. ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಶಿಕ್ಷಕರು ಉದಾಹರಣೆಗಳ ಮೂಲಕ ಪರದೆಯ ಮೇಲೆ ತೋರಿಸುವುದರಿಂದ ಗೊಂದಲಗಳು ಉಂಟಾಗುವುದೂ ಕಡಿಮೆ. ಪ್ರಮುಖವಾಗಿ, ವಿದ್ಯಾರ್ಥಿಗಳು ಪರದೆಯನ್ನು ಬಿಟ್ಟು ತಮ್ಮ ಗಮನವನ್ನು ಬೇರೆ ಎಲ್ಲಿಯೂ ಹರಿಸುವುದಿಲ್ಲ ಎನ್ನುತ್ತಾರೆ ಶಿಕ್ಷಕರು.

 ಸಿಇಒ ಎಂ.ರೋಶನ್ ಮೆಚ್ಚುಗೆ

ಶಾಲೆಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಸ್ಮಾರ್ಟ್‌ ಕ್ಲಾಸ್‌ ಅಳವಡಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಗೋಡೆಗಳಿಗೆ ಬಳಿದಿರುವ ಬಣ್ಣಗಳಿಗೆ ಮನಸೋತ ಅವರು, ತರಗತಿಯಲ್ಲಿ ಕುಳಿತು ಸ್ಮಾರ್ಟ್‌ ಪರದೆಯ ಮೂಲಕ ಪಾಠ ಕೇಳಿದರು. ವಿದ್ಯಾರ್ಥಿಗಳೊಂದಿಗೆ ಅಕ್ಷರಾಭ್ಯಾಸ ಕೂಡ ಮಾಡಿದರು.

ಖಾಸಗಿ ಅಥವಾ ಇಂಗ್ಲಿಷ್ ಶಾಲೆಗಳಿಂದಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರಣದಿಂದ ‘ಸ್ಮಾರ್ಟ್‌ ಕ್ಲಾಸ್’ ಯೋಜನೆಯನ್ನು ದಾನಿಗಳ ನೆರವಿನಿಂದ ಸಾಕಾರಗೊಳಿಸಿದೆವು.
ಐರಿನ್ ರೋಡ್ರಿಗಸ್, ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ

ಮೊದಲಿಗಿಂತ ಈಗ ಹೆಚ್ಚಿನ ಪಾಠಗಳು ನೆನಪಿನಲ್ಲಿ ಉಳಿಯುತ್ತಿವೆ. ಜತೆಗೆ, ಕಂಪ್ಯೂಟರ್ ಬಳಕೆಯನ್ನೂ ಶಾಲೆಯಲ್ಲಿ ಈಗಿನಿಂದಲೇ ರೂಢಿಸುತ್ತಿದ್ದಾರೆ.
ರಕ್ಷಿತ್ ಹರಪನಹಳ್ಳಿ, 7ನೇ ತರಗತಿ ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !